ಪ್ರೀತಿಯಲ್ಲಿ 'ಬಿದ್ದ' ಮಾನಸಿಕ ರೋಗಿಗಳ ಬಗ್ಗೆ...

ಪ್ರಭು
ನಮ್ಮದು ನೈಜ ಪ್ರೇಮ. ನಾನು ಅವಳನ್ನು ಒಂಬತ್ತು ವರ್ಷಗಳಿಂದ ಪ್ರೀತಿಸುತ್ತಿದ್ದೇನೆ. ಇದುವರೆಗೂ ಅವಳ ಮೈ ಮುಟ್ಟಿದವನಲ್ಲ. ಅವಳ ಸೌಂದರ್ಯಕ್ಕೆ ಮಾರು ಹೋಗಿ ನಾನು ಆಕೆಯನ್ನು ಪ್ರೀತಿಸಿದ್ದಲ್ಲ. ಅವಳ ವಿಶಾಲ ಹೃದಯಕ್ಕೆ ನಾನು ಸೋತು ಹೋಗಿದ್ದೇನೆ. ಆಕೆಯ ಮುಗ್ಧ ಮಾತುಗಳು ನನ್ನನ್ನು ಕಟ್ಟಿ ಹಾಕಿವೆ. ಅವಳ ಕಣ್ಣುಗಳು ನನ್ನನ್ನು ಸೆಳೆದಿವೆ. ಅವಳಿಲ್ಲದೆ ನನ್ನ ಬದುಕಿಲ್ಲ. ಅವಳೇ ಎಲ್ಲ... ಹೀಗೆ ಎಂಟು ಕ್ಯಾರೆಟ್‌ ಪ್ರೇಮಿಯೊಬ್ಬ ತನ್ನ ರೋಗದ ಲಕ್ಷಣಗಳನ್ನು ಹೇಳುತ್ತಾ ಹೋಗುತ್ತಾನೆ.

ನೀನು ಎಷ್ಟು ಸೌಂದರ್ಯವತಿ ಎಂದು ನನಗೆ ತಿಳಿದಿಲ್ಲ ಪ್ರಿಯೆ. ಯಾಕೆಂದರೆ ನೀನು ಸಿಕ್ಕಾಗಲೆಲ್ಲಾ ನಿನ್ನ ಕಣ್ಣು ನೋಡುವುದರಲ್ಲೇ ಕಾಲ ಕಳೆದುಹೋಗುತ್ತದೆ. ಅದೆಷ್ಟು ಸುಂದರವಾಗಿದೆ. ಆ ವಿಶಾಲ ಕಣ್ಣುಗಳೇ ಎಲ್ಲವನ್ನೂ ಹೇಳುತ್ತಿವೆ. ನೀನು ಕೊಡುವ ಮಿಸ್ ಕಾಲ್‌ನಿಂದಲೇ ನನ್ನ ಮುಂಜಾನೆ ಆರಂಭ. ನೀನಿಲ್ಲದ ಬಾಳು ಅದು ಬಾಳೇ ಅಲ್ಲ. ನಿಜಕ್ಕೂ ನಾನೆಷ್ಟು ಅದೃಷ್ಟವಂತ. ನಾನು ನಿಜಕ್ಕೂ ಇದುವರೆಗೆ ನಿನ್ನನ್ನು ಕಾಮದ ದೃಷ್ಟಿಯಿಂದ ನೋಡಿದವನೇ ಅಲ್ಲ. ನಿನ್ನನ್ನು ನೋಡಿದಾಗ ಆ ಭಾವನೆಯೇ ಬರುತ್ತಿಲ್ಲ. ಯಾಕೋ ನಿನ್ನನ್ನು ಬಿಟ್ಟಿರಲು ನನ್ನಿಂದಾಗದು. ನನ್ನ ಕನಸುಗಳಿಗೆ ಬಣ್ಣ ಹಚ್ಚುವ ತಾಕತ್ತಿದ್ದರೆ ಈ ಜಗತ್ತಿನಲ್ಲಿ ಅದು ನಿನಗೊಬ್ಬಳಿಗೆ ಮಾತ್ರ ಸಾಧ್ಯ.... ಇದು ಮತ್ತೊಬ್ಬ ಪೀಡಿತನ ಅಳಲು.
IFM

ಅವನ ಬಾಯಿಯಿಂದ ಇದುವರೆಗೂ ಒಂದೇ ಒಂದು ಮಾತು ತಪ್ಪಿ ಬಂದಿಲ್ಲ. ಅಷ್ಟೊಂದು ಸಚ್ಚಾರಿತ್ರ್ಯವಂತ ನನ್ನವನು. ಅವನನ್ನು ಅವನೇ ಸ್ವತಃ ಪ್ರೀತಿಸುವುದಕ್ಕಿಂತಲೂ ಹೆಚ್ಚಾಗಿ ನನ್ನನ್ನು ಅವನು ಪ್ರೀತಿಸುವಂತಹಾ ಕಾಳಜಿ. ಈ ಬಗ್ಗೆ ನನಗೆ ಬಗ್ಗೆ. ಅಮ್ಮನಿಗೆ ಹುಷಾರಿಲ್ಲವೆಂದಾಗ ಮನೆಯ ಕೆಲಸಕಾರ್ಯ ಬಿಟ್ಟು ಸುಳ್ಳು ಹೇಳಿ ಬಂದವನು. ಅವನನ್ನು ಬಿಟ್ಟಿರಲು ನನ್ನಿಂದ ಸಾಧ್ಯವಾಗದು. ಮದುವೆ ಎಂದಾದರೆ ಅವನನ್ನೇ. ಇಲ್ಲವೆಂದಾದರೆ ನಾವಿಬ್ಬರೂ ಆತ್ಮಹತ್ಯೆ ಮಾಡಿಕೊಳ್ಳಲೂ ಹಿಂದೇಟು ಹಾಕುವವರಲ್ಲ...

ಇಂತವರನ್ನು ಮಾನಸಿಕ ಅಸ್ವಸ್ಥರು ಎನ್ನದೆ ಬೇರೆ ಪದಗಳು ಶಬ್ದಕೋಶದಲ್ಲಿ ಸಿಗುತ್ತಿಲ್ಲ. ನಿಜಕ್ಕೂ ಆ ಜೋಡಿ ಒಬ್ಬರನ್ನೊಬ್ಬರು ಪ್ರೀತಿಸಿರುತ್ತಾರಾ? ನಂಬಿಕೆಯಿಲ್ಲ. ಅವರಿಗೆ ಅದೇನೋ ಕಳೆದುಕೊಳ್ಳುವ ಭಯ ಮತ್ತು ಉಳಿಸಿಕೊಳ್ಳಲು ಹೆಣಗಾಡುವ ಪರಿಯನ್ನೇ ಪ್ರೀತಿ ಎಂದುಕೊಂಡು ಮರುಗುತ್ತಾರೆ. ಲೋಕ ಮರೆತು, ಲೋಕದಲ್ಲೇನು ನಡೆಯುತ್ತಿದೆ ಎಂಬುದರ ಪರಿವೆಯೇ ಇಲ್ಲದೆ, ಪ್ರೀತಿಯೇ ಲೋಕ ಎಂದುಕೊಳ್ಳುತ್ತಾರೆ. ಇಲ್ಲಿ ಪ್ರೀತಿಯ ಹೊರತು, ಉಳಿದೆಲ್ಲ ಹಕ್ಕುಗಳು, ಕರ್ತವ್ಯಗಳು ಗೌಣವಾಗುತ್ತವೆ.

ಸೌಂದರ್ಯದ ಬಗ್ಗೆ ಆಸ್ವಾದನೆ ಹೊಂದಿರದ ಆಕೆ/ಆತ ಪ್ರೀತಿಸುವುದು ಏನನ್ನು? ಮನಸ್ಸಿನ ವಿಚಾರ ಬಿಟ್ಹಾಕಿ.. ಮ‌ೂರು ದಿನಕ್ಕೆ ಶುದ್ಧವಾಗಿ ಮೈಲಿಗೆ ಮಾಡಿಕೊಳ್ಳುವಂತ ದೇಹಕ್ಕಿಂತಲೂ ಶುದ್ಧ ಅವಿವೇಕತನದ್ದು. ಹುಡುಗಿ ಅಥವಾ ಹುಡುಗ ಆಕರ್ಷಿತರಾಗುವುದು ಭಿನ್ನ ಲಿಂಗಿಗಳ ಕಡೆಗೇ ಯಾಕೆಂದು ಯೋಚಿಸುವಷ್ಟು ಮುಗ್ಧರಲ್ಲ ಯಾರು ಕೂಡ. ಆದರೂ ಯೋಚಿಸಿದವರಲ್ಲ. ಅಕ್ಕ ಪಕ್ಕ ಕೂರಲೂ ಹೆದರಿ, ಮಾರು ದೂರದಿಂದಲೇ ಪ್ರೀತಿಸುವ, ಇದುವೇ ನಿಜ ಪ್ರೀತಿ ಎಂದುಕೊಂಡು ಭಾವನಾ ಲೋಕದಲ್ಲಿಯೇ 'ಹಾಗಾಗುತ್ತದೆ, ಹೀಗಾಗುತ್ತದೆ, ಹೀಗಾಗಬಹುದು, ಹಾಗಾಗಬಹುದು' ಎನ್ನುತ್ತಾ ಮಂಡಿಗೆ ಮೆಲ್ಲುತ್ತಾ, ಮನಸ್ಸು ಕೆಡಿಸಿಕೊಳ್ಳುವ ಇವರದ್ದೂ ಪ್ರೀತಿಯೆನ್ನುವವರಿಗೆ ನನ್ನ ವಿರೋಧವಿದೆ.

ಹಾಗಂತ ಮೈ ಥಳುಕು ಹಾಕಿಕೊಂಡು ಸುತ್ತಾಡಬೇಕೆಂಬುದನ್ನು ನಾನು ಸಮರ್ಥಿಸುತ್ತಿದ್ದೇನೆ ಎಂದರ್ಥೈಸಿಕೊಳ್ಳಬೇಕಾಗಿಲ್ಲ. ಭಾರತೀಯ ಸಂಸ್ಕೃತಿಯನ್ನು ಗೌರವಿಸುವುದು ನಮ್ಮ ಧರ್ಮ. ಮಾನವನು ಸಂಸ್ಕೃತಿಯನ್ನು ಬಿಟ್ಟು ಯಂತ್ರಗಳಂತಿರಬೇಕು ಎನ್ನುವ ಪಾಲಿಸಿಗೂ ನಾನು ಬದ್ಧನಲ್ಲ. ನೇರಾನೇರ ನೆಟ್ಟಗೆ ಮಾತಾಡದೆ, ಮೌನರಾಗವನ್ನೇ ಪ್ರೀತಿಯ ರಾಗವದು ಎಂದು ಮನದೊಳಗಿನ ಅಳುಕಿನ ನಡುವೆಯೇ ಖಡಾಖಂಡಿತವಾಗಿ "ಭಾವಿಸುತ್ತಾ" ದಿನಾ ಜೀವಂತ ಸಾಯುತ್ತಿರುವವರನ್ನು ಕಂಡಾಗ ಕರುಣೆಯುಕ್ಕುತ್ತದೆ.

ಮೈಮೇಲೆ ಬಿದ್ದೆದ್ದವರ ಪ್ರೀತಿಯನ್ನೂ ಕಂಡಿದ್ದೇವೆ. ಅವರದ್ದು ಹೊಲಸು ಪ್ರೀತಿಯೆಂದು ನಾನು ಹೇಳಲಾರೆ. ಹಾಗಾದರೆ ಸೊಗಸು? ಬಹುಶಃ ಮೊದಲು ಮಾತ್ರ ಅದು ಸೊಗಸು. ಅದರ ಹಂತಗಳಾದ 'ಸೆಳೆ', 'ಕಲೆ', 'ಬಲೆ'ಗಳಲ್ಲಿ ಬೀಳದವರ‌್ಯಾರು? ಋಷಿ-ಮುನಿಗಳು ಎಂದಾದರೂ ಬ್ರಹ್ಮಚಾರಿಗಳು ಎಂದು ಘೋಷಿಸಿದ್ದುಂಟೇ?

ಹಾಗಾದರೆ ನಿಷ್ಕಾಮ, ನಿಸ್ವಾರ್ಥ, ಪರಿಶುದ್ಧ ಪ್ರೀತಿ ಈಗ ಎಲ್ಲೂ ಕಾಣಲು ಸಿಗುತ್ತಿಲ್ಲ ಅಂತೀರಾ?