ಹೊಸದಿಲ್ಲಿ : ಕೊರೊನಾ ವೈರಸ್ ಸೋಂಕಿನ ಹೊಸ ತಳಿ ಬಹು ರೂಪಾಂತರ ಹೊಂದುವ ಪ್ರಕರಣಗಳು
ವರದಿಯಾದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ ಮೂರು ದೇಶಗಳಿಂದ ಬರುವ ಪ್ರಯಾಣಿಕರನ್ನು ಕಟ್ಟುನಿಟ್ಟಿನ ತಪಾಸಣೆ ಹಾಗೂ ಪರೀಕ್ಷೆಗೆ ಒಳಪಡಿಸುವಂತೆ ಗುರುವಾರ ಆದೇಶಿಸಿದೆ. ದಕ್ಷಿಣ ಆಫ್ರಿಕಾ, ಹಾಂಕಾಂಗ್ ಮತ್ತು ಬೋಟ್ಸ್ವಾನಾ ದೇಶಗಳಿಂದ ಬರುವ ಪ್ರಯಾಣಿಕರ ಮೇಲೆ ತೀವ್ರ ನಿಗಾ ಇರಿಸಲು ಸೂಚಿಸಲಾಗಿದೆ.
ಕೋವಿಡ್ 19 ಪಾಸಿಟಿವ್ ಕಂಡುಬಂದ ಪ್ರಯಾಣಿಕರ ಮಾದರಿಗಳನ್ನು ಸೂಚಿತ ಜೆನೋಮ್ ಸೀಕ್ವೆನ್ಸಿಂಗ್ ಲ್ಯಾಬೋರೇಟರಿಗಳಿಗೆ ಕಳುಹಿಸುವುದನ್ನು ಖಾತರಿಪಡಿಸಬೇಕು ಎಂದು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಪತ್ರ ಬರೆದಿದ್ದಾರೆ.
'ಕೋವಿಡ್ 19 ಸೋಂಕಿನ 8.1.1529 ತಳಿಯ ಹಲವು ಪ್ರಕರಣಗಳು ಪತ್ತೆಯಾಗಿರುವುದಾಗಿ ಎನ್ಸಿಡಿಸಿ (ರಾಷ್ಟ್ರೀಯ ಕಾಯಿಲೆ ನಿಯಂತ್ರಣ ಕೇಂದ್ರ) ವರದಿ ಮಾಡಿದೆ. ಬೋಟ್ಸ್ವಾನಾದಲ್ಲಿ 3 ಪ್ರಕರಣಗಳು, ದಕ್ಷಿಣ ಆಫ್ರಿಕಾದಲ್ಲಿ 6 ಪ್ರಕರಣಗಳು ಮತ್ತು ಹಾಂಕಾಂಗ್ನಲ್ಲಿ 1 ಪ್ರಕರಣದಲ್ಲಿ ಈ ಹೊಸ ತಳಿಯ ಮಾರಕ ವೈರಸ್ ಇರುವುದು ಪತ್ತೆಯಾಗಿದೆ. ಭಾರತದಲ್ಲಿ ಕೋವಿಡ್ ಪ್ರಕರಣ
ಭಾರತದಲ್ಲಿ ಶುಕ್ರವಾರ 10,549 ಹೊಸ ದೈನಂದಿನ ಪ್ರಕರಣಗಳು ವರದಿಯಾಗಿವೆ. ಕಳೆದ 24 ಗಂಟೆಗಳಲ್ಲಿ 488 ಮಂದಿ ಸೋಕಿತರು ಮೃತಪಟ್ಟಿದ್ದಾರೆ. 9,868 ಸೋಂಕಿತರು ಗುಣಮುಖರಾಗಿದ್ದಾರೆ. ದೇಶದಲ್ಲಿ ಗುರುವಾರಕ್ಕೆ ಹೋಲಿಸಿದರೆ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಶೇ 15.6ರಷ್ಟು ಹೆಚ್ಚಾಗಿದೆ.