ಓಮಿಕ್ರಾನ್ ಆತಂಕ: ಜಾರಿಗೊಳ್ಳುತ್ತಾ ಕಠಿಣ ನಿರ್ಬಂಧ?

ಸೋಮವಾರ, 29 ನವೆಂಬರ್ 2021 (16:01 IST)
ಬೆಂಗಳೂರು : ರಾಜ್ಯದಲ್ಲಿ ಓಮಿಕ್ರಾನ್ ಆತಂಕ ತೀವ್ರಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದ್ದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಮಂಗಳವಾರ ತಜ್ಞರ ಜೊತೆ ಸಭೆ ನಡೆಸಲಿದ್ದಾರೆ.
ಈಗಾಗಲೇ ದಕ್ಷಿಣ ಆಫ್ರಿಕಾ, ಜರ್ಮನಿ, ಆಸ್ಟ್ರೇಲಿಯಾ, ಯು.ಕೆ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಓಮಿಕ್ರಾನ್ ವೈರಾಣು ಕಾಣಿಸಿಕೊಂಡಿದೆ. ಅತ್ಯಂತ ವೇಗವಾಗಿ ಹರಡುವ ವೈರಾಣು ಇದಾಗಿರುವುದರಿಂದ ಸಹಜವಾಗಿ ಆತಂಕ ಸೃಷ್ಟಿಯಾಗಿದೆ.
ಈ ನಿಟ್ಟಿನಲ್ಲಿ ರಾಜ್ಯದಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. ಸಂಶೋಧಕರ ಪ್ರಕಾರ ಕೋವಿಡ್-19 ಹೊಸ ತಳಿ B.1.1.529 ಲಸಿಕೆ ಚಿಕಿತ್ಸೆ ಹಾಗೂ ಇತ್ಯಾದಿಗಳಿಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಲಸಿಕೆಗಳ ವಿರುದ್ಧ ಇದರ ಕಾರ್ಯ ಬೇರೆಯ ರೀತಿ ಕಂಡುಬಂದಿರುತ್ತದೆ. ಆದರೆ ಹೊಸದಾಗಿ ಈ ವೈರಾಣು ಪತ್ತೆಯಾಗಿರುವ ಕಾರಣದಿಂದ ಇದರ ಬಗ್ಗೆ ಮತ್ತಷ್ಟು ಅಧ್ಯಯನದ ಅಗತ್ಯತೆ ಇದೆ.
ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಕೈಗೊಳ್ಳಬೇಕಾಗಿರುವ ಮುನ್ನೆಚ್ಚರಿಕೆ ಕ್ರಮಗಳ ಕುರಿತಾಗಿ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಅವರು ತಜ್ಞರ ಜೊತೆ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಕೈಗೊಳ್ಳಬೇಕಾಗಿರುವ ಮುನ್ನೆಚ್ಚರಿಕಾ ಕ್ರಮಗಳು ಹಾಗೂ ನಿರ್ಬಂಧಗಳ ಅಗತ್ಯತೆಯ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಮಂಗಳವಾರದ ಸಭೆ ಮಹತ್ವಪಡೆದುಕೊಂಡಿದೆ.
ತಜ್ಞರ ಅಭಿಪ್ರಾಯವನ್ನು ಆಧರಿಸಿ ಕೆಲವೊಂದು ನಿರ್ಬಂಧಗಳನ್ನು ಹೇರುವ ಸಾಧ್ಯತೆ ಇದೆ. ಸದ್ಯ ಲಾಕ್ಡೌನ್ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳದೆ ಇದ್ದರೂ, ವಿಮಾನ ನಿಲ್ದಾಣಗಳಲ್ಲಿ ಕಠಿಣ ತಪಾಸಣೆ, ಗಡಿ ಜಿಲ್ಲೆಗಳಲ್ಲಿ ನಿರ್ಬಂಧಗಳು ಹಾಗೂ ಕಡ್ಡಾಯ ಮಾಸ್ಕ್ ಮತ್ತು ಸಾಮಾಜಿಕ ಅಂತರ ಪಾಲನೆ ಮಾಡುವ ನಿಟ್ಟಿನಲ್ಲಿ ಸಭೆಯಲ್ಲಿ ಚರ್ಚೆ ನಡೆಯಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ