ಸರ್ವಾಂಗಾಸನ

ಸರ್ವಾಂಗಾಸನ ಎಂಬುದು ಮೂರು ಪದಗಳ, ಪದಗುಚ್ಚ. ಅದು ಸರ್ವ, ಅಂಗ, ಆಸನ. 'ಸರ್ವ' ಎಂದರೆ ಎಲ್ಲಾ, 'ಅಂಗ' ಎಂದರೆ ಭಾಗ, ಆಸನ ಎಂದರೆ ಯೋಗ ಭಂಗಿ. ಹಾಗಾಗಿ ಇಡೀ ದೇಹಕ್ಕೆ ವ್ಯಾಯಾಮ ಲಭಿಸುವ ಈ ಆಸನಕ್ಕೆ ಸರ್ವಾಂಗಾಸನ ಎಂದು ಹೆಸರು.

ಸರ್ವಾಂಗಾಸನ ಮಾಡುವ ವಿಧಾನ
ನೆಲದ ಮೇಲೆ ರಗ್ ಅಥವಾ ಚಾಪೆ ಹಾಸಿ ಅಂಗಾತ ಮಲಗಿ. ದೇಹವನ್ನು ನೆಟ್ಟಗಾಗಿಸಿ. ಕಾಲುಗಳನ್ನು ನೇರವಾಗಿಸಿ, ಕೈಗಳನ್ನು ಅಂಗೈ ಕೆಳಮುಖವಾಗಿ ಹಗುರವಾಗಿರಿಸಿ. ನಿಧಾನವಾಗಿ ಉಸಿರಾಡಿ. ಮೊಣಕಾಲುಗಳನ್ನು ಎದೆಯ ಮಟ್ಟಕ್ಕೆ ಭಾಗಿಸಿ. ಅಂಗೈಗಳನ್ನು ನೆಲಕ್ಕೆ ಒತ್ತಿ ಸೊಂಟ ಮತ್ತು ಪೃಷ್ಠವನ್ನು ನೆಲದಿಂದ ಮೇಲಕ್ಕೆತ್ತಿ. ಕಟಿಭಾಗಕ್ಕೆ
WD
ಅಂಗೈಯ ಆಧಾರ ನೀಡಿ ಮೊಣಕಾಲುಗಳನ್ನು ಹಣೆಯತ್ತ ಭಾಗಿಸಿ ಕಾಲುಗಳನ್ನು ನೇರವಾಗಿಸಿ. ನಿಧಾನಕ್ಕೆ ಉಸಿರು ಬಿಡಿ, ಬೆನ್ನು ಮತ್ತು ಕಾಲುಗಳನ್ನು ನೇರವಾಗಿಸಿ. ಕಾಲುಗಳನ್ನು ಮೇಲಕ್ಕೇರಿಸುತ್ತಾ ಮೊಣಕೈಗಳನ್ನು ಭುಜದ ನೇರಕ್ಕೆ ತನ್ನಿ. ಕಾಲಿನ ಹೆಬ್ಬೆರಳುಗಳು, ಕಾಲು ಮತ್ತು ದೇಹವನ್ನು ಸಡಿಲ ಬಿಡಿ. ನಿಮ್ಮ ಕಾಲಿನ ಹೆಬ್ಬೆರಳಿನ ಮೇಲೆ ದೃಷ್ಟಿ ನೆಡಿ. ಸಾಧ್ಯವಾದಷ್ಟು ಹೊತ್ತು ಈ ಭಂಗಿಯಲ್ಲಿದ್ದು ಸಹಜವಾಗಿ ಉಸಿರಾಡಿ.

ಈ ಭಂಗಿಯಿಂದ ಹಿಂತಿರುಗಲು, ನಿಧಾನಕ್ಕೆ ಉಸಿರು ಹೊರಬಿಟ್ಟು, ಮೊಣಕಾಲುಗಳನ್ನು ಎದೆಯ ನೇರಕ್ಕೆ ಭಾಗಿಸಿ, ಸೊಂಟ ಮತ್ತು ಪೃಷ್ಠವನ್ನು ನಿಧಾನಕ್ಕೆ ನೆಲದ ಮೇಲಿರಿಸಿ. ಕಾಲುಗಳನ್ನು ನೆಲದ ಮೇಲೆ ನೇರವಾಗಿ ಚಾಚಿ, ಕೈಗಳನ್ನು ಸಡಿಲ ಬಿಡಿ.

ಅನುಕೂಲಗಳು
ಥೈರಾಯಿಡ್ ಗ್ರಂಥಿಯನ್ನು ಉದ್ದೀಪಿಸುತ್ತದೆ. ನರವ್ಯೂಹವನ್ನು ಶಕ್ತಿಯುತವಾಗಿಸುತ್ತದೆ. ಕಿಬ್ಬೊಟ್ಟೆಯ ಭಾಗವನ್ನೂ ಉದ್ದೀಪಿಸುತ್ತದೆ.

ಎಚ್ಚರಿಕೆ
ನಿಮಗೆ ಅಧಿಕ ರಕ್ತದೊತ್ತಡವಿದ್ದರೆ ಈ ಆಸನವನ್ನು ಮಾಡಲೇ ಬೇಡಿ. ಕತ್ತು, ಭುಜ, ಸೊಂಟದ ಸಮಸ್ಯೆಗಳಿದ್ದರೂ ಈ ಆಸನ ಮಾಡುವುದು ಉಚಿತವಲ್ಲ.

ಸ್ತ್ರೀಯರು ಋತುಸ್ರಾವದ ವೇಳೆ ಸರ್ವಾಂಗಾಸನ ಮಾಡಬಾರದು.