ಸೆ.27ರಂದು ವಿವಿಧ ಕಾಮಗಾರಿಗೆ ಚಾಲನೆ

ಶುಕ್ರವಾರ, 24 ಸೆಪ್ಟಂಬರ್ 2021 (10:54 IST)
ಹಾವೇರಿ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೆ.27ರಂದು ಶಿಗ್ಗಾವಿ ಕ್ಷೇತ್ರದ ವಿವಿಧ ಇಲಾಖೆಗಳ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಕೋವಿಡ್ ಮಾರ್ಗಸೂಚಿ ಪಾಲನೆ ಮಾಡಿ ಶಿಷ್ಟಾಚಾರದಂತೆ ಕಾರ್ಯಕ್ರಮ ಸಿದ್ಧತೆ ಮಾಡಿಕೊಳ್ಳುವಂತೆ ಇಲಾಖಾ ಅಧಿಕಾರಿಗಳಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ ಸೂಚನೆ ನೀಡಿದರು.
ಮುಖ್ಯಮಂತ್ರಿ ಪ್ರವಾಸದ ಹಿನ್ನೆಲೆಯಲ್ಲಿ ಪೂರ್ವ ಸಿದ್ಧತೆಗಾಗಿ ಗುರುವಾರ ಶಿಗ್ಗಾವಿ ತಹಶೀಲ್ದಾರ್ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದ ಅವರು, ಶಿಗ್ಗಾವಿ ಕ್ಷೇತ್ರ ವ್ಯಾಪ್ತಿಯ ಮೂರು ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಎರಡು ಕಾಮಗಾರಿಗಳ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ತಿಳಿಸಿದರು.
ಶಿಗ್ಗಾಂವ ಗಂಜಿಗಟ್ಟಿ, ಶಿಶುವಿನಹಾಳ ಹಾಗೂ ಹುಲಗೂರ ಗ್ರಾಮದಲ್ಲಿ ಆಯೋಜಿತವಾಗಿರುವ ವಿವಿಧ ಕಾರ್ಯಕ್ರಮಗಳಲ್ಲಿ ಮುಖ್ಯಮಂತ್ರಿ ಭಾಗವಹಿಸಲಿದ್ದಾರೆ. ಶಿಗ್ಗಾವಿ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಆಕ್ಸಿಜನ್ ನೂತನ ಘಟಕದ ಉದ್ಘಾಟನೆ ಹಾಗೂ ಹುಲಗೂರ ಗ್ರಾಮದಲ್ಲಿ ಕೃಷಿ ಇಲಾಖೆಯ ಬಾಡಿಗೆ ಯಂತ್ರೋಪಕರಣಗಳ ಕೇಂದ್ರ ಮತ್ತು 100 ಮೆಟ್ರಿಕ್ ಟನ್ ಸಾಮರ್ಥ್ಯದ ನೂತನ ಗೋದಾಮು ಉದ್ಘಾಟನೆ ನೆರವೇರಿಸುವರು.
ಗಂಜಿಗಟ್ಟಿ ಗ್ರಾಮದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ನಿರ್ಮಾಣದ ಕುರುಬರ ಸಂಘದ ಸಮುದಾಯ ಭವನ ಹಾಗೂ ವಸತಿ ನಿಲಯ, ಶಿಶುವಿನಹಾಳ ಗ್ರಾಮದಲ್ಲಿ ಸಾಂಸ್ಕೃತಿಕ ಭವನ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಹುಲಗೂರ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ವ್ಯವಸಹಾಯ ಸೇವಾ ಸಂಘ ಏರ್ಪಡಿಸಿರುವ ರೈತರ ತರಬೇತಿ ಕೇಂದ್ರ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಸರಳವಾಗಿ ಕೋವಿಡ್ ಮಾರ್ಗಸೂಚಿಯಂತೆ ಆಯೋಜಿಸಬೇಕು. ಸಾರ್ವಜನಿಕ ಸಮಾರಂಭಕ್ಕೆ ಹಾಗೂ ನಿಗದಿಗಿಂತ ಹೆಚ್ಚು ಜನರು ಗುಂಪುಗೂಡಲು ಅವಕಾಶವಿರುವುದಿಲ್ಲ. ಬೃಹತ್ ವೇದಿಕೆ, ಆಸನ ವ್ಯವಸ್ಥೆ ಮಾಡಬಾರದು. ಈ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ