ಬೆಂಗಳೂರು : ದೇಶವ್ಯಾಪಿ ಮುಂಗಾರು ಕುಂಠಿತವಾಗಿದ್ದು, ಕರ್ನಾಟಕ ಸೇರಿದಂತೆ 17 ರಾಜ್ಯಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ರಾಜ್ಯದಲ್ಲಿ ಜೂನ್ ತಿಂಗಳಲ್ಲಿ 25 ಜಿಲ್ಲೆಗಳ 87 ತಾಲೂಕುಗಳಲ್ಲಿ ಮಳೆ ಕೊರತೆ ಉಂಟಾಗಿದೆ.
ಈ ಬಾರಿ ದಕ್ಷಿಣ ಭಾರತದ ರಾಜ್ಯಗಳೇ ಅತಿ ಹೆಚ್ಚು ಮಳೆ ಕೊರತೆ ಎದುರಿಸುತ್ತಿದೆ. ದಕ್ಷಿಣ ಭಾರತದಲ್ಲಿ 45% ರಷ್ಟು ಮುಂಗಾರಿನ ಕೊರತೆಯಾಗಿದೆ. ವಾಯುವ್ಯ ಭಾರತದ ರಾಜ್ಯಗಳನ್ನು ಹೊರತುಪಡಿಸಿದರೆ ಉಳಿದೆಲ್ಲಾ ಕಡೆ ಮುಂಗಾರು ಕೈಕೊಟ್ಟಿದೆ. ಆದರೆ ವಾಯುವ್ಯದಲ್ಲಿ ವಾಡಿಕೆಗಿಂತ 42% ರಷ್ಟು ಅಧಿಕ ಮಳೆಯಾಗಿದೆ.
ಮಧ್ಯ ಭಾರತದಲ್ಲಿ 6%, ದಕ್ಷಿಣ ಭಾರತದಲ್ಲಿ 45%, ಪೂರ್ವ ಮತ್ತು ಈಶಾನ್ಯ ರಾಜ್ಯಗಳಲ್ಲಿ 18% ರಷ್ಟು ಕಡಿಮೆ ಮಳೆಯಾಗಿದೆ. ದಕ್ಷಿಣ ರಾಜ್ಯಗಳಲ್ಲಿ ವಾಡಿಕೆಯಂತೆ 161 ಮಿ.ಮಿ ಮಳೆಯಾಗಬೇಕಿತ್ತು. ಆದರೆ ಈ ಬಾರಿ ಕೇವಲ 88 ಮಿ.ಮಿ ಮಳೆಯಷ್ಟೇ ದಾಖಲಾಗಿದೆ. ದಕ್ಷಿಣ ರಾಜ್ಯಗಳ ಪೈಕಿ ಕೇರಳದಲ್ಲಿ ಈ ಬಾರಿ 70% ರಷ್ಟು ವಾಡಿಕೆಗಿಂತ ಕಡಿಮೆ ಮಳೆಯಾಗಿದೆ.