ನೇತ್ರದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದರು ನಟ ಪುನೀತ್ ರಾಜ್ ಕುಮಾರ್.
ಈ ಮೂಲಕ ಲಕ್ಷಾಂತರ ಜನರಿಗೆ ಪ್ರೇರಣೆಯೂ ಆಗಿದ್ದರು. ಹಾಗಾಗಿ ಪುನೀತ್ ರಾಜ್ ಕುಮಾರ್ ಅವರನ್ನು ನಮ್ಮ ದೃಷ್ಟಿ ನಮ್ಮ ಕರ್ನಾಟಕ ಅರಿವು ಅಭಿಯಾನದ ರಾಯಭಾರಿಯನ್ನಾಗಿ ಮಾಡಲಾಗಿದೆ. ಮಂಗಳವಾರವಷ್ಟೇ ಈ ವಿಷಯವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಘೋಷಿಸಿದ್ದಾರೆ.
ಆರೋಗ್ಯ ಇಲಾಖೆ, ಡಾ.ರಾಜ್ ಕುಮಾರ್ ಟ್ರಸ್ಟ್ ಮತ್ತು ಎಸ್ಸಿರ್ಲಾ ವಿಷನ್ ಪ್ರತಿಷ್ಠಾನದ ಸಂಯುಕ್ತ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಿಎಂ ಬಸವರಾಜ್ ಬೊಮ್ಮಾಯಿ, ನಮ್ಮ ದೃಷ್ಟಿ ನಮ್ಮ ಕರ್ನಾಟಕ ಅಭಿಯಾನಕ್ಕೆ ಚಾಲನೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಪುನೀತ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಕೂಡ ಭಾಗಿಯಾಗಿದ್ದರು. ಈ ಅಭಿಯಾನದ ಕುರಿತು ಸುದೀರ್ಘ ಟ್ವಿಟ್ ಮಾಡಿರುವ ಅಶ್ವಿನಿ, ಇದು ಡಾ|| ಪುನೀತ್ ಅವರ ಸಾಮಾಜಿಕ ಕಳಕಳಿ, ಅವಕಾಶ ವಂಚಿತರಿಗೆ ದೃಷ್ಟಿಯನ್ನು ಕಲ್ಪಿಸುವ ಸಲುವಾಗಿ ಇದ್ದ ಬದ್ಧತೆ,
ದೂರದೃಷ್ಠಿತ ಹಾಗೂ ನಿಷ್ಠೆಗೆ ನಾವು ಸಲ್ಲಿಸುವ ಭಾವಪೂರ್ಣ ಗೌರವ. ಡಾ|| ರಾಜ್ಕುಮಾರ್ ಟ್ರಸ್ಟ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಎಸ್ಸಿಲಾರ್ ವಿಷನ್ ಪ್ರತಿಷ್ಠಾನ ಇವರ ಸಹಭಾಗಿತ್ವದಲ್ಲಿ ನಮ್ಮ ದೃಷ್ಟಿ – ನಮ್ಮ ಕರ್ನಾಟಕ ಅರಿವು ಅಭಿಯಾನವನ್ನು ನೆನ್ನೆ ಕಾರ್ಯಾರಂಭ ಮಾಡಲಾಯಿತು ಎಂದು ಬರೆದುಕೊಂಡಿದ್ದಾರೆ.