ದಿಲ್ಲಿಯಲ್ಲಿ ಎರಡು ದಿನ ಲಾಕ್ಡೌನ್!

ಶನಿವಾರ, 20 ನವೆಂಬರ್ 2021 (10:06 IST)
ಹೊಸದಿಲ್ಲಿ : ದಿಲ್ಲಿಯಲ್ಲಿ ಕ್ಷೀಣಿಸುತ್ತಿರುವ ಗಾಳಿ ಗುಣಮಟ್ಟದ ಕಾರಣದಿಂದ ಜನರು ಮನೆಯ ಒಳಗೆ ಇದ್ದರೂ ಮಾಸ್ಕ್ ಧರಿಸುವಂತೆ ಆಗಿದೆ ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ವಿ ರಮಣ ಶನಿವಾರ ಹೇಳಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ ಉಂಟಾಗುತ್ತಿರುವ ವಾಯು ಮಾಲಿನ್ಯ ಹೆಚ್ಚಳದ ಕುರಿತಾದ ಅರ್ಜಿ ವಿಚಾರಣೆ ವೇಳೆ ದಿಲ್ಲಿಯ ಖೇದಕರ ಸ್ಥಿತಿಯ ಬಗ್ಗೆ ಸಿಜೆಐ ಕಳವಳ ವ್ಯಕ್ತಪಡಿಸಿದ್ದಾರೆ.
ನಗರದ ಗಾಳಿ ಗುಣಮಟ್ಟ ಸುಧಾರಿಸಲು ತುರ್ತು ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಬಗ್ಗೆ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿರುವ ಸಿಜೆಐ ಎನ್ವಿ ರಮಣ, 'ತುರ್ತು ಕ್ರಮಗಳನ್ನು ತೆಗೆದುಕೊಳ್ಳಲು ನೀವು ಯಾವ ರೀತಿ ಯೋಜನೆ ರೂಪಿಸಿದ್ದೀರಿ ಎಂದು ಹೇಳುತ್ತೀರಾ? ಎರಡು ದಿನಗಳ ಲಾಕ್ಡೌನ್? ಗಾಳಿ ಗುಣಮಟ್ಟ ಸೂಚ್ಯಂಕ (ಎಕ್ಯೂಐ) ಮಟ್ಟವನ್ನು ತಗ್ಗಿಸಲು ನಿಮ್ಮ ತಕ್ಷಣದ ಆಲೋಚನೆಗಳೇನು?' ಎಂದು ಕೇಳಿದ್ದಾರೆ.
'ಪರಿಸ್ಥಿತಿ ಎಷ್ಟು ವಿಕೋಪಕ್ಕೆ ತೆರಳಿದೆ ಎನ್ನುವುದನ್ನು ನೀವು ನೋಡುತ್ತಿದ್ದೀರಿ.. ನಮ್ಮ ಮನೆಗಳಲ್ಲಿ ಕೂಡ ನಾವು ಮಾಸ್ಕ್ ಧರಿಸುತ್ತಿದ್ದೇವೆ' ಎಂದು ಸಿಜೆಐ ಹೇಳಿದ್ದಾರೆ.
ಕೃಷಿ ತ್ಯಾಜ್ಯಗಳನ್ನು ಸುಡುವುದನ್ನು ತಡೆಯಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಭರವಸೆ ನೀಡಿದ ಕೇಂದ್ರ ಸರ್ಕಾರ, ಇದರ ಹೊಣೆಯನ್ನು ಪಂಜಾಬ್ ಮೇಲೆ ಹೊರಿಸಿದೆ. 'ನಾವು ಕೂಳೆಯ ಸುಡುವಿಕೆಯನ್ನು ತಡೆಯಲು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಆದರೆ ಕಳೆದ ಐದಾರು ದಿನಗಳಿಂದ ಉಂಟಾಗುತ್ತಿರುವ ವಾಯುಮಾಲಿನ್ಯವು ಪಂಜಾಬ್ನಲ್ಲಿ ಕೂಳೆಗಳನ್ನು ಸುಡುತ್ತಿರುವುದರಿಂದ ಉಂಟಾಗುತ್ತಿದೆ. ರಾಜ್ಯ ಸರ್ಕಾರವು ಕೃಷಿ ಭೂಮಿಗಳಲ್ಲಿನ ಈ ಚಟುವಟಿಕೆಯನ್ನು ತಡೆಯುವ ಅಗತ್ಯವಿದೆ' ಎಂದು ಸರ್ಕಾರ ಹೇಳಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ