ಬೆಂಗಳೂರು, ಸೆ 25 : "ರಾಜ್ಯದಲ್ಲಿ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿದ್ದು, ಇದರಿಂದಾಗಿ ರಾಜ್ಯಾದ್ಯಂತ ರಾತ್ರಿ ಕರ್ಫ್ಯೂನಲ್ಲಿ ಸಡಿಲಿಕೆ ಮಾಡಲಾಗಿದೆ," ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದರು.
"ಅದೇ ರೀತಿ ಅಕ್ಟೋಬರ್ 1ರಿಂದ ಸಿನಿಮಾ ಮಂದಿರಗಳಲ್ಲಿ ಹೌಸ್ಫುಲ್ಗೆ ಅನುಮತಿ ನೀಡಲಾಗುತ್ತಿದೆ," ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
"ಕೋವಿಡ್ ಸಲಹಾ ಸಮಿತಿ ಅಧಿಕಾರಿಗಳೊಂದಿಗೆ ಜೊತೆಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದಿನಿಂದ ರಾಜ್ಯದಲ್ಲಿ ನೈಟ್ ಕರ್ಫ್ಯೂ ಅವಧಿಯನ್ನು ರಾತ್ರಿ 10ರಿಂದ ಬೆಳಗ್ಗಿನ ಜಾವ 5ರವರೆಗೆ ನಿಗದಿಗೊಳಿಸಲಾಗಿದೆ."
"ಅಕ್ಟೋಬರ್ 3ರಿಂದ ಪಬ್ ಹಾಗೂ ಕ್ಲಬ್ಗಳಿಗೆ ಅನುಮತಿ ನೀಡಲಾಗುತ್ತದೆ. ರಾಜ್ಯದಲ್ಲಿ ಪ್ರಸ್ತುತ ಕೋವಿಡ್ ಪಾಸಿಟಿವಿಟಿ ಸರಾಸರಿ ದರ ಶೇ.0.66 ಇದೆ. ಅಕ್ಟೋಬರ್ 1ರಿಂದ ಕೋವಿಡ್ ಪಾಸಿಟಿವ್ ದರ ಶೇ.1ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಶೇ.100ರಷ್ಟು ಸೀಟು ಭರ್ತಿಗೆ ಅವಕಾಶ ನೀಡಲಾಗುವುದು."
"ಪಾಸಿಟಿವಿಟಿ ದರ ಶೇ.1ಕ್ಕಿಂತ ಜಾಸ್ತಿ ಆದರೆ ಶೇ.50ರಷ್ಟು ಸೀಟು ಭರ್ತಿ ಹಾಗೂ ಶೇ.2ಕ್ಕಿಂತ ಜಾಸ್ತಿಯಾದರೆ ಚಿತ್ರಮಂದಿರ ಬಂದ್ ಮಾಡಲಾಗುವುದು. ಇದೇ ಮಾನದಂಡ ಪಬ್ಗಳಿಗೂ ಅನ್ವಯವಾಗಲಿದೆ," ಎಂದು ಸಿಎಂ ಮಾಹಿತಿ ನೀಡಿದರು.
ಕನಿಷ್ಠ 1 ಡೋಸ್ ಲಸಿಕೆ ಹಾಕಿಸಿಕೊಂಡವರಿಗೆ ಮಾತ್ರ ಪ್ರವೇಶ ಅವಕಾಶ ನೀಡಲಾಗುವುದು. ಗರ್ಭಿಣಿಯರು ಮತ್ತು ಮಕ್ಕಳಿಗೆ ಅವಕಾಶ ನೀಡದಿರಲು ಸಭೆಯಲ್ಲಿ ನಿರ್ಧರಿಸಲಾಯಿತು.