ರಾಹುಲ್ ಗಾಂಧಿ ಧ್ವೇಷದ ವ್ಯಾಪಾರಿ: ಸಚಿವ ಪಿಯೂಷ್ ಗೋಯಲ್ ತಿರುಗೇಟು
ಮಂಗಳವಾರ, 24 ಜುಲೈ 2018 (09:07 IST)
ನವದೆಹಲಿ: ದೇಶದಲ್ಲಿ ಹೆಚ್ಚುತ್ತಿರುವ ಥಳಿಸಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಟ್ವಿಟರ್ ಪೇಜ್ ನಲ್ಲಿ ಪ್ರಧಾನಿ ಮೋದಿಯನ್ನು ಹಿಗ್ಗಾಮುಗ್ಗಾ ಟೀಕಿಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಕೇಂದ್ರ ಸಚಿವ ಪಿಯೂಷ್ ಗೋಯಲ್ ತಿರುಗೇಟು ನೀಡಿದ್ದಾರೆ.
ಅಲ್ವಾರ್ ಥಳಿತ ಪ್ರಕರಣದ ಬಗ್ಗೆ ಪ್ರಸ್ತಾಪಿಸಿದ ರಾಹುಲ್, ಸಂತ್ರಸ್ತನನ್ನು 6 ಕಿ.ಮೀ.ದೂರದ ಆಸ್ಪತ್ರೆಗೆ ಕರೆದೊಯ್ಯಲು 3 ತಾಸು ಯಾಕೆ ಬೇಕಾಯಿತು? ಯಾಕೆಂದರೆ ಅವರು ಚಹಾ ಕುಡಿಯುತ್ತಾ ಕೂತಿದ್ದರು. ಇದು ಮೋದಿಯ ನವ ಭಾರತ. ಇಲ್ಲಿ ಮಾನವೀಯತೆ ಬದಲಿಗೆ ಧ್ವೇಷವಿದೆ. ಇಲ್ಲಿ ಜನರನ್ನು ಥಳಿಸಿ ಸಾಯಿಸಲಾಗುತ್ತಿದೆ ಎಂದು ಟ್ವೀಟ್ ಮಾಡಿದ್ದರು.
ರಾಹುಲ್ ಟ್ವೀಟ್ ಗೆ ತಿರುಗೇಟು ನೀಡಿರುವ ಪಿಯೂಷ್ ಗೋಯಲ್, ಚುನಾವಣೆಯ ಲಾಭಕ್ಕೆ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಸಮಾಜ ಒಡೆಯಲು ಯತ್ನಿಸುತ್ತೀರಿ. ನಂತರ ಮೊಸಳೆ ಕಣ್ಣೀರು ಸುರಿಸುತ್ತೀರಿ. ನೀವೊಬ್ಬ ಧ್ವೇಷದ ವ್ಯಾಪಾರಿ ಎಂದಿದ್ದಾರೆ.
ಈ ನಡುವೆ ಥಳಿಸಿ ಹತ್ಯೆ ಪ್ರಕರಣವನ್ನು ಹತ್ತಿಕ್ಕಲು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಮತ್ತು ಗೃಹ ಕಾರ್ಯದರ್ಶಿಗಳ ನೇತೃತ್ವದಲ್ಲಿ 2 ಸಮಿತಿ ರಚನೆ ಮಾಡಲಾಗಿದೆ. ಈ ಸಮಿತಿ ಪ್ರಕರಣಗಳ ವಿವರಗಳನ್ನು ನೇರವಾಗಿ ಪ್ರಧಾನಿ ಮೋದಿಗೆ ನೀಡಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.