ಕೋಲಾರ : ಟೊಮೆಟೋ ಬೆಳೆ ಅಂದರೆ ಅದು ಕೆಂಪು ಚಿನ್ನದ ವಹಿವಾಟು, ಇನ್ನೊಂದು ಅರ್ಥದಲ್ಲಿ ಟೊಮೆಟೋ ಬೆಳೆಯೋದು ಜೂಜು ಎನ್ನಲಾಗುತ್ತದೆ.
ಆ ಬೆಳೆಯನ್ನು ನಂಬಿದ ಅದೆಷ್ಟೋ ರೈತರು ಕೈತುಂಬಾ ಹಣ ನೋಡಿದವರಿದ್ದಾರೆ, ಅಷ್ಟೇ ಮಂದಿ ಕೈಸುಟ್ಟುಕೊಂಡವರೂ ಇದ್ದಾರೆ. ಚಿನ್ನದ ನಾಡು ಕೋಲಾರದಲ್ಲಿ ಕೆಜಿಎಫ್ ಚಿನ್ನದ ಗಣಿ ಬಿಟ್ಟರೆ ಕೆಂಪು ಚಿನ್ನ ಎಂದು ಕರೆಯಲ್ಪಡುವ ಟೊಮೆಟೋ ಬೆಳೆ ಕೂಡ ಇಲ್ಲಿಯ ಜನರಿಗೆ ಒಂದು ಪ್ರಮುಖ ಬೆಳೆ.
ಜಿಲ್ಲೆಯೊಂದರಲ್ಲಿಯೇ ಅಂದಾಜು 46 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಟೊಮೆಟೋವನ್ನು ಬೆಳೆಯುತ್ತಾರೆ. ಬೇರೆ ಯಾವ ಜಿಲ್ಲೆಯಲ್ಲಿಯೂ ಬೆಳೆಯದಷ್ಟು ಟೊಮೆಟೋ ಇಲ್ಲಿಯ ರೈತರು ಬೆಳೆಯುತ್ತಾರೆ. ಇದಕ್ಕೆ ಕೋಲಾರದಲ್ಲಿ ಇರುವ ಎಪಿಎಂಸಿ ಮಾರುಕಟ್ಟೆ ಪ್ರಮುಖವಾಗಿದೆ.
ಸಾವಿರಾರು ಸಂಖ್ಯೆಯಲ್ಲಿ ರೈತರು ತಾವು ಬೆಳೆದ ಟೊಮೆಟೋವನ್ನು ನಗರದ ಎಪಿಎಂಸಿ ಮಾರುಕಟ್ಟೆಗೆ ತರುತ್ತಾರೆ. ಆದರೆ ಕಳೆದ ತಿಂಗಳಲ್ಲಿ 15 ಕೆಜಿಯ ಒಂದು ಕ್ರೇಟ್ ಟೊಮೆಟೋ ಬೆಲೆ ಒಂದು ಸಾವಿರ ದಾಟಿತ್ತು. ಕೊರೊನಾ ಮತ್ತು ಅತಿಯಾದ ಮಳೆ ಬಳಿಕ ಕೆಲ ರೈತರು ಟೊಮೆಟೋ ಬೆಳೆಯಲ್ಲಿ ಕೈತುಂಬಾ ಹಣ ನೋಡಿದ್ದರು.
ಆದರೆ ಒಂದೇ ತಿಂಗಳ ಅಂತರದಲ್ಲಿ ಈಗ ಅದರ ಬೆಲೆ ಪಾತಾಳಕ್ಕೆ ಕುಸಿದಿದೆ. ಇದು ರೈತರಲ್ಲಿ ಆತಂಕಕ್ಕೆ ಕಾರಣವಾಗಿದ್ದು, 15 ಕೆಜಿಯ ಟೊಮೆಟೋ ಬಾಕ್ಸ್ 10 ರೂಪಾಯಿಂದ 100 ರೂಪಾಯಿಗೆ ಮಾರಾಟವಾಗುತ್ತಿದೆ. ಅಂದರೆ ಒಂದು ಕೆಜಿ ಟೊಮೆಟೋ ಬೆಲೆ ಕೇವಲ ಎರಡು ರೂಪಾಯಿಯಿಂದ ಆರಂಭವಾಗುತ್ತಿದೆ .
ಒಟ್ಟಿನಲ್ಲಿ ಟೊಮೆಟೋ ಬೆಳೆಯೇ ಹಾಗೇ ಒಂಥರಾ ಜೂಜಾಟದಂತೆ ಅಪರೂಪಕ್ಕೆ ಒಮ್ಮೆ ಕೆಂಪು ಚಿನ್ನದಲ್ಲಿ ಹಣ ಸಂಪಾದನೆಯಾದರೆ ಅತೀ ಹೆಚ್ವು ಸಲ ಬೆಲೆ ಕುಸಿತವೇ ಕಾಣಬೇಕಿದೆ. ಹೀಗಾಗಿ ಸರ್ಕಾರ ಕೂಡ ಟೊಮೆಟೋ ಬೆಳೆಗಾರ ಸಹಾಯಕ್ಕೆ ಬರಬೇಕು, ಟೊಮೆಟೋ ನಿಗಮ ಅಥವಾ ಮಂಡಳಿ ಸ್ಥಾಪನೆ ಮಾಡಬೇಕು ಎಂಬ ಕೂಗು ಹೆಚ್ಚಾಗಿದೆ.