ಇತ್ತೀಚೆಗಿನ ದಿನಗಳಲ್ಲಿ ವಯಸ್ಕರಿಗೆ ಮಾತ್ರವಲ್ಲ, ಚಿಕ್ಕ ವಯಸ್ಸಿನವರಿಗೂ ಮಂಡಿ ನೋವಿನ ಸಮಸ್ಯೆ ಕಂಡುಬರುತ್ತಿದೆ. ಅದಕ್ಕೆ ನಮ್ಮ ಜೀವನ ಶೈಲಿ, ನಾವು ಮಾಡುವ ಕೆಲಸ ಕಾರಣವಾಗಿರಬಹುದು. ಜೊತೆಗೆ ಸಾಕಷ್ಟು ಪೋಷಕಾಂಶಗಳ ಕೊರತೆಯಿಂದಲೂ ಮಂಡಿ ನೋವು ಬರಬಹುದು.
ಮಂಡಿ ನೋವಿಗೆ ಆಯುರ್ವೇದದಲ್ಲಿ ಅನೇಕ ಚಿಕಿತ್ಸೆಗಳಿವೆ. ಆದರೆ ಯೋಗದ ಮೂಲಕ ನಾವು ಮನೆಯಲ್ಲಿಯೇ ಸಿಂಪಲ್ ಟೆಕ್ನಿಕ್ ಬಳಸಿ ಮಂಡಿ ನೋವಿಗೆ ತಕ್ಕಮಟ್ಟಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಮಂಡಿ ನೋವಿಗೆ ಮುಖ್ಯವಾಗಿ ಸೇತುಬಂಧಾಸನ ಉತ್ತಮ ಪರಿಹಾರ ನೀಡಬಹುದು.
-
ಎರಡೂ ಕೈಗಳನ್ನು ಪಕ್ಕಕ್ಕಿರಿಸಿ ನೆಲದ ಮೇಲೆ ಮೊದಲು ಅಂಗಾತ ಮಲಗಿ.
-
ಉಸಿರು ಒಳಗೆ ತೆಗೆದುಕೊಳ್ಳುತ್ತಾ, ನಿಮ್ಮ ಸೊಂಟ ಮತ್ತು ಮೊಣಕಾಲಿನ ಭಾಗವನ್ನು ನಿಧಾನವಾಗಿ ಮೇಲೆತ್ತಿ. ಕೈ ಮತ್ತು ಭುಜಕ್ಕೆ ಶಕ್ತಿ ಕೊಟ್ಟು ಈ ಭಂಗಿಯಲ್ಲಿರಿ.
-
ಈ ಭಂಗಿ ಮಾಡುವಾಗ ನಿಮ್ಮ ಮೊಣಕಾಲು ಮತ್ತು ಭುಜದ ಮೇಲೆ ಭಾರ ಬೀಳುವುದರ ಅನುಭವ ನಿಮಗಾಗುತ್ತದೆ.
-
ಕೆಲವು ಸೆಕೆಂಡುಗಳ ನಂತರ ಉಸಿರನ್ನು ಹೊರಗೆ ಬಿಡುತ್ತಾ ನಿಧಾನವಾಗಿ ಸೊಂಟ ಮತ್ತು ಮೊಣಕಾಲಿನ ಭಾಗವನ್ನು ಮತ್ತೆ ಮೊದಲಿನಂತೆ ನೆಲದ ಕಡೆಗೆ ತನ್ನಿ.
ಈ ಯೋಗವನ್ನು ನಿಯಮಿತವಾಗಿ ಮಾಡುತ್ತಿದ್ದರೆ ನಿಮ್ಮ ಮೊಣಕಾಲಿನ ನೋವಿಗೆ ತಕ್ಕಮಟ್ಟಿಗೆ ಪರಿಹಾರ ಕಂಡುಕೊಳ್ಳಬಹುದು.