ಪ್ರೇಮಾಭಿವ್ಯಕ್ತಿಯಿಂದ ಸಂಸ್ಕೃತಿ ನಾಶವೇ?

'ಅಭಿ'ಮನ್ಯ
WD
ವ್ಯಾಲೆಂಟೈನ್ಸ್ ಡೇ!.... ಇತ್ತೀಚೆಗಿನ ದಿನಗಳಲ್ಲಿ ಬಹಳ ಚರ್ಚೆಯಾಗುತ್ತಿರುವ ವಿಷಯ. ಕೆಲವೇ ಕೆಲವು ವರ್ಷಗಳ ಹಿಂದೆ ಇಂಥದ್ದೊಂದು ಆಚರಣೆ ಇದೆ ಎಂಬುದೇ ಹೆಚ್ಚಿನವರಿಗೆ ಗೊತ್ತಿರಲಿಲ್ಲ. ಕರ್ನಾಟಕದ ಮಟ್ಟಿಗೆ ಮಾತ್ರ ಹೇಳಬಹುದಾಗಿದ್ದರೆ, ಬೆಂಗಳೂರು ಯಾವಾಗ ಸಾಫ್ಟ್‌ವೇರ್ ಕೇಂದ್ರವಾಗಿ, ದೇಶ-ವಿದೇಶಗಳ ದೊಡ್ಡ ದೊಡ್ಡ ಐಟಿ-ಬಿಟಿ ಕಂಪನಿಗಳು ಇಲ್ಲಿ ಠಿಕಾಣಿ ಹೂಡಿದವೋ, ಈ ಜಾಗತೀಕರಣದೊಂದಿಗೇ ಪಾಶ್ಚಾತ್ಯ ಸಂಸ್ಕೃತಿಗಳೂ ನಮ್ಮ ನಾಡಿಗೆ ಬಂದುಬಿಟ್ಟವು, ನಮ್ಮೊಳಗೊಂದಾಗಿಹೋದವು.

ಪಬ್ ಸಂಸ್ಕೃತಿಗೆ ಮತ್ತಷ್ಟು ಒತ್ತು ದೊರೆಯಿತು, ಪಾಶ್ಚಾತ್ಯರು ದಿನಕ್ಕೊಂದರಂತೆ ಆಚರಿಸುವ ಫಾದರ‌್ಸ್ ಡೇ, ಮದರ‌್ಸ್ ಡೇ, ಎಲ್ಡರ‌್ಸ್ ಡೇ, ಫ್ರೆಂಡ್‌ಶಿಪ್ ಡೇ, ಲವ್ ಡೇ, ಆ ಡೇ, ಈ ಡೇ ಮುಂತಾದವುಗಳು ಸಾಲು ಸಾಲಾಗಿ ನಮ್ಮಲ್ಲೂ ಕಾಣಿಸಿಕೊಳ್ಳತೊಡಗಿದವು. ಅದಾಗಲೇ ಪಾಶ್ಚಾತ್ಯ ಜೀವನಶೈಲಿಗೆ ಮಾರುಹೋಗಿರುವ ಭಾರತೀಯರು ಅವುಗಳೆಲ್ಲವನ್ನೂ ತಮ್ಮದಾಗಿಸಿಕೊಳ್ಳತೊಡಗಿದರು. ಅವುಗಳಲ್ಲಿರುವ ಕಾಳಿನ ಜೊತೆ ಜೊಳ್ಳೂ ಸೇರಿಕೊಂಡಿತು. ಸಂಭ್ರಮ ಪಡುವುದಕ್ಕೇನು ಕಾರಣ ಬೇಕೇ? ಇಡೀ ವರ್ಷ ಊರಿನಿಂದ ದೂರವಾಗಿದ್ದುಕೊಂಡವರು, ತಮ್ಮ ತಂದೆ-ತಾಯಿಯನ್ನು ನೆನಪಿಸಿಕೊಳ್ಳಲು ಫಾದರ್ಸ್ ಡೇ, ಮದರ್ಸ್ ಡೇಯನ್ನು ನೆಪವಾಗಿಸಿಕೊಂಡರು. ಅಜ್ಜ-ಅಜ್ಜಿಯರನ್ನು ನೆನಪಿಸಿಕೊಳ್ಳುವವರು ಎಲ್ಡರ್ಸ್ ಡೇಗೆ ಮೊರೆ ಹೋದರು. ಕಾಲೇಜು ಮೆಟ್ಟಿಲಿಳಿದು ನೌಕರಿಗೆ ಸೇರಿಕೊಂಡು ದೂರವಾದವರು ತಮ್ಮ ಗೆಳೆಯರನ್ನು ನೆನಪಿಸಿಕೊಳ್ಳಲು ಫ್ರೆಂಡ್‌ಶಿಪ್ ಡೇಯನ್ನು ಒಪ್ಪಿಕೊಂಡರು, ಅಪ್ಪಿಕೊಂಡರು.

ಆದರೆ ಲವರ‌್ಸ್ ಡೇ ಎಂದು ಕರೆಯಲಾಗುವ ವ್ಯಾಲೆಂಟೈನ್ಸ್ ಡೇ?

ಪ್ರೇಮವೆಂಬುದು ನಿತ್ಯ ನೂತನ ಎಂಬುದು ನಿರ್ವಿವಾದ. ಅದನ್ನು ವ್ಯಕ್ತಪಡಿಸಲು ವ್ಯಾಲೆಂಟೈನ್ಸ್ ದಿನವೇ ಏಕೆ ಬೇಕು? ಲವ್ ಅನ್ನೋ ಭಾವನಾಲೋಕದಲ್ಲಿ ಯಾರು ತೇಲಾಡುತ್ತಿರುತ್ತಾರೋ ಅವರು ಯಾವಾಗ ಬೇಕಾದ್ರೂ ಐ ಲವ್ ಯು ಅಂತ ಅನ್ನಬಹುದಲ್ವಾ ಅನ್ನೋ ಎವರ್‌ಗ್ರೀನ್ ಸತ್ಯದಿಂದ ಹಿಡಿದು, ಐ ಲವ್ ಯು ಎಂಬ ಮೂರು ಆಪ್ಯಾಯಮಾನ ಶಬ್ದಗಳನ್ನು ಉಸುರಲು ಆ ದಿನಕ್ಕೇ ಯಾಕೆ ತಡಕಾಡಬೇಕು, ಹೋಗಲಿ, ಪ್ರೀತಿ ಮಾಡುತ್ತಲೇ ಇರಲಿ, ಅದನ್ನು ಇಡೀ ಜಗತ್ತೇ ಅರಿಯಬೇಕು ಎಂಬ ಹಠಮಾರಿತನದ ಧೋರಣೆಯ 'ಆಚರಣೆ' ಏಕೆ ಬೇಕು, ಪ್ರೀತಿಸುತ್ತಿರುವುದು ಪರಸ್ಪರರಿಗೆ ಗೊತ್ತಾದರೆ ಸಾಕು, ಇಡೀ ಜಗತ್ತಿಗೇ ಅದು ತಿಳಿಯಲಿ ಅಂದುಕೊಳ್ಳುವುದು ಸರಿಯಲ್ಲ ಎನ್ನುವಲ್ಲಿವರೆಗೆ ವಾದ-ವಿವಾದಗಳು ನಡೆಯುತ್ತಲೇ ಇವೆ.

ಮಂಗಳೂರಿನಲ್ಲಿ ಪ್ರಾಯಕ್ಕೆ ಬಂದ ಹುಡುಗಿಯರು ಅರೆಬರೆ ಬಟ್ಟೆ ತೊಟ್ಟು ಪಬ್‌ನಲ್ಲಿ ಕುಡಿಯುತ್ತಾರೆ, ಕುಣಿಯುತ್ತಾರೆ, ಭಾರತೀಯ ಸಂಸ್ಕೃತಿ ನಾಶವಾಗುತ್ತಿದೆ ಅಂತೆಲ್ಲಾ ಕೂಗಾಡಿ, ಅವರ ಮೇಲೆ ದಾಳಿ ಮಾಡಿರುವ ಶ್ರೀರಾಮ ಸೇನೆ, ಇದೀಗ ವ್ಯಾಲೆಂಟೈನ್ಸ್ ದಿನದ ಮೇಲೆ ತನ್ನ ಕಾಕದೃಷ್ಟಿ ಬೀರಿದೆ. ಅದಕ್ಕೆ ಅದು ನೀಡುವ ಕಾರಣ 'ಭಾರತೀಯ ಸಂಸ್ಕೃತಿಯ ರಕ್ಷಣೆ'. ವ್ಯಾಲೆಂಟೈನ್ಸ್ ದಿನವನ್ನು ಆಚರಿಸಲು ಬಿಡುವುದಿಲ್ಲ, ಯಾರಾದ್ರೂ ಯುವ ಜೋಡಿಗಳು ಡೇಟಿಂಗ್ ಮಾಡುತ್ತಿರೋದು ಕಂಡು ಬಂದರೆ, ತಕ್ಷಣವೇ ಅವರಿಗೆ ಮದುವೆ ಮಾಡಿಸಿಬಿಡ್ತೀವಿ, ಕ್ಯಾಮರಾ ಮತ್ತು ಅರಶಿಣಕುಂಕುಮ ಹೊತ್ತ ಐದು ತಂಡಗಳನ್ನು ಈಗಾಗಲೇ ಬೆಂಗಳೂರಿನಲ್ಲಿ ಛೂ ಬಿಡಲಾಗಿದೆ ಎಂದಿದೆ ಶ್ರೀರಾಮ ಸೇನೆ. ಒಟ್ಟಿನಲ್ಲಿ ಇದು ವಿದೇಶೀ ಸಂಸ್ಕೃತಿ, ಅದು ಭಾರತೀಯರನ್ನು ಆವರಿಸುವುದನ್ನು ತಡೆಯಬೇಕು ಎಂಬುದು ಶ್ರೀರಾಮ ಸೇನೆ ಹೇಳಿಕೆ.

ಪ್ರೀತಿ ಪ್ರೇಮದ ಬಗ್ಗೆ ತನ್ನ ವಿರೋಧ ಅಲ್ಲ ಎಂಬುದನ್ನು ಈಗಾಗಲೇ ರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸ್ಪಷ್ಟಪಡಿಸಿದ್ದಾರೆ. ಪ್ರೀತಿ ಮಾಡಲು ಒಂದು ದಿನ ಬೇಕಾಗಿಲ್ಲ. ಇವತ್ತು ಮಾಡಿ, ನಾಳೆ ಮಾಡಿ, ಯಾವಾಗ ಬೇಕಾದ್ರೂ ಮಾಡಿ. ಆದ್ರೆ ಅದರ 'ಆಚರಣೆ'ಯ ವಿದೇಶೀ ವಿಧಾನ ನಮಗೆ ಬೇಡ ಎಂದಿದ್ದಾರವರು ಐಬಿಎನ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ.

ಹಾಗಿದ್ದರೆ ಸಂಸ್ಕೃತಿಯ ರಕ್ಷಣೆಗೆ ಇವರಿಗೆ ಗುತ್ತಿಗೆ ಕೊಟ್ಟವರು ಯಾರು ಎಂಬ ಪ್ರಶ್ನೆ ಏಳದೇ ಬಿಡುವುದಿಲ್ಲ. ಇದು ಫ್ಯಾಸಿಸ್ಟ್ ಸಮಾಜವಲ್ಲ. ಇದು ಪ್ರಜಾಸತ್ತಾತ್ಮಕ ಸಮಾಜ. ಇಲ್ಲಿ ತಮಗೆ ಬೇಕಾದುದನ್ನು ಆಯ್ದುಕೊಳ್ಳುವ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಅದರ ಬೆನ್ನಹಿಂದೆಯೇ ಬರುತ್ತದೆ - ಪ್ರಜಾಪ್ರಭುತ್ವ ಎಂದಾದರೆ, ಮನಬಂದಂತೆ ಏನು ಬೇಕಾದರೂ ಮಾಡಬಹುದೇ, ಇಲ್ಲಿ ಸ್ವೇಚ್ಛಾಚಾರಕ್ಕೆ ಅವಕಾಶವಿದೆಯೇ? ಎಂಬ ಮಗದೊಂದು ಪ್ರಶ್ನೆ.

ಅದೆಲ್ಲ ಬದಿಗಿಟ್ಟು, ಭಾರತೀಯ ಸಂಸ್ಕೃತಿ ಎಂಬುದೊಂದು ಇದೆ. ಇಲ್ಲಿ ಸಭ್ಯತೆ, ನೈತಿಕತೆ ಎಂಬುದು ಹಾಸು ಹೊಕ್ಕಾಗಿದೆ ಎಂಬ ಬಹುಕಾಲದಿಂದಲೂ ಅಸ್ತಿತ್ವದಲ್ಲಿರುವ ವಿವಾದಾತೀತ ವಾದವನ್ನು ಗಮನಿಸಿದರೆ, ಇಲ್ಲೂ ಕೂಡ ಯಾವುದು ಸಭ್ಯತೆ, ಯಾವುದು ಅಸಭ್ಯತೆ, ಅನೈತಿಕತೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಸಭ್ಯತೆಯಿಂದ ಅಸಭ್ಯತೆಯೆಡೆಗೆ ಹೋಗುವ ಹಾದಿಯಲ್ಲಿ ಅವುಗಳನ್ನು ಬೇರ್ಪಡಿಸುವ 'ಗಡಿ' ನಿಯಂತ್ರಣ ರೇಖೆ ಯಾವುದು ಎಂಬುದು ಮಾತ್ರ ಅವರವರ ವಿವೇಚನೆಗೆ ಬಿಟ್ಟ ವಿಚಾರ. ಆದರೆ ವಿವೇಚನೆ? ಅದು ಕೂಡ ಸಂಕೀರ್ಣವಾದದ್ದೇ. ನಮಗೆ ಸರಿ ಅನ್ನಿಸಿದ್ದು, ಮತ್ತೊಬ್ಬರಿಗೆ ತಪ್ಪು ಅಂತ ಕಂಡುಬರಬಹುದು. ಅದಕ್ಕಿಂತಲೂ ಹೆಚ್ಚಾಗಿ, ಬೇರೆಯವರಿಗೆ ತಪ್ಪು ಅಂತ ಕಂಡಿದ್ದು, ನಮಗೆ ಸರಿ ಅನ್ನಿಸಬಹುದು!

ಜಗತ್ತು ಖಂಡಿತವಾಗಿಯೂ ಹಿಂದಿನಂತಿಲ್ಲ. ಬದಲಾವಣೆಯೇ ಜಗದ ನಿಯಮ. ಶಿಲಾಯುಗ, ಮಧ್ಯಯುಗ ಕಳೆದು ತಂತ್ರಜ್ಞಾನ ಯುಗದಲ್ಲಿದ್ದೇವೆ ನಾವು. ಕಾಲಕ್ಕೆ ತಕ್ಕಂತೆ ಕೋಲವೂ ಬದಲಾಗುತ್ತಿದೆ. ಆದರದು ಹಾಲಾಹಲವಾಗದಂತೆ ನೋಡಿಕೊಳ್ಳುವ ಜಾಣ್ಮೆ, ವಿವೇಕ ನಮ್ಮಲ್ಲಿರಬೇಕಷ್ಟೆ. ಸಾರ್ವಜನಿಕವಾಗಿ ಅಶ್ಲೀಲವಾಗಿ ವರ್ತಿಸದಂತೆ, ನಮ್ಮ ಸಮಾಜದ ನೈತಿಕತೆಗೆ ಧಕ್ಕೆಯಾಗದಂತೆ ನೋಡಿಕೊಳ್ಳುವ ಹೊಣೆಗಾರಿಕೆ ನಮ್ಮದೇ. ಸಮಾಜವೂ ನಿಂತ ನೀರಾಗಿಲ್ಲ. ಸದಾ ಪ್ರವಹಿಸುತ್ತಿರಬೇಕು. ಹಾಗಿದ್ದರೆ ಮಾತ್ರ ಪ್ರಗತಿ, ಏಳಿಗೆ ಸಾಧ್ಯ. ಯಾಕೆಂದರೆ, ಕಳೆದ ವರ್ಷದ ವ್ಯಾಲೆಂಟೈನ್ಸ್ ದಿನದಂದು ಮುಂಬಯಿಯಲ್ಲಿ 7 ಹಾಗೂ ದೆಹಲಿಯಲ್ಲಿ 17 ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದವು. ಇದು ಕೂಡ ಯೋಚಿಸಬೇಕಾದ ಸಂಗತಿ.

ಆಚರಣೆ, ನಡೆ-ನುಡಿಯಲ್ಲಿ ಸಭ್ಯತೆಯಿರಲಿ, ನೈಜ ಪ್ರೇಮ-ಪ್ರೀತಿಗೆ ಯಾವುದೇ ಅಡ್ಡಿ ಬಾರದಿರಲಿ, ನಿಸ್ವಾರ್ಥ ಪ್ರೇಮದ ಬಾವುಟ ನಿತ್ಯ ನಿರಂತರ ಪಟಪಟಿಸುತ್ತಿರಲಿ, ಪ್ರೇಮಿಗಳಿಗೆ ಶುಭವಾಗಲಿ.