'ವ್ಯಾಲೆಂಟೈನ್ಸ್ ಡೇ ಆಚರಿಸಿ, ನರಕಕ್ಕೆ ಹೋಗಿ'!

ಲಕ್ಷಾಂತರ ಮಂದಿ ಬ್ರಿಟಿಷರು ಈ ಶನಿವಾರ ವ್ಯಾಲೆಂಟೈನ್ಸ್ ದಿನವನ್ನು ಸಂಭ್ರಮ, ಸಡಗರಗಳಿಂದ ಆಚರಿಸಿಕೊಳ್ಳಲು ಸಿದ್ಧವಾಗುತ್ತಿರುವಂತೆಯೇ, ವಿವಾದಾತ್ಮಕ ಮುಸ್ಲಿಂ ಪಂಡಿತರಾದ ಅಂಜಮ್ ಚೌಧುರಿಯವರು ಒಂದು ಎಚ್ಚರಿಕೆ ನೀಡಿದ್ದಾರೆ. ಅದೆಂದರೆ "ವ್ಯಾಲೆಂಟೈನ್ಸ್ ಡೇ ಆಚರಿಸಿ, ನರಕಕ್ಕೆ ಹೋಗಿ"!

ಶುಭಾಶಯ ಪತ್ರಗಳ ವಿನಿಮಯ, ಗುಲಾಬಿ ಹೂ ಕಳುಹಿಸುವುದು ಮತ್ತು ರೋಮ್ಯಾಂಟಿಕ್ ಆಗಿ ಕ್ಯಾಂಡಲ್ ಲೈಟ್ ಡಿನ್ನರ್ ಸವಿಯುವುದು ಮುಂತಾದ ಬ್ರಿಟನ್‌ನ ಅಚ್ಚುಮೆಚ್ಚಿನ ಹವ್ಯಾಸಗಳಿಂದೊಡಗೂಡಿದ ಈ ಆಚರಣೆಯನ್ನು 'ಕೆಲಸಕ್ಕೆ ಬಾರದ ಮತ್ತು ಕೆಡುಕಿನ ಹಬ್ಬ'ವಾಗಿದ್ದು, ಸ್ವೇಚ್ಛಾಚಾರ, ಸ್ವಚ್ಛಂದ ಸಂಭೋಗ, ಲೈಂಗಿಕ ಅಶ್ಲೀಲ ಮಾತುಕತೆ ಮಾತ್ರವಲ್ಲ, ವ್ಯಭಿಚಾರವನ್ನು ಸಮರ್ಥಿಸಲು ಈ ರೀತಿ ಮಾಡಲಾಗುತ್ತಿದೆ ಎಂದು ಹೇಳಿರುವುದಾಗಿ ದಿ ಡೈಲಿ ಸ್ಟಾರ್ ವರದಿ ಮಾಡಿದೆ.

ಲಂಡನ್ ಸಂಜಾತ ವಕೀಲರಾಗಿರುವ ಚೌಧುರಿ, ತಮ್ಮ ದಿ ಇಸ್ಲಾಮಿಸ್ಟ್ ಎಂಬ ಪಾಶ್ಚಾತ್ಯ-ವಿರೋಧೀ ವೆಬ್‌ಸೈಟಿನಲ್ಲಿ ಇವುಗಳನ್ನು ಪ್ರಕಟಿಸಿದ್ದಾರೆ. ಈ ಲೇಖನದ ತಲೆಬರಹವೂ 'ವ್ಯಭಿಚಾರದ ವ್ಯಾಲೆಂಟೈನ್ಸ್ ಡೇ' ಎಂದೇ ಇದೆ.

ನಿಷೇಧಿತ ಸಂಘಟನೆ ಅಲ್-ಮುಹಾಜಿರೂಂ ಎಂಬುದರ ಮಾಜಿ ನಾಯಕನಾಗಿರುವ ಅವರು, ಈ ಆಚರಣೆಯನ್ನು 'ಅನಾಗರಿಕ ಹಬ್ಬ' ಎಂದು ಕರೆದಿದ್ದಾರಲ್ಲದೆ, ಅಲ್ಲಾಹ್‌ನ ಆರಾಧನೆಯಿಂದ ಜನರ ಮನಸ್ಸನ್ನು ಬೇರೆಡೆ ಸೆಳೆಯುವ ತಂತ್ರವಿದು ಎಂದಿದ್ದಾರೆ.

'ಹೆಚ್ಚಿನವರು ಇದನ್ನು ನಿರಪಾಯಕಾರಿ ಮಜಾ ದಿನ, ಶುಭಾಶಯಪತ್ರ ವಿನಿಮಯ, ಹೂ ಕೊಡುವುದು ಮತ್ತು ಕ್ಯಾಂಡಲ್ ಲೈಟ್ ಡಿನ್ನರ್ ಮೂಲಕ ತನ್ನ ಪ್ರಿಯಕರ, ಪ್ರೇಯಸಿ, ಜೀವನ ಸಂಗಾತಿಗೆ ಪ್ರೀತಿಯನ್ನು ತಿಳಿಸುವ ದಿನ ಎಂದು ಈ ದಿನವನ್ನು ಭಾವಿಸುತ್ತಾರೆ. ಈ ಆಚರಣೆ ಮೂಲ ಮತ್ತು ಇದು ಇಸ್ಲಾಂ ಬೋಧನೆಗೆ ವಿರುದ್ಧವಾದದ್ದು ಎಂಬುದು ಅವರ್ಯಾರಿಗೂ ತಿಳಿದಿಲ್ಲ' ಎಂದು ಚೌಧುರಿ ಬರೆದಿದ್ದಾರೆ.

ವ್ಯಾಲೆಂಟೈನ್ಸ್ ಡೇಗೆ ಮಾನ್ಯತೆ ನೀಡಿರುವುದು ತಮ್ಮ ವರ್ತನೆ ಹಾಳು ಮಾಡಿಕೊಳ್ಳಲು ದೆವ್ವಗಳಿಗೆ ಬಾಗಿಲು ತೆರೆದಂತೆ. ತಮ್ಮ ಇಸ್ಲಾಮಿಕ್ ತತ್ವಗಳನ್ನು ತೊರೆಯಲು ಪ್ರೇರೇಪಿಸುವ, ಕಾಮಾಕಾಂಕ್ಷೆಯನ್ನು ಪೂರೈಸಿಕೊಳ್ಳುವ ಮತ್ತು ವಿವಾಹಪೂರ್ವ ಸಂಬಂಧಗಳನ್ನು ಬೆಳೆಸುವುದೇ ಮುಂತಾದ ಅನಾಗರಿಕ ಪದ್ಧತಿಗಳಿಗೆ ಇದು ಪ್ರೇರಣೆ ನೀಡುತ್ತದೆ ಎಂದು ಆತ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ