ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಕ್ಕೆ ಪ್ರವಾಸ ಬೆಳೆಸಿದ 65 ಗಂಟೆಗಳಲ್ಲಿ 20 ಸಭೆಯಲ್ಲಿ ಭಾಗವಹಿಸಿದ್ದಾರೆ. ಅದರ ಜತೆ ವಿಮಾನ ಪ್ರಯಾಣದ ವೇಳೆ ನಾಲ್ಕು ಸಭೆ ನಡೆಸಿದ್ದಾರೆ. ಈ ಬಗ್ಗೆ ಕೇಂದ್ರ ಸರ್ಕಾರದ ಅಧಿಕಾರಿಗಳು ಭಾನುವಾರ ಮಾಹಿತಿ ನೀಡಿದ್ದಾರೆ.
ನವದೆಹಲಿಯಿಂದ ಬುಧವಾರ ಅಮೆರಿಕಕ್ಕೆ ವಿಮಾನದಲ್ಲಿ ಪ್ರಯಾಣಿಸುವಾಗ 2 ಸಭೆ ನಡೆಸಿ, ಅಮೆರಿಕದಲ್ಲಿ ಹೋಟೆಲ್ನಲ್ಲಿ 3 ಸಭೆ ನಡೆಸಿದ್ದಾರೆ. ಸೆ.23ರಂದು ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಜೊತೆಗೆ ಸಭೆ, ಜಪಾನ್ ಮತ್ತು ಆಸ್ಟ್ರೇಲಿಯಾ ಪ್ರತಿನಿಧಿಗಳ ಜತೆ ಎರಡು ದ್ವಿಪಕ್ಷೀಯ ಸಭೆ ಹಾಗೂ ವಿವಿಧ ಸಂಸ್ಥೆಗಳ ಸಿಇಒ ಜೊತೆಗೆ 5 ಸಭೆ ನಡೆಸಿದ್ದಾರೆ. ಅದರೊಂದಿಗೆ 3 ಆಂತರಿಕ ಸಭೆಗಳಲ್ಲಿ ಭಾಗವಹಿಸಿದ್ದಾರೆ. ಸೆ.24ರಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರೊಂದಿಗೆ ಸಭೆ, ಕ್ವಾಡ್ ಸಭೆ ಹಾಗೂ 4 ಆಂತರಿಕ ಸಭೆ ನಡೆಸಿದ್ದಾರೆ. ಸೆ.25ರಂದು ಭಾರತಕ್ಕೆ ವಾಪಸಾಗುವಾಗ ವಿಮಾನದಲ್ಲಿಯೇ ಕುಳಿತು 2 ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಪ್ರಮುಖ ರಾಷ್ಟ್ರದ ಮಾನ್ಯತೆ
ಪ್ರಧಾನಿ ನರೇಂದ್ರ ಮೋದಿಯವರು ವಿಶ್ವದ ರಾಷ್ಟ್ರಗಳ ಪೈಕಿ ಭಾರತಕ್ಕೆ ಮಹತ್ವದ ಸ್ಥಾನ ಕಲ್ಪಿಸಿಕೊಟ್ಟಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರಧಾನಿಯವರಿಗೆ ಅಭಿನಂದನೆ ಸಲ್ಲಿಸಲು ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಭಾರತವನ್ನು ಜಗತ್ತಿನಲ್ಲಿ ಪ್ರಮುಖ ರಾಷ್ಟ್ರಗಳ ಸಾಲಿಗೆ ಸೇರಲು ಕಾರಣರಾದ ಪ್ರಧಾನಿ ನರೇಂದ್ರ ಮೋದಿ ಜಗತ್ತಿನ ನಾಯಕ ಎಂದು ಬಣ್ಣಿಸಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಉಪಾಧ್ಯಕ್ಷೆ ಕಮಲಾ ಹ್ಯಾರಿಸ್, ಕ್ವಾಡ್ ರಾಷ್ಟ್ರಗಳ ಮುಖಂಡರ ಜತೆಗೆ ಸಭೆಯನ್ನೂ ನಡೆಸಿದ್ದಾರೆ ಎಂದರು. ಅದ್ಧೂರಿ ಸ್ವಾಗತ
ಮೂರು ದಿನಗಳ ಅಮೆರಿಕ ಪ್ರವಾಸ ಮುಗಿಸಿ ಭಾರತಕ್ಕೆ ವಾಪಸಾದ ಪ್ರಧಾನಿ ನರೇಂದ್ರ ಮೋದಿಯವರನ್ನು ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ಉಪಾಧ್ಯಕ್ಷ ವಿರೇಂದ್ರ ಸಚ್ದೇವ್, ಮುಖ್ಯ ಕಾರ್ಯದರ್ಶಿ ಅರುಣ್ ಸಿಂಗ್, ಕೇಂದ್ರ ಸಚಿವ ರಾಜನಾಥ್ ಸಿಂಗ್, ಮಾಜಿ ಸಚಿವ ಹರ್ಷ ವರ್ಧನ್ ಸೇರಿದಂತೆ ಪ್ರಮುಖರಿದ್ದರು. ಬಿಡುವಿಲ್ಲದ ಕಾರ್ಯಕ್ರಮಗಳೇ ಗುಟ್ಟು
ನಿರಂತರವಾಗಿ ಪ್ರಯಾಣ, ಸಭೆ ನಡೆಸುವ ಪ್ರಧಾನಿ ಮೋದಿಯವರಿಗೆ ಆಯಾಸ ಆಗುವುದಿಲ್ಲವೇ ಎನ್ನುವುದು ಹಲವರ ಅಚ್ಚರಿ. ಈ ಕೌತುಕಕ್ಕೆ ಹಿರಿಯ ಅಧಿಕಾರಿಗಳು ಪರಿಹಾರವನ್ನೂ ನೀಡಿದ್ದಾರೆ. ಆಯಾಸವಾದಂತೆ ತಡೆಯುವ ನಿಟ್ಟಿನಲ್ಲಿ ಪ್ರಧಾನಿಯವರು ನಿರಂತರವಾಗಿ ಸಭೆ, ಪರಾಮರ್ಶೆಗಳನ್ನು ನಡೆಸುತ್ತಾರೆ ಎಂದು ಹೇಳಿದ್ದಾರೆ. 1990ರ ದಶಕದಲ್ಲಿ ಮೋದಿಯವರು ಪದೇ ಪದೆ ಅಮೆರಿಕಕ್ಕೆ ಭೇಟಿ ನೀಡುತ್ತಿದ್ದ ವೇಳೆ ವಿಮಾನಯಾನ ಸಂಸ್ಥೆಯೊಂದು ಅವರಿಗೆ ಟಿಕೆಟ್ನಲ್ಲಿ ರಿಯಾಯಿತಿ ನೀಡಿ, ತಿಂಗಳ ಪಾಸ್ ಅನ್ನೂ ನೀಡಿತ್ತು.