ದಿಸ್ಪುರ್ : ಪ್ರವಾಸಿ ವೀಸಾ ನಿಯಮ ಉಲ್ಲಂಘಿಸಿ, ಅನುಮತಿ ಪಡೆಯದೇ ಧಾರ್ಮಿಕ ಬೋಧನೆ ನಡೆಸುತ್ತಿದ್ದ ಆರೋಪದ ಮೇಲೆ 17 ಮಂದಿ ಬಾಂಗ್ಲಾದೇಶದ ಪ್ರಜೆಗಳನ್ನು ಅಸ್ಸಾಂನ ಬಿಸ್ವನಾಥ್ ಚರಿಯಾಲಿ ಜಿಲ್ಲೆಯಲ್ಲಿ ಬಂಧಿಸಲಾಗಿದೆ.
ಬಿಸ್ವನಾಥ್ ಜಿಲ್ಲೆಯ ಗಿಂಗಿಯಾ ಪ್ರದೇಶದ ದೂರದ ಬಾಗ್ಮರಿ ಪ್ರದೇಶದಲ್ಲಿ ಅವರನ್ನು ಬಂಧಿಸಲಾಗಿದೆ. ಅಸ್ಸಾಂಗೆ ಬರುವ ಮೊದಲು ಅವರು ರಾಜಸ್ಥಾನದ ಅಜ್ಮೀರ್ ಷರೀಫ್ ಮತ್ತು ಬಂಗಾಳದ ಕೂಚ್ ಬೆಹಾರ್ ಜಿಲ್ಲೆಯ ಸ್ಥಳಗಳಿಗೆ ಭೇಟಿ ನೀಡಿದ್ದರು ಎಂದು ಡಿಜಿಪಿ ಭಾಸ್ಕರ್ ಜ್ಯೋತಿ ಮಹಾಂತ ತಿಳಿಸಿದ್ದಾರೆ.
ಇದಕ್ಕೂ ಮುನ್ನ ಐದು ಜನರ ಬಾಂಗ್ಲಾದೇಶಿಗರ ತಂಡ ಕಳೆದ ಆಗಸ್ಟ್ 28ರಂದು ಅಸ್ಸಾಂನ ದಕ್ಷಿಣ ಸಲ್ಮಾರ ಮಂಕಚಾರ್ ಜಿಲ್ಲೆಯ ಮೂಲಕ ಅಕ್ರಮವಾಗಿ ಗಡಿ ಪ್ರವೇಶಿಸಿತ್ತು. ಐವರನ್ನೂ ಬಿಎಸ್ಎಫ್ ಬಂಧಿಸಿತ್ತು.
ಅದಾದ ಬಳಿಕ ಪ್ರವಾಸಿ ನಿಯಮ ಉಲ್ಲಂಘಿಸಿ 17 ಮಂದಿ ಅಸ್ಸಾಂ ಪ್ರವೇಶಿಸಿದ್ದಾರೆ. ಬಾಗ್ಮರಿ ಪ್ರದೇಶದಲ್ಲಿ ಯಾವುದೇ ಪ್ರವಾಸಿ ಆಕರ್ಷಣೆ ಇಲ್ಲ. ಆದರೂ ಈ ವಿದೇಶಿಗರು ಏಕೆ ಇಲ್ಲಿಗೆ ಬಂದಿದ್ದಾರೆ ಎನ್ನುವ ರಹಸ್ಯ ಹುಡುಕಿ ಹೊರಟಾಗ ಅವರು ಧಾರ್ಮಿಕ ಉಪದೇಶ ಮತ್ತು ಧಾರ್ಮಿಕ ಚಟುವಟಿಕೆ ನಡೆಸುತ್ತಿರುವುದು ಬೆಳಕಿಗೆ ಬಂದಿದೆ.
ವಿವಿಧ ದಿನಾಂಕಗಳಲ್ಲಿ ತಂಡೋಪತಂಡವಾಗಿ ಅಸ್ಸಾಂಗೆ ಪ್ರವೇಶಿಸಿದ್ದಾರೆ ಎಂಬುದನ್ನು ಖಚಿತಪಡಿಸಿಕೊಂಡ ನಂತರ ಅವರನ್ನು ಬಂಧಿಸಲಾಗಿದೆ ಎಂದು ಭಾಸ್ಕರ್ ಜ್ಯೋತಿ ಮಹಾಂತ ತಿಳಿಸಿದ್ದಾರೆ.