ಇಂದು ಮಹಾಶಿವರಾತ್ರಿ ವಿಶೇಷತೆ ಏನು?

ಮಂಗಳವಾರ, 1 ಮಾರ್ಚ್ 2022 (07:10 IST)
ರುದ್ರನ ಆರಾಧಕರಿಗೆ ಇಂದು ಸಂಭ್ರಮದ ದಿನ. ದೇಶಾದ್ಯಂತ ಆಚರಿಸುವ ಅತೀ ದೊಡ್ಡ ಹಬ್ಬಗಳಲ್ಲಿ ಮಹಾಶಿವರಾತ್ರಿ ಸಹ ಒಂದು.

ಶಿಶಿರ ಋತುವಿನ ಮಾಘ ಮಾಸದ ಕೃಷ್ಣ ಪಕ್ಷ ಬಹುಳ ಚತುರ್ದಶಿಯಂದು ಬರುವ ಶಿವರಾತ್ರಿಯ ದಿನ ಭಕ್ತಾದಿಗಳು ಶಂಕರನನ್ನು ನೆನೆದು, ಪುನೀತರಾಗುತ್ತಾರೆ.

ಭಕ್ತರ ಇಷ್ಟಾರ್ಥಗಳಿಗೆ ಎಂದಿಗೂ ನಿರಾಸೆ ಮಾಡದ ಶಿಷ್ಟ ರಕ್ಷಕನಾದ ಶಿವ, ಭಕ್ತರು ಕೇಳಿದ ವರಗಳನ್ನು ಕೊಡುತ್ತಾನೆ ಎಂಬ ನಂಬಿಕೆ ಇದೆ. ಶಿವರಾತ್ರಿಯಂದು ದೇಶಾದ್ಯಂತ ವಿಶೇಷ ಪೂಜೆಗಳು ನೆರವೇರುತ್ತವೆ.
ಇಡೀ ಭಾರತದಾದ್ಯಂತ ಬಹುತೇಕ ಎಲ್ಲ ಭಾಗಗಳಲ್ಲೂ ಆಚರಿಸುವ ಹಬ್ಬ ಇದು. ಈ ಹಬ್ಬದಂದು ದಿನವಿಡೀ ಪೂಜೆ, ಉಪವಾಸ ಮಾಡಿ, ರಾತ್ರಿಯಿಡೀ ಜಾಗರಣೆ ಮಾಡಿ ಶಿವನನ್ನು ಆರಾಧಿಸುವ ಸಂಪ್ರದಾಯವಿದೆ.

ಹಬ್ಬದ ಹಿನ್ನೆಲೆ ಏನು?

ಶಿವಪುರಾಣದ ಪ್ರಕಾರ ಶಿವರಾತ್ರಿಯ ಆಚರಣೆ ಬಂದಿರುವ ಬಗ್ಗೆ ಒಂದು ಸಣ್ಣ ಕಥೆ ಇದೆ. ದೇವಲೋಕದಲ್ಲಿ ಒಮ್ಮೆ ಬ್ರಹ್ಮ ಹಾಗೂ ವಿಷ್ಣುವಿನ ನಡುವೆ ಯಾರು ಶ್ರೇಷ್ಠರು ಎಂಬ ವಿಷಯಕ್ಕೆ ವಾಗ್ವಾದಗಳು ನಡೆಯುತ್ತಿರುತ್ತೆ. ಈ ಮಹಾ ದೇವತೆಗಳಿಬ್ಬರನ್ನೂ ಸಮಾಧಾನ ಮಾಡುವುದು ಕಷ್ಟ ಎಂದೆನಿಸಿದಾಗ, ದೇವತೆಗಳೆಲ್ಲ ಹೋಗಿ ಪರಶಿವನನ್ನು ಬೇಡಿಕೊಳ್ಳುತ್ತಾರೆ.

ವಿಷ್ಣು ಹಾಗೂ ಬ್ರಹ್ಮನ ನಡುವೆ ಜಗಳವನ್ನು ನಿವಾರಿಸುವಂತೆ ಎಲ್ಲರೂ ಶಿವನಲ್ಲಿ ಕೋರಿಕೊಳ್ಳುತ್ತಾರೆ. ಆಗ ವಿಷ್ಣು ಮತ್ತು ಬ್ರಹ್ಮನ ನಡುವೆ ಶಿವ, ಅಗ್ನಿಕಂಭದ ರೂಪದಲ್ಲಿ ಬಂದು ನಿಂತು ತನ್ನ ಮೂಲವನ್ನು ಕಂಡುಹಿಡಿಯಲು ಸೂಚಿಸುತ್ತಾನೆ. ಯಾರು ನನ್ನ ಮೂಲ ಕಂಡುಹಿಡಿಯುತ್ತಾರೆ ಅವರೇ ಶ್ರೇಷ್ಠ ಎಂದು ಹೇಳುತ್ತಾನೆ.

ಆಗ ಹಂಸದ ರೂಪ ತಾಳಿದ ಬ್ರಹ್ಮ ಅಗ್ನಿ ಕಂಭದ ಶಿರವನ್ನು ಹುಡುಕಲು ಮೇಲ್ಮುಖವಾಗಿ ಹೊರಡುತ್ತಾನೆ. ವಿಷ್ಣು ವರಾಹವತಾರ ತಾಳಿ ಕಂಭದ ತಳವನ್ನು ನೋಡುವುದಕ್ಕಾಗಿ ಪಾತಾಳಕ್ಕೆ ಇಳಿಯುತ್ತಾನೆ. ಎಷ್ಟೇ ಮುಂದೆ ಸಾಗಿದರೂ ಬ್ರಹ್ಮ ಹಾಗೂ ವಿಷ್ಣು ಇವರಿಬ್ಬರಿಗೂ ಕಂಭದ ಅಂತ್ಯವೇ ಕಾಣುವುದಿಲ್ಲ. ಅನಂತವಾಗಿರುವ ಶಿವನ ಶಕ್ತಿಯನ್ನು ನೋಡಿದ ವಿಷ್ಣು ಹಾಗೂ ಬ್ರಹ್ಮರಿಗೆ ಸತ್ಯದ ಅರಿವಾಗುತ್ತದೆ.
ಶಿವನ ಜಡೆಯಿಂದ ಕೆಳಗೆ ಬೀಳುತ್ತಿದ್ದ ಕೇದಗೆ ಪುಷ್ಪದ ಬಳಿ ಬ್ರಹ್ಮ, ನೀನು ಎಲ್ಲಿಂದ ಬೀಳುತ್ತಿದ್ದೀಯ ಎಂದು ಪ್ರಶ್ನಿಸುತ್ತಾನೆ. ಆಗ ಆ ಪುಷ್ಪವು ನಾನು ಅಗ್ನಿ ಕಂಭದ ಶಿರದಿಂದ ಬೀಳುತ್ತಿದ್ದೇನೆ ಎಂದು ಉತ್ತರ ನೀಡುತ್ತದೆ. ಆಗ ಬ್ರಹ್ಮ ಶಿವನಲ್ಲಿಗೆ ಬಂದು ಕೇದಗೆ ಪುಷ್ಪವನ್ನು ತೋರಿಸಿ, ತಾನು ಅಗ್ನಿ ಕಂಭದ ಶಿರಭಾಗವನ್ನು ನೋಡಿರುವುದಾಗಿಯೂ ಅಲ್ಲಿಂದಲೇ ಕೇದಗೆ ಪುಷ್ಪವನ್ನು ತಂದಿರುವುದಾಗಿಯೂ ಹೇಳುತ್ತಾನೆ.

ಇವರಿಬ್ಬರ ಮೋಸವನ್ನು ಅರಿತ ಶಿವ, ಬ್ರಹ್ಮನನ್ನು ಯಾರೂ ಪೂಜಿಸಕೂಡದು ಎಂದು ಶಾಪ ನೀಡಿ ಲಿಂಗರೂಪ ತಾಳುತ್ತಾನೆ. ಅಂದು ಮಾಘ ಮಾಸದ ಬಹುಳ ಚತುರ್ದಶಿಯಾಗಿರುತ್ತದೆ. ಹೀಗಾಗಿ, ಶಿವ ಲಿಂಗರೂಪ ತಾಳಿದ ಮಾಘ ಮಾಸದ ಬಹುಳ ಚತುರ್ದಶಿಯಂದು ಶಿವರಾತ್ರಿಯನ್ನು ಆಚರಿಸಲಾಗುತ್ತದೆ.

ಶಿವರಾತ್ರಿಯ ದಿನ ರಾತ್ರಿ ಪೂಜೆಯೇ ವಿಶೇಷ. ಸಾಮಾನ್ಯವಾಗಿ ಎಲ್ಲ ಹಬ್ಬಗಳಲ್ಲಿಯೂ ದೇವರಿಗೆ ಹಗಲು ಪೂಜೆ ನಡೆಯುತ್ತದೆ. ಆದರೆ ಶಿವರಾತ್ರಿ ಮಾತ್ರ ರಾತ್ರಿಯ ಹೊತ್ತು ಪೂಜೆ, ಭಜನೆ ನಡೆಸುವ ವಿಶೇಷ ಆಚರಣೆಯಿದೆ. ರಾತ್ರಿ ಎಂದರೆ ಕತ್ತಲು, ಕತ್ತಲು ಎಂದರೆ ಅಜ್ಞಾನ. ಅಜ್ಞಾನವನ್ನು ಕಳೆದು ಸುಜ್ಞಾನ ಬೆಳಗಿಸು ಎಂದು ಆ ಶಿವನನ್ನು ಬೇಡುವ ಶುಭ ದಿನವೇ ಶಿವರಾತ್ರಿ. ಅಜ್ಞಾನ ತುಂಬಿರುವಲ್ಲಿ ಶಿವ ಸಂಚರಿಸಿ ಜ್ಞಾನ ದೀವಿಗೆಯನ್ನು ಬೆಳಗುತ್ತಾನೆ ಎಂಬ ನಂಬಿಕೆ ಇದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ