ವಾಹನಗಳ ಓಡಾಟಕ್ಕೆ ನಿರ್ಬಂಧದ ಮೇರೆಗೆ ಅನುಮತಿ !

ಶನಿವಾರ, 23 ಜುಲೈ 2022 (09:24 IST)
ಹಾಸನ : ಕಳೆದ ಮೂರು ದಿನಗಳಿಂದ ಮಳೆ ಸಂಪೂರ್ಣ ಬಿಡುವು ನೀಡಿದ ಪರಿಣಾಮ ಕುಸಿತಗೊಂಡಿದ್ದ ಶಿರಾಢಿ ಘಾಟ್ ರಸ್ತೆ ದುರಸ್ತಿ ಕಾರ್ಯ ಮಾಡಲಾಗುತ್ತಿದೆ.

ಇಂದು ಮಧ್ಯಾಹ್ನದಿಂದ ಮತ್ತೆ ವಾಹನಗಳ ಸಂಚಾರ ಆರಂಭವಾಗಿದೆ. ಲಘು ವಾಹನಗಳು, ಕಾರು, ಸಾರಿಗೆ ಬಸ್ಗಳು ಸೇರಿದಂತೆ ಆರು ಚಕ್ರದ ವಾಹನಗಳು, 20 ಟನ್ ಒಳಗಿನ ವಾಹನಗಳ ಓಡಾಟಕ್ಕೆ ಜಿಲ್ಲಾಧಿಕಾರಿ ಆರ್.ಗಿರೀಶ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅನುಮತಿ ನೀಡಿದ್ದಾರೆ.

ಜಿಲ್ಲೆಯಲ್ಲಿ ಹದಿನೈದು ದಿನಗಳ ಕಾಲ ಸುರಿದ ಭಾರಿ ಮಳೆಗೆ ಸಕಲೇಶಪುರ ತಾಲೂಕಿನ ದೋಣಿಗಾಲ್ ಬಳಿ ಭೂಕುಸಿತ ಹಾಗೂ ರಸ್ತೆ ಕುಸಿತವಾಗಿದ್ದರಿಂದ ಜು.16 ರಂದು ರಾಷ್ಟ್ರೀಯ ಹೆದ್ದಾರಿ 75 ಶಿರಾಡಿ ಘಾಟ್ ರಸ್ತೆಯನ್ನು ಸಂಪೂರ್ಣ ಬಂದ್ ಮಾಡಲಾಗಿತ್ತು.

ಇದರಿಂದಾಗಿ ರಾಜಧಾನಿ ಬೆಂಗಳೂರಿನಿಂದ ಬಂದರು ನಗರಿ ಮಂಗಳೂರಿಗೆ ತೆರಳುವ ಸಾರಿಗೆ ಬಸ್ಗಳು, ಭಾರೀ ವಾಹನಗಳು ಸೇರಿದಂತೆ ಧಾರ್ಮಿಕ ಕ್ಷೇತ್ರಗಳಿಗೆ ತೆರಳುವವರಿಗೆ ತೀವ್ರ ತೊಂದರೆಯುಂಟಾಗಿತ್ತು. 

ಇದೀಗ ಸಂಚಾರ ಪುನರಾರಂಭವಾಗಿರುವುದರಿಂದಾಗಿ ವಾಹನ ಸವಾರರು, ಸಾರ್ವಜನಿಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಆರು ಚಕ್ರ ಮೇಲ್ಪಟ್ಟ ಎಲ್ಲಾ ರೀತಿಯ ಭಾರೀ ವಾಹನಗಳ ಸಂಚಾರಕ್ಕೆ ನಿರ್ಬಂಧ ಮುಂದುವರಿಸಲಾಗಿದೆ.

ದೋಣಿಗಾಲ್ ಬಳಿಯ ಹೆದ್ದಾರಿಯಲ್ಲಿ ಕುಸಿದಿದ್ದ ರಸ್ತೆಯನ್ನು ಗುತ್ತಿಗೆದಾರರು ಶೀಘ್ರಗತಿಯಲ್ಲಿ ದುರಸ್ತಿ ಪಡಿಸುತ್ತಿದ್ದು, ಎಚ್ಹೆಚ್ಎಐ ಅಧಿಕಾರಿಗಳಿಗೆ ಹಾಗೂ ಜಿಲ್ಲಾಧಿಕಾರಿ ಅವರಿಗೆ ರಿಪೋರ್ಟ್ ನೀಡಿದ್ದರು. ಇದನ್ನು ಪರಿಶೀಲಿಸಿ ಆರು ಚಕ್ರದವರೆಗಿನ ಎಲ್ಲಾ ವಾಹನ ಓಡಾಡಲು ಅನುಮತಿ ಕೊಟ್ಟಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ