ರಾಜ್ಯದಲ್ಲಿ ಇನ್ನೂ 4 ದಿನ ಮಳೆ ಸಾಧ್ಯತೆ

ಗುರುವಾರ, 2 ಸೆಪ್ಟಂಬರ್ 2021 (12:50 IST)
ಬೆಂಗಳೂರು(ಸೆ.2) : ರಾಜ್ಯದಲ್ಲಿ ಇನ್ನೂ ನಾಲ್ಕು ದಿನಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಕರಾವಳಿ, ಮಲೆನಾಡು, ದಕ್ಷಿಣ ಮಲೆನಾಡಿನಲ್ಲಿ ಮಳೆಯಾಗುತ್ತಿದ್ದು, ಇಂದಿನಿಂದ ಸೆ.5ರ ವರೆಗೆ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.

ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ಹಾಸನ, ಕೊಡಗು, ರಾಮನಗರ, ತುಮಕೂರು, ಕೋಲಾರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಸೆ.5ರ ವರೆಗೆ ಮಳೆ ಮುಂದುವರಿಯಲಿದೆ.ಬೆಂಗಳೂರಿನಲ್ಲಿ ನಿನ್ನೆಯಿಂದ ಮಳೆ ಪ್ರಮಾಣ ಹೆಚ್ಚಾಗಿದ್ದು, ಹಲವೆಡೆ ವರುಣನ ಆರ್ಭಟ ಜೋರಾಗಿತ್ತು. ನಿನ್ನೆ ಸಂಜೆ ನಗರದ ವಿವಿಧೆಡೆ ಸುರಿದ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿತ್ತು.
ಜಯನಗರ, ಚಾಮರಾಜಪೇಟೆ, ಜೆಪಿ ನಗರ, ಮಹದೇವಪುರ, ಕೋರಮಂಗಲ, ಮಹಾಲಕ್ಷ್ಮಿ ಲೇಔಟ್, ವೈಟ್ಫೀಲ್ಡ್, ವಿಜಯನಗರ, ಹನುಮಂತನಗರ ವಿವಿಧ ಕಡೆಗಳಲ್ಲಿ ಮಳೆ ಸುರಿಯಿತು. ಇಂದು ಕೂಡ ಮೋಡ ಕವಿದ ವಾತಾವರಣವಿದ್ದು, ಸಂಜೆ ವೇಳೆಗೆ ಸಿಲಿಕಾನ್ ಸಿಟಿಯಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರಾವಳಿ ಭಾಗದಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ನಾಳೆಯಿಂದ 5ರ ವರೆಗೆ ಮಳೆ ಪ್ರಮಾಣ ಹೆಚ್ಚಾಗಲಿದೆ. ಜುಲೈನಲ್ಲಿ ವರುಣನ ಆರ್ಭಟಕ್ಕೆ ಮಲೆನಾಡು, ಕರಾವಳಿ, ಉತ್ತರ ಕರ್ನಾಟಕ ಜನ ತತ್ತರಿಸಿ ಹೋಗಿದ್ದರು. ಈಗ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ಮತ್ತೆ ಮಳೆರಾಯನ ಆರ್ಭಟ ಶುರುವಾಗಿದೆ. ಸೆಪ್ಟೆಂಬರ್ನಲ್ಲಿ ಸಾಮಾನ್ಯಕ್ಕಿಂತ ಅಧಿಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ