ವಿವಿಧ ಜಿಲ್ಲೆಗಳಲ್ಲಿ ಇನ್ನೂ ಎರಡು ದಿನ ಮಳೆ

ಸೋಮವಾರ, 6 ಸೆಪ್ಟಂಬರ್ 2021 (10:27 IST)
ಬೆಂಗಳೂರು, ಸೆ 06 :  ಬಂಗಾಳಕೊಲ್ಲಿ ಉಂಟಾದ ವಾಯುಭಾರ ಕುಸಿತದ ಪರಿಣಾಮ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಸೆಪ್ಟೆಂಬರ್ 5 ಮತ್ತು 6ರಂದು ಮಳೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕಲ್ಯಾಣ ಕರ್ನಾಟಕ, ಕರಾವಳಿ, ಮಲೆನಾಡು ಭಾಗಗಳಲ್ಲಿ ಎರಡು ದಿನಗಳ ಕಾಲ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ವಾಯುಭಾಗ ಕುಸಿತದಿಂದಾಗಿ ಮಳೆ ಸುರಿಯುತ್ತಿದ್ದು, ಮಳೆ ಇನ್ನೂ ಸಹ ಮುಂದುವೆಯಲಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿಯೂ ಆಗಾಗ ಮಳೆ ಸುರಿಯುತ್ತಿದೆ. ನಗರದಲ್ಲಿ ಮೋಡ ಕವಿದ ವಾತಾವರಣವಿದೆ. ಇನ್ನೂ ಕೆಲವು ದಿನಗಳ ಕಾಲ ನಗರದಲ್ಲಿ ಇದೇ ಹವಾಮಾನ ಇರಲಿದೆ ಎಂದು ಮಾಹಿತಿ ನೀಡಲಾಗಿದೆ.
ರಾಜ್ಯದ ದಕ್ಷಿಣ ಒಳನಾಡು, ಕರಾವಳಿ, ಮಲೆನಾಡು ಭಾಗದಲ್ಲಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಬೆಂಗಳೂರು ವಿಭಾಗದ ನಿರ್ದೇಶಕ ಸಿ. ಎಸ್. ಪಾಟೀಲ್ ಹೇಳಿದ್ದಾರೆ. ಭಾನುವಾರವೂ ಬೆಂಗಳೂರು ನಗರದಲ್ಲಿ ಮೋಡ ಕವಿದ ವಾತಾವರಣವಿದ್ದು, ತಂಪಾದ ಗಾಳಿ ಬೀಸುತ್ತಿದೆ.
ವಿಜಯಪುರದಲ್ಲಿ ಮಳೆ ಕಡಿಮೆಯಾಗಿತ್ತು. ಈಗ ಪುನಃ ಮಳೆ ಆರಂಭವಾಗಿದೆ. ಮಳೆಯಿಂದಾಗಿ ರೈತರು ಸಂತಸಗೊಂಡಿದ್ದು, ಒಣಗಿದ್ದ ಬೆಳೆಗಳಿಗೆ ಮಳೆ ಆಸರೆಯಾಗಿದೆ. ಬೀದರ್ ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ ಬೆಳೆಗಳಿಗೆ ಹಾನಿಯಾಗಿದೆ.
ಬೀದರ್ನಲ್ಲಿ ಸುಮಾರು 2 ಗಂಟೆಗಳ ಕಾಲ ಮಳೆ ಸುರಿದಿದ್ದು, ಪತ್ತೆಪೂರ್ ಗ್ರಾಮದ ಸೇತುವೆ ಮೇಲೆ ನೀರು ಹರಿದಿದ್ದರಿಂದ ಸೇತುವೆ ಜಲಾವೃತವಾಗಿವೆ. ಬೀದರ್ ಜಿಲ್ಲೆಯಲ್ಲಿ ಮಳೆ ಮುಂದುವರೆಯುವ ಸಾಧ್ಯತೆ ಇದ್ದು, ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಚಿಕ್ಕಮಗಳೂರು, ದಕ್ಷಿಣ ಕನ್ನಡದಲ್ಲಿ ಸಾಧಾರಣ ಮಳೆ ಸುರಿದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯಿಂದಾಗಿ ಒಂದು ಮನೆಗೆ ಹಾನಿಯಾಗಿದೆ. ಉಡುಪಿ ಜಿಲ್ಲೆಯಲ್ಲಿಯೂ ಮಳೆಯಾಗಿದ್ದು, ಹೆಬ್ರಿಯಲ್ಲಿ 19.7 ಸೆಂ. ಮೀ. ಮಳೆಯಾಗಿದೆ.
ಕೊಡಗು ಜಿಲ್ಲೆಯಲ್ಲಿ ಶುಕ್ರವಾರ ಮತ್ತು ಶನಿವಾರ ಬಿರುಸಿನಿಂದ ಮಳೆಯಾಗಿದೆ. ಮಡಿಕೇರಿ, ತಲಕಾವೇರಿ, ಭಾಗಮಂಡಲದಲ್ಲಿ ಮಳೆಯಾಗಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ಕೆಆರ್ಎಸ್ ಜಲಾಶಯಕ್ಕೆ 9,525 ಕ್ಯುಸೆಕ್ ಒಳಹರಿವು ಇದೆ. 124 ಅಡಿ ಎತ್ತರದ ಜಲಾಶಯದಲ್ಲಿ 116.40 ಅಡಿ ನೀರಿನ ಸಂಗ್ರಹವಿದೆ.
ಬಾಗಲಕೋಟೆ ಜಿಲ್ಲೆಯ ಕಲಾದಗಿ, ಉತ್ತರ ಕನ್ನಡ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಮಳೆಯಾಗಿದೆ. ಬಂಗಾಳಕೊಲ್ಲಿ ಉಂಟಾದ ವಾಯುಭಾರ ಕುಸಿತದ ಪರಿಣಾಮ ವಿವಿಧ ಜಿಲ್ಲೆಗಳಲ್ಲಿ ಎರಡು ದಿನಗಳ ಕಾಲ ಮಳೆ ಮುಂದುವರೆಯಲಿದೆ.
ಹಾಸನ ಜಿಲ್ಲೆಯಲ್ಲಿ ಸೆಪ್ಟೆಂಬರ್ 3ರಂದು ದಾಖಲೆಯ ಮಳೆ ಸುರಿದಿದೆ. ಜಿಲ್ಲೆಯ ಹಾಸನ ತಾಲ್ಲೂಕಿನ ಕಸಬಾ 10.4 ಮಿ.ಮೀ, ಶಾಂತಿಗ್ರಾಮ 11.2 ಮಿ.ಮೀ, ಗೊರೂರು 8.5 ಮಿ.ಮೀ, ಕಟ್ಟಾಯ 28.8 ಮಿ.ಮೀ, ಸಾಲಗಾಮೆ 8.2 ಮಿ.ಮೀ, ದುದ್ದ 6.4 ಮಿ.ಮೀ, ಮಳೆಯಾಗಿದೆ.
ಸಕಲೇಶಪುರ ತಾಲ್ಲೂಕಿನ ಬಾಳ್ಳುಪೇಟೆ 7.4 ಮಿ.ಮೀ, ಹಾನುಬಾಳು 3.8 ಮಿ.ಮೀ, ಎಸಳೂರು 22.1 ಮಿ.ಮೀ, ಮಾರನಹಳ್ಳಿ 7.2 ಮಿ.ಮೀ, ಶುಕ್ರವಾರಸಂತೆ 6.2 ಮಿ.ಮೀ, ಹೊಸೂರು 7.2ಮಿ.ಮೀ, ಹೆತ್ತೂರು 15.2 ಮಿ.ಮೀ, ಸಕಲೇಶಪುರ 3.4 ಮಿ.ಮೀ ಮಳೆಯಾಗಿರುವ ಮಾಹಿತಿ ಲಭ್ಯವಾಗಿದೆ.
ಕೇಂದ್ರ ತಂಡದ ಭೇಟಿ; ಸೆಪ್ಟಂಬರ್ 5 ಭಾನುವಾರ ಧಾರವಾಡ ಜಿಲ್ಲೆಗೆ ಕೇಂದ್ರ ಸರ್ಕಾರದ ಅತಿವೃಷ್ಟಿ ಅಧ್ಯಯನ ತಂಡ ಭೇಟಿ ನೀಡಲಿದೆ. ಜಿಲ್ಲೆಯ ಅಳ್ನಾವರ, ಧಾರವಾಡ ನಗರ ಹಾಗೂ ನವಲಗುಂದ ತಾಲೂಕಿನಲ್ಲಿ ಹಾನಿಗೊಳಗಾದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ.
ಭಾರತ ಸರ್ಕಾರದ ಜಲಶಕ್ತಿ ಮಂತ್ರಾಲಯದ ಅಧೀಕ್ಷಕ ಇಂಜಿನಿಯರ್ ಗುರುಪ್ರಸಾದ ಜೆ., ಕೇಂದ್ರ ಹಣಕಾಸು ಮಂತ್ರಾಲಯದ ಉಪಕಾರ್ಯದರ್ಶಿ ಮಹೇಶಕುಮಾರ್ ಅವರನ್ನು ಒಳಗೊಂಡ ಅಂತರ್ ಸಚಿವಾಲಯ ಅಧ್ಯಯನ ತಂಡವು ವಿವಿಧ ಸ್ಥಳಗಳಿಗೆ ಭೇಟಿ ನೀಡಲಿದ್ದು, ಬಳಿಕ ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಆಗಿರುವ ಹಾನಿಯ ಕುರಿತು ಮಾಹಿತಿ ಪಡೆಯಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ