NPS ಕನಿಷ್ಠ ಪಿಂಚಣಿ ಖಾತರಿ ಸೌಲಭ್ಯ: ಹೊಸಬರು, ಚಂದಾದಾರರಿಗೆ ಸಿಹಿ ಸುದ್ದಿ
ಗುರುವಾರ, 19 ಆಗಸ್ಟ್ 2021 (09:50 IST)
ನವದೆಹಲಿ: ರಾಷ್ಟ್ರೀಯ ಪಿಂಚಣಿ ಯೋಜನೆ ಅಡಿಯಲ್ಲಿ ಶೀಘ್ರದಲ್ಲೇ ಕನಿಷ್ಠ ಪಿಂಚಣಿ ಸೌಲಭ್ಯ ದೊರೆಯಲಿದೆ. ಪಿಂಚಣಿ ನಿಧಿ ನಿಯಂತ್ರಕ ಮತ್ತು ಅಭಿವೃದ್ಧಿ ಪ್ರಾಧಿಕಾರದ(PFRDA) ವತಿಯಿಂದ NPA ಚಂದಾದಾರರಿಗೆ ಕನಿಷ್ಠ ಪಿಂಚಣಿ ಸೌಲಭ್ಯ ಯೋಜನೆ ಪ್ರಕಟಿಸಲಾಗುವುದು.
ಯೋಜನೆ ಸಿದ್ಧಪಡಿಸುವ ಕುರಿತಂತೆ ಪ್ರಾಧಿಕಾರದಿಂದ ಬಿಡ್ ಗಳನ್ನು ಆಹ್ವಾನಿಸಲಾಗಿದ್ದು, ಹಾಲಿ ಚಂದಾದಾರರು ಮತ್ತು ಹೊಸಬರಿಗೆ ಈ ಸೌಲಭ್ಯ ಸಿಗಲಿದೆ. ಕನಿಷ್ಠ ಪಿಂಚಣಿ ಸೌಲಭ್ಯ ಕಲ್ಪಿಸಿದರೆ, ರಾಷ್ಟ್ರೀಯ ಪಿಂಚಣಿ ಯೋಜನೆ ಇನ್ನಷ್ಟು ಆಕರ್ಷಕವಾಗಲಿದೆ. ಅಲ್ಲದೆ ಕನಿಷ್ಠ ಮತ್ತು ಗರಿಷ್ಠ ಹೂಡಿಕೆಯ ಮಿತಿಯನ್ನು ಪರಿಷ್ಕರಿಸಬಹುದಾಗಿದೆ ಎಂದು ಹೇಳಲಾಗಿದೆ.
ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ಸುಮಾರು 30 ಲಕ್ಷದಷ್ಟು ಚಂದಾದಾರರು 97,000 ಕೋಟಿ ರೂ. ಬಂಡವಾಳ ಹೊಂದಿದ್ದಾರೆನ್ನಲಾಗಿದೆ.