ರಾಹುಲ್ ಗಾಂಧಿಗೆ ಪ್ರಧಾನಿ ಮೋದಿ ಕೌಂಟರ್ ಅಟ್ಯಾಕ್ ಕೊಟ್ಟಿದ್ದು ಹೀಗೆ!
ಶನಿವಾರ, 21 ಜುಲೈ 2018 (09:10 IST)
ನವದೆಹಲಿ: ಲೋಕಸಭೆಯಲ್ಲಿ ನಿನ್ನೆ ಆಡಳಿತ ಮತ್ತು ವಿಪಕ್ಷ ನಾಯಕರ ನಡುವಿನ ವಾಕ್ಝರಿ ಜೋರಾಗಿತ್ತು. ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ಮಾಡಿದ ಆರೋಪಗಳಿಗೆ ತಮ್ಮ ಸರದಿ ಬಂದಾಗಿ ಪ್ರಧಾನಿ ಮೋದಿ ತಿರುಗೇಟು ನೀಡಿದರು.
ತಮ್ಮ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿದ ವಿಪಕ್ಷಗಳ ವಿರುದ್ಧ ಲೇವಡಿ ಮಾಡಿದ ಪ್ರಧಾನಿ ಮೋದಿ ಇವರಿಗೆ ಇವರ ಮೇಲೆಯೇ ವಿಶ್ವಾಸವಿಲ್ಲ. ತಮ್ಮ ಮೇಲೆ ವಿಶ್ವಾಸವಿಲ್ಲದವರು ನಮ್ಮ ಮೇಲೆ ಹೇಗೆ ವಿಶ್ವಾಸವಿರಿಸಲು ಸಾಧ್ಯ? ಎಂದಿದ್ದಾರೆ.
ಅಷ್ಟೇ ಅಲ್ಲ, ರಾಹುಲ್ ತಾವು ಮಾತನಾಡಿದರೆ ಭೂಕಂಪವಾಗುತ್ತದೆ ಎಂದಿದ್ದಕ್ಕೆ ವ್ಯಂಗ್ಯವಾಗಿ ತಿರುಗೇಟು ನೀಡಿರುವ ಪ್ರಧಾನಿ ನೋಡಿ ಈಗ ಆಕಾಶ ಕೆಳಗೆ ಬಿತ್ತಾ? ಭೂಕಂಪ ಆಯ್ತಾ ಎಂದು ಪ್ರಶ್ನಿಸಿದ್ದಾರೆ.
ಕೆಲವರಿಗೆ ಅವಿಶ್ವಾಸ ಗೊತ್ತುವಳಿ ಮಂಡಿಸುವ ಮೊದಲೇ ನನ್ನನ್ನು ಕುರ್ಚಿಯಿಂದ ಏಳಿಸಲು ಅವಸರವಾಗುತ್ತಿದೆ. ಪ್ರಧಾನಿ ಕುರ್ಚಿಯ ಬಳಿ ಬಂದು ನನ್ನನ್ನು ಏಳು ಎಂದರು. ಅವರಿಗೆ ನನ್ನನ್ನು ಕೆಳಗಿಳಿಸುವ ಉತ್ಸಾಹ ಭಾರೀ ಇದೆ. ಅಷ್ಟೊಂದು ಆತುರ ಏಕೆ ಎಂದು ರಾಹುಲ್ ಗಾಂಧಿ ‘ಅಪ್ಪುಗೆ’ ಎಪಿಸೋಡ್ ಗೆ ತಿರುಗೇಟು ನೀಡಿದರು.
ಇನ್ನು ತಮ್ಮ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡುವ ಧೈರ್ಯ ಮೋದಿಗಿಲ್ಲ ಎಂದ ರಾಹುಲ್ ಗಾಂಧಿಗೆ ನಿಮ್ಮ ಕಣ್ಣಲ್ಲಿ ಕಣ್ಣಿಟ್ಟು ನೋಡಲು ನನಗೆ ಧೈರ್ಯವಿಲ್ಲ. ಯಾಕೆಂದರೆ ನಿಮ್ಮ ಕಣ್ಣಲ್ಲಿ ಕಣ್ಣಿಟ್ಟು ನೋಡಿದ ಅಂಬೇಡ್ಕರ್, ಸರ್ದಾರ್ ವಲ್ಲಭಾಯಿ ಪಟೇಲ್, ಸುಭಾಷ್ ಚಂದ್ರ ಬೋಸ್, ಚಂದ್ರಶೇಖರ್, ಅಷ್ಟೇ ಏಕೆ ಪ್ರಣಬ್ ಮುಖರ್ಜಿಯವರಿಗೆ ನೀವು ಏನು ಮಾಡಿದ್ದೀರಿ ಎಂದು ಎಲ್ಲರಿಗೂ ಗೊತ್ತಿದೆ ಎಂದು ಲೇವಡಿ ಮಾಡಿದರು.
ಪದೇ ಪದೇ ರಫೇಲ್ ರಕ್ಷಣಾ ಒಪ್ಪಂದದಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸುವ ರಾಹುಲ್ ಗಾಂಧಿಗೆ ತಿರುಗೇಟು ನೀಡಿದ ಪ್ರಧಾನಿ ಇದು ಯಾವುದೋ ಕಂಪನಿ ನಡುವೆ ನಡೆದ ಒಪ್ಪಂದವಲ್ಲ. ಎರಡು ದೇಶಗಳ ಜವಾಬ್ಧಾರಿಯುತ ಸರ್ಕಾರಗಳ ನಡುವೆ ನಡೆದ ಒಪ್ಪಂದ. ಸರಿಯಾದ ಮಾಹಿತಿ ಇಲ್ಲದೇ ದೇಶದ ರಕ್ಷಣಾ ವಿಚಾರಗಳ ಬಗ್ಗೆ ಮಾಹಿತಿ ಕೊಡಿ ಎಂದು ಕೇಳುವುದು, ಇದರ ಬಗ್ಗೆ ತಪ್ಪು ಮಾಹಿತಿ ನೀಡುವುದು ದುರದೃಷ್ಟಕರ ಎಂದರು. ಅಂತೂ ಪ್ರಧಾನಿ ಮೋದಿ ತಮ್ಮ ಭಾಷಣದುದ್ದಕ್ಕೂ ವಿಪಕ್ಷಗಳಿಗೆ ಚಾಟಿ ಬೀಸಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.