1996ರ ವಿಶ್ವಕಪ್ ಸೆಮಿಫೈನಲ್‌ ಪಂದ್ಯದಲ್ಲಿ ಫಿಕ್ಸಿಂಗ್: ಕಾಂಬ್ಳಿ ಬಾಂಬ್

ಶುಕ್ರವಾರ, 18 ನವೆಂಬರ್ 2011 (12:13 IST)
PR


1996ರ ಏಕದಿನ ವಿಶ್ವಕಪ್ ಸೆಮಿಫೈನಲ್ ಪಂದ್ಯವನ್ನಂತೂ ಯಾರು ಮರೆತಿರಲಿಕ್ಕಿಲ್ಲ. ಅಂದಿನ ದಿನ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಪಾಲಿಗಂತೂ ಕರಾಳ ದಿನವಾಗಿತ್ತು.

ಶ್ರೀಲಂಕಾ ವಿರುದ್ಧದ ಕೊಲ್ಕತಾದ ಈಡೆನ್ ಗಾರ್ಡೆನ್ ಮೈದಾನದಲ್ಲಿ ನಡೆದ ಸೆಮಿಫೈನಲ್ ಪಂದ್ಯವನ್ನು ಸೋತಿದ್ದ ಭಾರತ ವಿಶ್ವಕಪ್‌ ಕೂಟದಿಂದ ನಿರ್ಗಮಿಸಿತ್ತು. ಪಂದ್ಯವನ್ನು ಭಾರತ ಕಳೆದುಕೊಳ್ಳುವುದು ಬಹುತೇಕ ಖಚಿತವೆನಿಸಿದಾಗ ಸ್ಟೇಡಿಯಂನಲ್ಲಿ ದಾಂಧಲೆ ಎಬ್ಬಿಸಿದ್ದ ಅಭಿಮಾನಿಗಳು ಬೆಂಕಿ ಹಚ್ಚಿಕೊಂಡಿದ್ದರ ಪರಿಣಾಮ ಪಂದ್ಯವನ್ನು ರದ್ದುಗೊಳಿಸಲಾಗಿತ್ತು.

ಇದರಿಂದಾಗಿ ಪಂದ್ಯ ಮುಂದುವರಿಸಲಾಗದ ಸ್ಥಿತಿ ಕಂಡುಬಂದಿದ್ದರ ಹಿನ್ನಲೆಯಲ್ಲಿ ಎದರಾಳಿ ಶ್ರೀಲಂಕಾ ತಂಡವನ್ನು ವಿಜೇತ ತಂಡವೆಂದು ಘೋಷಿಸಲಾಗಿತ್ತು. ಈ ಸಂದರ್ಭದಲ್ಲಿ ಕ್ರೀಸಿನಲ್ಲಿದ್ದ ವಿನೋದ್ ಕಾಂಬ್ಳಿ ಕಣ್ಣಿರಿಡುತ್ತಾ ಪೆವಿಲಿಯನ್‌ಗೆ ಮರಳುತ್ತಿದ್ದ ದೃಶ್ಯ ಇನ್ನೂ ಮನದಲ್ಲಿ ಅಚ್ಚಳಿಯದೇ ಉಳಿದಿದೆ.

ಆನಂತರ ಮಹತ್ವದ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಮಣಿಸಿದ್ದ ಅರ್ಜುನ್ ರಣತುಂಗಾ ನೇತೃತ್ವದ ಶ್ರೀಲಂಕಾ ಪಡೆ ವಿಶ್ವಕಪನ್ನು ಚೊಚ್ಚಲ ಬಾರಿಗೆ ಎತ್ತಿಹಿಡಿದಿತ್ತು.

PR


1996ರ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಫಿಕ್ಸಿಂಗ್ ನಡಿದಿದೆ ಎಂದು ಕಾಂಬ್ಳಿ ಶಂಕೆ ವ್ಯಕ್ತಪಡಿಸುವುದರೊಂದಿಗೆ ಬೂದಿ ಮುಚ್ಚಿದ ಕೆಂಡದಂತಿದ್ದ ಈ ಎಲ್ಲ ವಿಚಾರಗಳು ಮತ್ತೆ ಸಿಡಿದೆದ್ದಿದೆ.

ಪಂದ್ಯ ಆರಂಭಕ್ಕೂ ಮುನ್ನವೇ ಟಾಸ್ ಗೆದ್ದಲ್ಲಿ ಭಾರತ ಬ್ಯಾಟಿಂಗ್ ಆರಿಸಿಕೊಳ್ಳಲಿದೆ ಎಂಬುದನ್ನು ಸರ್ವಾನುಮತದಿಂದಲೇ ನಿರ್ಧರಿಸಲಾಗಿತ್ತು. ಹಾಗಿದ್ದರೂ ಅಂದಿನ ನಾಯಕ ಮೊಹಮ್ಮದ್ ಅಜರುದ್ದೀನ್ ಟಾಸ್ ಗೆದ್ದಿದ್ದರ ಹೊರತಾಗಿಯೂ ಫೀಲ್ಡಿಂಗ್ ಆರಿಸಿದ್ದರು. ಅಜರುದ್ದೀನ್ ಅವರ ಈ ನಿರ್ಧಾರವು ನನ್ನ ಶಂಕೆಗೆ ಕಾರಣವಾಗಿದೆ ಎಂದು ಕಾಂಬ್ಳಿ ಆಪಾದಿಸಿದ್ದಾರೆ.

PR


1996ರ ವಿಶ್ವಕಪ್ ಸೆಮಿಫೈನಲ್ ಪಂದ್ಯವನ್ನು ನಾನೆಂದೂ ಮರೆಯಲಾರೆ. ಯಾಕೆಂದರೆ ಇದರಿಂದಾಗಿಯೇ ನನ್ನ ಕೆರಿಯರ್ ಅಂತ್ಯಗೊಂಡಿತ್ತಲ್ಲದೆ ನನ್ನನ್ನು ತಂಡದಿಂದ ಕೈಬಿಡಲಾಗಿತ್ತು. ಮೊದಲು ಫೀಲ್ಡಿಂಗ್ ಆರಿಸಿದ ನಿರ್ಧಾರವನ್ನು ನನ್ನನ್ನು ಬೆಚ್ಚಿಬೀಳಿಸಿತ್ತು ಎಂದು ಕಾಂಬ್ಳಿ ಖಾಸಗಿ ಚಾನೆಲ್‌ವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಭಾವುಕರಾಗಿಯೇ ನುಡಿದಿದ್ದಾರೆ.

1990ರ ದಶಕದ ಪ್ರತಿಯೊಂದು ಪಂದ್ಯದಲ್ಲೂ ಫಿಕ್ಸಿಂಗ್ ನಡೆಯುತ್ತಿತ್ತು ಎಂದು ಐಸಿಸಿ ಭ್ರಷ್ಟಾಚಾರ ನಿಗ್ರಹ ದಳದ ಮಾಜಿ ಮುಖ್ಯಸ್ಥ ಪಾಲ್ ಕಾಂಡನ್ ಹೇಳಿಕೆಯ ನಂತರ ಕಾಂಬ್ಳಿ ಶಂಕೆ ವ್ಯಕ್ತಪಡಿಸಿರುವುದು ಮೋಸದಾಟ ಪ್ರಕರಣದಲ್ಲಿ ಹೊಸ ತಿರುವಿಗೆ ಕಾರಣವಾಗಿದೆ.

ನಾನು ಒಂದು ಬದಿಯಲ್ಲಿ ಬ್ಯಾಟಿಂಗ್ ಮಾಡುತ್ತಿದ್ದೆ. ನಾವು ಚೇಸ್ ಮಡಾಬಹುದೆಂದು ಸಹ ಆಟಗಾರ ಹೇಳುತ್ತಿದ್ದರು. ಆದರೆ ಅಚ್ಚರಿಯೆಂಬಂತೆ ಒಬ್ಬರ ನಂತರ ಒಬ್ಬರಂತೆ ಎಲ್ಲರೂ ಪೆವಿಲಿಯನ್ ಪರೇಡ್ ನಡೆಸಿದರು. ಅಲ್ಲಿ ಏನೂ ನಡೆಯುತೆಂಬುದೇ ತಿಳಿಯಲಾಗಲಿಲ್ಲ ಎಂದು ಕಾಂಬ್ಳಿ ವಿವರಿಸಿದ್ದಾರೆ.

PR


ಖಂಡಿತವಾಗಿಯೂ ಅಲ್ಲಿ ಏನೋ ನಡೆದಿದೆ. ನನಗೆ ಮಾತನಾಡಲು ಅವಕಾಶವೇ ಕಲ್ಪಿಸಲಿಲ್ಲ ಬದಲಾಗಿ ತಂಡದಿಂದ ಹೊರದಬ್ಬಲಾಗಿತ್ತು. ನಮ್ಮ ತಂಡದ ಮ್ಯಾನೇಜರ್ ಅಜಿತ್ ವಾಡೇಕರ್ ಅವರಿಗೆ ಈ ಎಲ್ಲ ವಿಚಾರಗಳ ಬಗ್ಗೆ ಗೊತ್ತು. ಆನಂತರ ಅವರೇ ಬರೆದ ಲೇಖನದಲ್ಲಿ ಕಾಂಬ್ಳಿ ಅವರನ್ನು ಬಲಿಪಶು ಮಾಡಲಾಗಿದೆ ಎಂಬುದನ್ನು ಎಡಗೈ ಬ್ಯಾಟ್ಸ್‌ಮನ್ ಉಲ್ಲೇಖಿಸಿದರು.

ನಾವೆಲ್ಲರೂ ಮಾನಸಿಕವಾಗಿ ಬ್ಯಾಟಿಂಗ್‌ಗೆ ತಯಾರಾಗಿದ್ದ ಸಂದರ್ಭದಲ್ಲಿ ಕ್ಷೇತ್ರರಕ್ಷಣೆ ಮಾಡುವ ನಾಯಕನ ನಿರ್ಧಾರವು ನಿಜಕ್ಕೂ ಶಾಕ್ ನೀಡಿತ್ತು ಎಂದು ಕಾಂಬ್ಳಿ ತಿಳಿಸಿದ್ದಾರೆ. ಟೂರ್ನಿಯುದ್ಧಕ್ಕೂ ನಾವು ಉತ್ತಮ ಪ್ರದರ್ಶನ ನೀಡುತ್ತಿದ್ದೆವು. ಪಾಕಿಸ್ತಾನ ಮತ್ತು ವೆಸ್ಟ್‌ಇಂಡೀಸ್ ತಂಡಗಳನ್ನು ಮಣಿಸುವ ಮೂಲಕ ಸೆಮಿಫೈನಲ್ ಹಂತಕ್ಕೆ ತಲುಪಿದ್ದೆವು. ಆದರೆ ಅಂತಿಮ ನಾಲ್ಕರ ಘಟ್ಟದ ಹೋರಾಟದಲ್ಲಿ ಫೀಲ್ಡಿಂಗ್ ನಿರ್ಧಾರವು ಶಾಕ್ ನೀಡಿತ್ತು ಎಂದಿದ್ದಾರೆ.

PR


ದೇಶಕ್ಕಾಗಿ ಆಡುವ ಉತ್ತಮ ಅವಕಾಶವನ್ನು ಕಳೆದುಕೊಂಡೆ ಎಂಬ ಬೇಸರದಿಂದಲೇ ನಾನು ಕಣ್ಣೀರಿಟ್ಟೆ. ಇಡೀ ತಂಡವೇ ನನ್ನನ್ನು ಅಪ್ಪಿಕೊಂಡಿತು. ಎಲ್ಲರೂ ಅಳುತ್ತಿದ್ದರು. ಅದು ಕೇವಲ ತೆಂಡೂಲ್ಕರ್ ಅಥವಾ ಇತರರ ಕನಸು ಮಾತ್ರವಾಗಿರಲಿಲ್ಲ. ವಿಶ್ವಕಪ್ ಗೆಲ್ಲುವುದು ನನ್ನ ಕೂಡಾ ಕನಸಾಗಿತ್ತು ಎಂದು ಕಾಂಬ್ಳಿ ಭಾವುಕರಾಗಿ ನುಡಿದರು.

ಮೊದಲು ಬ್ಯಾಟಿಂಗ್ ಮಾಡಿದ್ದ ಶ್ರೀಲಂಕಾ ಎಂಟು ವಿಕೆಟುಗಳ ನಷ್ಟಕ್ಕೆ 251 ಮೊತ್ತ ಪೇರಿಸಿತ್ತು. ಜವಾಬು ನೀಡಲಾರಂಭಿಸಿದ್ದ ಭಾರತ ತಂಡವು ಒಂದು ಹಂತದಲ್ಲಿ ಒಂದು ವಿಕೆಟ್ ನಷ್ಟಕ್ಕೆ 98 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿತ್ತು. ಆದರೆ ನಾಟಕೀಯ ಕುಸಿತ ಕಂಡಿದ್ದ ಭಾರತ 35 ಓವರುಗಳಾಗುವಷ್ಟರಲ್ಲಿ 120ಕ್ಕೆ ಎಂಟು ವಿಕೆಟ್ ಕಳೆದುಕೊಂಡು ಸೋಲಿನ ಭೀತಿಗೊಳಗಾಗಿತ್ತು. ಇದು ನೆರೆದಿದ್ದ ಪ್ರೇಕ್ಷಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಇದರಿಂದಾಗಿ ಪಂದ್ಯವನ್ನು ರದ್ದುಗೊಳಿಸಲು ಮ್ಯಾಚ್ ರೆಫರಿ ಕ್ಲೈವ್ ಲಾಯ್ಡ್ ನಿರ್ಧರಿಸಿದ್ದರು.

ವೆಬ್ದುನಿಯಾವನ್ನು ಓದಿ