ಚೆನ್ನೈನಲ್ಲಿ ಈಶಾ ಫೌಂಡೇಶನ್ ವತಿಯಿಂದ ಈಶಾ ಯೋಗ

ಶುಕ್ರವಾರ, 1 ಏಪ್ರಿಲ್ 2011 (18:25 IST)
WD
ಚೆನ್ನೈ ನಗರದ ಪಚಾಯಪ್ಪಾ ಕಾಲೇಜಿನ ಕ್ರೀಡಾಂಗಣದಲ್ಲಿ ಈಶಾ ಫೌಂಡೇಶನ್ ವತಿಯಿಂದ 'ಸದ್ಗುರು ಅವರೊಂದಿಗೆ ಈಶ ಯೋಗ' ಎನ್ನುವ ಕಾರ್ಯಕ್ರಮವನ್ನು 25 ರಿಂದ 27 ರವರೆಗೆ ಹಮ್ಮಿಕೊಳ್ಳಲಾಗಿತ್ತು.

ಶಾಂಭವಿ ಮಹಾ ಮುದ್ರ ಯೋಗದ ಪ್ರಾಚೀನ ತಂತ್ರವನ್ನು ಸದ್ಗುರುಗಳು ಆರಂಭಿಸಿದ್ದು, ಮೂರು ದಿನಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ಸುಮಾರು 14,154 ಭಕ್ತಾದಿಗಳು ಪಾಲ್ಗೊಂಡಿದ್ದರು. ಚೆನ್ನೈ ಮಹಾ ನಗರ ಸೇರಿದಂತೆ ನೆರೆಯ ಜಿಲ್ಲೆಗಳಿಂದ ಸಾವಿರಾರು ಭಕ್ತಾದಿಗಳು ಆಗಮಿಸಿದ್ದರು.

ಭಕ್ತಾದಿಗಳಲ್ಲಿ 15 ವರ್ಷದ ಶಾಲಾ ಬಾಲಕರು ಸೇರಿದಂತೆ 70 ವರ್ಷ ವಯಸ್ಸಿನ ಉದ್ಯಮಿಗಳು, ಹಿರಿಯರು, ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಭಕ್ತಾದಿಗಳಿಗಾಗಿ ಆಹಾರ ವ್ಯವಸ್ಥೆ ಆಸನ, ಕುಡಿಯುವ ನೀರು, ಸಂಚಾರಿ ಶೌಚಾಲಯಗಳ ವ್ಯವಸ್ಥೆ ಮಾಡಲಾಗಿತ್ತು.

ಕಾರ್ಯಕ್ರಮದಲ್ಲಿ ಒಂದು ಸಾವಿರಕ್ಕೂ ಹೆಚ್ಚಿನ ಈಶಾ ಸಂಸ್ಥೆಯ ಸ್ವಯಂ ಸೇವಕರು ಉಪಸ್ಥಿತರಿದ್ದು, ನೆರೆದಿದ್ದ ಭಕ್ತಾದಿಗಳಿಗೆ ಸಹಾಯ ನೀಡಿ ಮೆಚ್ಚುಗೆಗೆ ಪಾತ್ರರಾದರು. ಮಾಸಾಂತ್ಯಕ್ಕೆ ಮಧುರೈ ಮತ್ತು ತಿರುಚಿಯಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಸುಮಾರು 10 ಸಾವಿರಕ್ಕೂ ಹೆಚ್ಚಿನ ಜನ ಆಗಮಿಸುವ ನಿರೀಕ್ಷೆಯಿದೆ.

ವೆಬ್ದುನಿಯಾವನ್ನು ಓದಿ