ಬೆಂಗಳೂರು : ಕೋವಿಡ್ -19 ಸಂಬಂಧ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಇಂದು ಮಹತ್ವದ ಸಭೆ ನಡೆಸಲಾಯಿತು. ಸಭೆಯಲ್ಲಿ ಸಚಿವ ಸುಧಾಕರ್, ಆರೋಗ್ಯ ಇಲಾಖೆಯ ಅಧಿಕಾರಿಗಳು, ಕೊವೀಡ್ ಟಾಸ್ಕ್ ಫೋರ್ಸ್ ಸಮಿತಿ ಸದಸ್ಯರು, ಕಂದಾಯ ಸಚಿವ ಆರ್ ಅಶೋಕ್, ಸರ್ಕಾರದ ಮುಖ್ಯಕಾರ್ಯದರ್ಶಿ ಪಿ ರವಿಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು.
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರು, ಸಿನಿಮಾ ಮಂದಿರಗಳನ್ನು ಕೆಲವು ನಿರ್ಬಂಧಗಳೊಂದಿಗೆ ತೆರೆಯಲು ಅವಕಾಶ ನೀಡಿರುವುದಾಗಿ ತಿಳಿಸಿದರು. ಈ ಮೂಲಕ ಸಿನಿಮಾ ರಂಗದವರಿಗೆ ಹಾಗೂ ಸಿನಿ ಪ್ರಿಯರಿಗೆ ಗುಡ್ ನ್ಯೂಸ್ ನೀಡಿದರು. ಮುಂದುವರೆದು ಮಾತನಾಡಿದ ಸಿಎಂ, ಕೋವಿಡ್ ತಜ್ಞರ ಜೊತೆ ಸಭೆ ಮಾಡಿದ್ದೇವೆ. ಪಾಸಿಟಿವ್ ರೇಟ್ ನಿಯಂತ್ರಣದಲ್ಲಿ ಇದೆ. ಅಕ್ಟೋಬರ್ 1 ರಿಂದ ಸಿನಿಮಾ ಥಿಯೇಟರ್ ಶೇ. 100ರಷ್ಟು ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಶೇ.1 ಕ್ಕಿಂತ ಪಾಸಿಟಿವಿಟಿ ದರ ಜಾಸ್ತಿ ಇರುವ ಜಿಲ್ಲೆಗಳಲ್ಲಿ ಶೇ. 50 ಸೀಟಿಂಗ್ ಅನುಮತಿ ನೀಡಲಾಗಿದೆ. ಶೇ. 2ರಷ್ಟು ಇದ್ದರೆ ಸಿನಿಮಾ ಮಂದಿರಗಳೇ ಸ್ಥಗಿತಗೊಳಿಸಲಾಗುವುದು ಎಂದರು.
ದಸರಾ ಬಗ್ಗೆ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಲಾಗುವುದು. ಗಡಿ ಭಾಗದ ಜಿಲ್ಲೆಗಳಲ್ಲಿ ಮತ್ತಷ್ಟು ಬಿಗಿ ಕ್ರಮ ತೆಗೆದುಕೊಳ್ಳಲಾಗುವುದು. 6-12 ನೇ ತರಗತಿಗಳಿಗೆ ಶೇ. 100 ರಷ್ಟು ಹಾಜರಾತಿಗೆ ಅನುಮತಿ ನೀಡಲಾಗಿದೆ. ಸೋಮವಾರದಿಂದ ಶುಕ್ರವಾರದವರೆಗೆ ಶಾಲಾ ಕಾಲೇಜಿಗೆ ಅನುಮತಿ ನೀಡಲಾಗಿದೆ. ನೈಟ್ ಕರ್ಫ್ಯೂ 10 ರಿಂದ ಆರಂಭ ಆಗಲಿದೆ. ಅಕ್ಟೋಬರ್ 3 ರಿಂದ ಪಬ್ ಗಳಿಗೆ ಅನುಮತಿ ನೀಡಲಾಗಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
ನಾಲ್ಕೈದು ಜಿಲ್ಲೆಗಳನ್ನು ಹೊರತು ಪಡಿಸಿದರೆ ರಾಜ್ಯದಲ್ಲಿ ಒಟ್ಟು ಶೇ. 0.66 ಪಾಸಿಟಿವ್ ದರ ಇದೆ. ಪಬ್ ಗಳಿಗೂ ಇದೇ ಮಾನದಂಡ ಅನುಸರಿಸಲಾಗುವುದು. ಅಕ್ಟೋಬರ್ 3 ರಿಂದ ಪಬ್ ತೆರೆಯಲು ಅವಕಾಶ ನೀಡಲಾಗಿದೆ. ಕನಿಷ್ಠ 1 ಡೋಸ್ ಹಾಕಿಸಿಕೊಂಡವರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಗಡಿ ಭಾಗದಲ್ಲಿ ಹೆಚ್ಚು ನಿಗಾ ವಹಿಸಲು ಸೂಚಿಸಲಾಗಿದೆ. ಯಾದಗಿರಿ, ಮೈಸೂರು, ರಾಯಚೂರು, ಕಲ್ಬುರ್ಗಿಯಲ್ಲಿ ಲಸಿಕೆ ಚುರುಕು ಮಾಡಲು ಕ್ರಮ ತೆಗೆದುಕೊಳ್ಳಲಾಗುವುದು. ಈ ನಾಲ್ಕು ಜಿಲ್ಲೆಗಳಿಗೆ ಸುಧಾಕರ್, ಅಶೋಕ್ ಭೇಟಿ ನೀಡಿ, ಲಸಿಕೆ ಬಗ್ಗೆ ಅಭಿಯಾನ ಮಾಡ್ತಾರೆ. ದೇವಸ್ಥಾನಕ್ಕೆ ಅವಕಾಶ ಸಂಬಂಧ ಅಲ್ಲಿನ ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ. ಅಲ್ಲಿ ಅವರು ಪರಿಸ್ಥಿತಿ ನೋಡಿಕೊಂಡು ದೇವಸ್ಥಾನದ ಬಗ್ಗೆ ನಿರ್ಧಾರ ಮಾಡುತ್ತಾರೆ. ನಾಲ್ಕೈದು ಜಿಲ್ಲೆಗಳಿಗೆ ಮಾತ್ರ ಶೇಕಡ 50ರಷ್ಟು ಅವಕಾಶ ನೀಡಲಾಗಿದ್ದು, ಉಳಿದ 25 ಜಿಲ್ಲೆಗಳಿಗೆ ಶೇ. 100 ರಷ್ಟು ಅವಕಾಶ ನೀಡಲಾಗಿದೆ.
ಮೂರನೇ ಅಲೆಯ ಬಗ್ಗೆ ತಜ್ಞರು ಅಧ್ಯಯನ ಮಾಡುತ್ತಿದ್ದಾರೆ. ಪಕ್ಕದ ರಾಜ್ಯಗಳಿಂದ ಸ್ವಲ್ಪ ಕೊವೀಡ್ ಹೆಚ್ಚಾಗಿದೆ. ಅದಕ್ಕಾಗಿ ಅಲ್ಲಿ ಹೆಚ್ಚು ನಿಗಾ ವಹಿಸಲು ಸೂಚನೆ ನೀಡಿದ್ದೇವೆ. ಮೂರನೇ ಅಲೆಗೆ ಯಾವ ರೀತಿ ಕ್ರಮ ಎಂಬುದನ್ನು ಮುಂದಿನ ಸಭೆಯಲ್ಲಿ ತೀರ್ಮಾನ ಮಾಡ್ತೇವೆ ಎಂದರು.
ಸಭೆಯ ಪ್ರಮುಖಾಂಶಗಳು
ಅಕ್ಟೋಬರ್ 1ರಿಂದ ಶೇ. 100 ರಷ್ಟು ಸಿನಿಮಾ ಮಂದಿರ ಭರ್ತಿಗೆ ಅವಕಾಶ (ಪಾಸಿಟಿವಿಟಿ ದರ ಶೇ.1ಕ್ಕಿಂತ ಕಡಿಮೆ ಇದ್ದರೆ)
• ಶೇಕಡಾ 2 ರಷ್ಟು ಪಾಸಿಟಿವ್ ದರ ಇದ್ದರೆ ಸಿನಿಮಾ ಮಂದಿರಗಳು ಕ್ಲೋಸ್
• ಅಕ್ಟೋಬರ್ 3 ರಿಂದ ಪಬ್ ಆರಂಭ
• ಕನಿಷ್ಟ 1 ಡೋಸ್ ಪಡೆದವರಿಗೆ ಮಾತ್ರ ಅವಕಾಶ
• ಪಬ್ ಹಾಗೂ ಚಿತಮಂದಿರಕ್ಕೆ ಗರ್ಭಿಣಿ ಮಹಿಳೆಯರಿಗೆ ಅವಕಾಶ ಇಲ್ಲ
• ರಾತ್ರಿ ಕರ್ಫ್ಯೂ 9 ರಿಂದ 10 ಕ್ಕೆ ಆರಂಭ
• ದಸರಾ ವಿಶೇಷ ಮಾರ್ಗಸೂಚಿ ಕೊಡಲಾಗುತ್ತೆ
• ದೇವಸ್ಥಾನಗಳಲ್ಲಿ ಸೇವೆ ಆರಂಭಕ್ಕೆ ಜಿಲ್ಲಾಧಿಕಾರಿಗಳ ತೀರ್ಮಾನ
• 4 ರಿಂದ 5 ಜಿಲ್ಲೆಗೆ ಮಾತ್ರ ಶೇ 50 ರಷ್ಟು ಚಿತ್ರಮಂದಿರ ಅವಕಾಶ
• ಗಡಿ ಜಿಲ್ಲೆಗಳ ಮೇಲೆ ತೀವ್ರ ನಿಗಾ ಮುಂದುವರೆಸಲಾಗುತ್ತೆ