ನವದೆಹಲಿ : ದಿಲ್ಲಿ ಹಾಗೂ ಸುತ್ತಲಿನ ರಾಜಧಾನಿ ವಲಯದಲ್ಲಿ ಏಕಾಏಕಿ ಕೋವಿಡ್ ಸಂಖ್ಯೆ ಏರಿಕೆ ಆಗತೊಡಗಿದೆ.
ಇದು ದೇಶಕ್ಕೆ ಮುನ್ನೆಚ್ಚರಿಕೆಯಂತಿದೆ. ಸೋಂಕು ಏರಿಕೆಗೆ ಹೆಚ್ಚು ಸೋಂಕುಕಾರಕವಾಗಿರುವ ಇತ್ತೀಚಿನ ಕೋವಿಡ್ ತಳಿಯಾದ ಎಕ್ಸ್ಇ ಕಾರಣವೆ ಅಥವಾ ಇನ್ನಾವುದೋ ಹೊಸ ಕೋವಿಡ್ ತಳಿ ಕಾರಣವೇ ಎಂಬುದರ ಪತ್ತೆಗೆ ಸರ್ಕಾರ ಮುಂದಾಗಿದೆ.
ಹೀಗಾಗಿ ಕೋವಿಡ್ ಸೋಂಕಿತರ ಸ್ಯಾಂಪಲ್ಗಳನ್ನು ಜೀನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಗೆ ಕಳಿಸಲಾಗಿದೆ. ಇನ್ನೊಂದು ವಾರದಲ್ಲಿ ಇದರ ವರದಿ ಬರುವ ನಿರೀಕ್ಷೆಯಿದೆ.
ದಿಲ್ಲಿಯಲ್ಲಿ ಕಳೆದ 1 ವಾರದಿಂದ ಕೋವಿಡ್ ಏರುತ್ತಿದೆ. ಮಂಗಳವಾರ ಇತ್ತೀಚಿನ ತಿಂಗಳಲ್ಲೇ ಗರಿಷ್ಠ ಎನ್ನಬಹುದಾದ 642 ಪ್ರಕರಣ ವರದಿಯಾಗಿದ್ದು, ಪಾಸಿಟಿವಿಟಿ ದರ ಶೇ.4.4ರಷ್ಟುದಾಖಲಾಗಿದೆ. ಈ ಹಿಂದೆ ಗುಜರಾತ್ನಲ್ಲಿ ಎಕ್ಸ್ಇ ತಳಿ ಪತ್ತೆಯಾಗಿದ್ದರೂ ಅಲ್ಲಿ ಸೋಂಕು ವ್ಯಾಪಿಸಿರಲಿಲ್ಲ.
ಆದರೆ ದಿಲ್ಲಿ ಹಾಗೂ ರಾಜಧಾನಿ ವಲಯದಲ್ಲಿ ಮಾತ್ರ ಸೋಂಕು ದಿಢೀರ್ ವ್ಯಾಪಿಸುತ್ತಿದೆ. ಹೀಗಾಗಿ ಇದು ಹೊಸ ತಳಿಯ ಕೊರೋನಾ ವೈರಾಣುವೇ ಎಂಬ ಅನುಮಾನಕ್ಕೆ ಕಾರಣವಾಗಿದೆ. ಸೀಕ್ವೆನ್ಸಿಂಗ್ ವರದಿ ಬಂದ ಬಳಿಕ ಈ ಅನುಮಾನಕ್ಕೆ ಪರಿಹಾರ ಸಿಗಲಿದೆ.