ಪ್ರಯಾಣದ ವೇಳೆ ಕೆಲ ಪ್ರಯಾಣಿಕರಿಗೆ ಹಾಡು ಕೇಳುವ ಹುಚ್ಚು ಇರುತ್ತದೆ. ಇಯರ್ ಫೋನ್ ಹಾಕಿ ಸಹ ಪ್ರಯಾಣಿಕರಿಗೆ ತೊಂದರೆ ಅಗದಿದ್ರೆ ಪರವಾಗಿಲ್ಲ.
ಆದ್ರೆ ಕೆಲವರು ಸ್ಪೀಕರ್ ಆನ್ ಮಾಡಿಕೊಂಡು ಹಾಡು ಕೇಳುತ್ತಾರೆ. ಇನ್ನುಂದಿಷ್ಟು ಜನ ಬಸ್ ನಲ್ಲಿಯೇ ಇಡೀ ಸಿನಿಮಾ ನೋಡ್ತಾರೆ. ಈ ನಡವಳಿಕೆ ಇತರ ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡುತ್ತದೆ.
ಬಸ್ ಪ್ರಯಾಣ ಅಂದ್ರೆ ಒಂದು ನಿರ್ಧಿಷ್ಟ ಸ್ಥಳದಲ್ಲಿ ಸುಮಾರು 50ಕ್ಕೂ ಹೆಚ್ಚು ಜನರು ಕುಳಿತಿರುತ್ತಾರೆ, ಮಕ್ಜಳು, ಹಿರಿಯರು, ವೃದ್ಧರು, ವಿದ್ಯಾರ್ಥಿಗಳು ಸೇರಿದಂತೆ ಎಲ್ಲ ವರ್ಗದ ಪ್ರಯಾಣಿಕರು ಇರುತ್ತಾರೆ, ಆದ್ರೆ ಯಾರೋ ಓರ್ವ ಪ್ರಯಾಣಿಕ ಮೊಬೈಲ್ ಜೋರಾಗಿ ಶಬ್ಧ ಮಾಡಿಕೊಂಡು ಹಾಡು ಕೇಳೋದು ಮತ್ತೊಬ್ಬರಿಗೆ ಅಹಿತಕರವಾಗಿರುತ್ತದೆ.
ಈ ಹಿನ್ನೆಲೆ ಪ್ರಯಾಣಿಕರ ಹಿತ ಕಾಪಾಡುವ ನಿಟ್ಟಿನಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಹೊಸ ಸುತ್ತೋಲೆ ಹೊರಡಿಸಿದೆ. ಸಾರಿಗೆ ನಿಗಮದ ಹೊಸ ಆದೇಶವನ್ನು ಸಾರ್ವಜನಿಕರು ಸಹ ಸ್ವಾಗತಿಸಿದ್ದಾರೆ. ಬಸ್ ಪ್ರಯಾಣದ ವೇಳೆ ಜೋರಾಗಿ ಶಬ್ಧ ಮಾಡುವವರು ಈ ನಿಯಮವನ್ನು ಪಾಲಿಸಬೇಕು.
ಇನ್ಮುಂದೆ ಸರ್ಕಾರಿ ಬಸ್ ಪ್ರಯಾಣದ ವೇಳೆ ಮೊಬೈಲ್ ಬಳಸಿ ಜೋರಾಗಿ ಶಬ್ಧ ಮಾಡುವುದು ನಿಷಿದ್ಧ. ಪ್ರಯಾಣದ ವೇಳೆ ಹಾಡು, ಸಿನಿಮಾ ಮುಂತಾದವುಗಳನ್ನು ಜೋರಾಗಿ ಹಾಕುವಂತಿಲ್ಲ ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.
ಒಂದು ವೇಳೆ ಹಾಕಿದರೆ ಮೊದಲು ಬಸ್ ನಿರ್ವಾಹಕ ಪ್ರಯಾಣಿಕನಲ್ಲಿ ಮನವಿ ಮಾಡಿಕೊಳ್ಳಬೇಕು. ಮನವಿ ಕಡೆಗಣಿಸಿದರೆ ಬಸ್ ಅರ್ಧಕ್ಕೆ ನಿಲ್ಲಿಸಿ ಪ್ರಯಾಣಿಕರನ್ನು ಅಲ್ಲೇ ಇಳಿಸಿ ಮುಂದುವರೆಯಬೇಕು. ಈ ಬಗ್ಗೆ ಏನಾದರು ಸಮಸ್ಯೆಗಳು ಎದುರಾದರೆ ತಕ್ಷಣವೇ ಸ್ಥಳೀಯ ಪೊಲೀಸ್ ಠಾಣೆಗೆ ವಿಷಯ ತಿಳಿಸಬೇಕು ಎಂದು ತಿಳಿಸಲಾಗಿದೆ.
ಕರ್ನಾಟಕ ಮೋಟಾರು ವಾಹನಗಳ ಕಾಯ್ದೆ 1989ರ ನಿಯಮ 94(1) V ಪ್ರಕಾರ, ಬಸ್ ನಲ್ಲಿ ಜೋರಾಗಿ ಹಾಡು ಕೇಳುವುದು ಕಾನೂನು ಬಾಹಿರವಾಗಿದೆ. ಬಸ್ ಗಳಲ್ಲಿ ಜೋರಾಗಿ ಶಬ್ದ ಉಂಟು ಮಾಡಿ ಮೊಬೈಲ್ ಬಳಸುವುದಕ್ಕೆ ಸಂಪೂರ್ಣ ನಿರ್ಬಂಧ ಹಾಕಲಾಗಿದೆ.