ಬೆಂಗಳೂರು : ಕರ್ನಾಟಕ ವಿಧಾನಸಭಾ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದ್ದು, ಇಂದಿನಿಂದಲೇ ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಗೆ ಬಂದಿದೆ. ಮೇ 10 ಕ್ಕೆ ಮತದಾನ ಹಾಗೂ ಮೇ 13 ಕ್ಕೆ ಮತ ಎಣಿಕೆಗೆ ದಿನಾಂಕ ನಿಗದಿಯಾಗಿದೆ.
ಕೇಂದ್ರ ಚುನಾವಣಾ ಆಯೋಗ ರಾಜ್ಯದಲ್ಲಿ ಚುನಾವಣೆ ಘೋಷಣೆ ಮಾಡ್ತಿದ್ದಂತೆ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಕೂಡ ಸುದ್ದಿಗೋಷ್ಠಿ ಮಾಡಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಯಾವ ರೀತಿ ಸಿದ್ಧತೆ ಆಗಿದೆ ಎಂಬ ಬಗ್ಗೆ ವಿವರಣೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಚುನಾವಣೆ ಕರ್ತವ್ಯ ನಿರ್ವಹಣೆ ಮಾಡಲು 78 ಸಾವಿರ ಸಿಬ್ಬಂದಿ ಅಗತ್ಯವಿದ್ದು, ಈಗಾಗಲೇ 48 ಸಾವಿರ ಸಿಬ್ಬಂದಿ ನಿಯೋಜನೆ ಮಾಡಿಕೊಳ್ಳಲಾಗಿದೆ. ಈ ಬಾರಿ ಹೊಸ ಇವಿಎಂ ಬಳಕೆ ಮಾಡಲಾಗುತ್ತಿದೆ. ಎಲ್ಲ ಮತಗಟ್ಟೆಗಳಿಗೆ ಹೊಸ ಇವಿಎಂ ನೀಡಲಾಗುವುದು ಎಂದು ಆಯುಕ್ತರು ಚುನಾವಣಾ ಸಿದ್ಧತೆ ಬಗ್ಗೆ ವಿವರಣೆ ನೀಡಿದ್ದಾರೆ.
ಬೆಂಗಳೂರು ಜಿಲ್ಲಾ ಚುನಾವಣಾ ಅಧಿಕಾರಿ ಹಾಗೂ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಸುದ್ದಿಗೋಷ್ಠಿ ನಡೆಸಿದರು. ಈಗಾಗಲೇ ಚುನಾವಣೆಗೆ ಬೇಕಾದ ತಂಡದ ರಚನೆ ಆಗಿದೆ. ಶಿಕ್ಷಣ ಇಲಾಖೆ, ಸಾರಿಗೆ ಇಲಾಖೆ, ಕಂದಾಯ ಇಲಾಖೆ ಹಾಗೂ ಬಿಬಿಎಂಪಿ ಅಧಿಕಾರಿಗಳು ಮುಖ್ಯವಾಗಿ ಇಲ್ಲಿ ಕೆಲಸ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.