ಶಾಲೆಗಳಿಗೆ ರಜೆ ಕೊಡಲ್ಲ!: ನಾಗೇಶ್

ಸೋಮವಾರ, 29 ನವೆಂಬರ್ 2021 (15:27 IST)
ತುಮಕೂರು : ರಾಜ್ಯದಲ್ಲಿ ಕೆಲವು ಕಡೆ ವಿದ್ಯಾರ್ಥಿಗಳಲ್ಲಿ ಕೊರೊನಾ ಸ್ಫೋಟಗೊಂಡ ಹಿನ್ನಲೆಯಲ್ಲಿ ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ಪಾಲಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಸರ್ಕಾರ ಮಕ್ಕಳ ಶಿಕ್ಷಣಕ್ಕೆ ನೀಡಿರುವ ಆದ್ಯತೆಯನ್ನು ಅವರ ಆರೋಗ್ಯದ ಬಗ್ಗೆಯೂ ನೀಡುತ್ತಿದ್ಧೇವೆ. ಹೀಗಾಗಿ, ಪಾಲಕರು ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗುವುದು ಬೇಡ ಎಂದು ಸಚಿವ ಬಿ. ಸಿ. ನಾಗೇಶ್ ಮನವಿ ಮಾಡಿಕೊಂಡಿದ್ದಾರೆ.
ತುಮಕೂರು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಬಿ. ಸಿ. ನಾಗೇಶ್, ರಾಜ್ಯದ ಎರಡು ಮೂರು ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ ಪಾಸಿಟಿವ್ ಬಂದಿವೆ. ಮುಖ್ಯವಾಗಿ ಧಾರವಾಡದ ಎಸ್ ಡಿ ಎಂ ಕಾಲೇಜು ಹಾಗೂ ಬೆಂಗಳೂರಿನ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಹಾಗೂ ಮೈಸೂರಿನ ಪಿಯು ಕಾಲೇಜಿನ 5 ಮಕ್ಕಳಿಗೆ ಪಾಸಿಟಿವ್ ಬಂದಿವೆ.
ಪ್ರೌಢ ಮತ್ತು ಪ್ರಾಥಮಿಕ ಶಿಕ್ಷಣ ಪಡೆಯತ್ತಿರುವ 42 ಸಾವಿರ ಮಕ್ಕಳಲ್ಲಿ ಯಾವುದೇ ಪಾಸಿಟಿವ್ ಪ್ರಕರಣಗಳು ಕಂಡು ಬಂದಿಲ್ಲ. ಹೀಗಾಗಿ, ಯಾವುದೇ ಭಯ ಬೇಡ. ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ಕೂಡ ನಡೆದಿದೆ. ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರತಿ ಗಂಟೆ ಹಾಗೂ ಅರ್ಧ ಗಂಟೆಗೊಮ್ಮೆ ಶಾಲೆಗಳಿಂದ ಮಾಹಿತಿ ಪಡೆದುಕೊಳ್ಳುವಂತೆ ಉಪ ನಿರ್ದೇಶಕರಿಗೆ ಸೂಚನೆಯನ್ನು ನೀಡಲಾಗಿದೆ ಎಂದರು.
ಅಲ್ಲದೆ, ಶಾಲಾ ಅವಧಿಯಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸಂಪೂರ್ಣ ಮಾಸ್ಕ್ ಧರಿಸಲು ಕ್ರಮ ಕೈಗೊಳ್ಳಲಾಗಿದೆ. ಈಗ ಸದ್ಯದ ಮಟ್ಟಿಗೆ ಯಾವುದೇ ಶಾಲಾ ಕಾಲೇಜುಗಳಿಗೆ ರಜೆ ನೀಡುವುದಿಲ್ಲ. ತರಗತಿಗಳು ನಡೆಯುತ್ತವೆ. ತಾಂತ್ರಿಕ ಸಲಹಾ ಸಮಿತಿ ಸಲಹೆ ಮೇರೆಗೆ ಮುಂದೆ ಏನಾದರೂ ಕ್ರಮ ಕೈಗೊಳ್ಳಬೇಕಾದರೆ ತೆಗೆದುಕೊಳ್ಳುತ್ತೇವೆ ಎಂದು ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ಹೇಳಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ