ಮತ್ತೊಂದು ಪವಾಡ: ಒಡೆದ ಹೃದಯ ದುರಸ್ತಿ!

ಸುಪ್ರತಿಮ್ ದತ್ತಾ ಎಂಬವರ ದೇಹದೊಳಕ್ಕೆ ನುಗ್ಗಿದ್ದ ಕಬ್ಬಿಣದ ಸಲಾಕೆಯನ್ನು ಯಶಸ್ವಿಯಾಗಿ ಆಪರೇಶನ್ ಮೂಲಕ ತೆಗೆದ ಎರಡು ತಿಂಗಳಲ್ಲಿ, ನವದೆಹಲಿಯ ಎಐಐಎಂಎಸ್ ವೈದ್ಯರು ಮತ್ತೊಂದು ಸಾಧನೆ ಮಾಡಿದ್ದು, ಅಪಘಾತವೊಂದರಲ್ಲಿ ಏಟುಬಿದ್ದು ಒಡೆದು ಹೋಗಿದ್ದ ಹೃದಯವನ್ನು ಸರಿಪಡಿಸಿ ಪವಾಡ ಸೃಷ್ಟಿಸಿದ್ದಾರೆ.

22ರ ಹರೆಯದ ಅರುಣ್ ಶರ್ಮಾ ಎಂಬ ಮೆಡಿಕಲ್ ರೆಪ್ರೆಸೆಂಟೇಟಿವ್ ಮೀರತ್‌ನಲ್ಲಿ ಬೈಕ್ ಅಪಘಾತಕ್ಕೀಡಾದ ಭರ್ತಿ ಎಂಟು ಗಂಟೆಗಳ ಬಳಿಕ ಎಐಐಎಂಎಸ್ ತುರ್ತು ಚಿಕಿತ್ಸಾ ವಿಭಾಗಕ್ಕೆ ದಾಖಲಾಗಿದ್ದ. ಮೀರತ್ ವೈದ್ಯರಂತೂ ಈತನ ಆಸೆಯನ್ನೇ ಕೈಬಿಟ್ಟಿದ್ದರು. ಆದರೆ ಕುಟುಂಬಿಕರು ದೆಹಲಿಗೆ ಕರೆದೊಯ್ಯುವ ರಿಸ್ಕ್ ತೆಗೆದುಕೊಂಡಿದ್ದರು.

ಅಪಘಾತದ ತೀವ್ರತೆಯಿಂದಾಗಿ ಅರುಣ್ ಶರ್ಮಾನ ಎದೆಗೂಡು ಪುಡಿ ಪುಡಿಯಾಗಿ, ಹೃದಯವನ್ನೂ ಜಜ್ಜಿ ಬಿಟ್ಟಿತ್ತು. ಇದರಿಂದಾಗಿ ಹೃದಯದ ಅಂಗಾಂಶವು ಎರಡು ಕಡೆಗಳಲ್ಲಿ ಬಿರುಕುಬಿಟ್ಟಿತ್ತು.

ಅತ್ಯಂತ ಸಂಕೀರ್ಣವಾದ ಎರಡು ಗಂಟೆಗಳ ಶಸ್ತ್ರಚಿಕಿತ್ಸೆ ನಡೆಸಿದ ಎಐಐಎಂಎಸ್ ತಜ್ಞ ವೈದ್ಯರು, ಭಾರತದಲ್ಲೇ ಮೊದಲ ಬಾರಿಗೆ ಈ ರೀತಿಯ ಸಾಧನೆಯೊಂದನ್ನು ಮಾಡಿದರು.

ಇಲ್ಲಿಗೆ ಆತ ಬಂದಿದ್ದಾಗ ಬಹುತೇಕ ಸಾವಿನಂಚಿನಲ್ಲಿದ್ದ. ನಾನಂತೂ ಎಲ್ಲಾ ಆಸೆ ಬಿಟ್ಟಿದ್ದೆ ಎಂದಿದ್ದಾರೆ ಅರುಣ್ ಶರ್ಮಾರ ಅಣ್ಣ ಶಂಕರ್ ಶರ್ಮಾ.

ಸೆಪ್ಟೆಂಬರ್ 17ರಂದು ರಾತ್ರಿ 7 ಗಂಟೆಗೆ ಅಪಘಾತ ನಡೆದಿತ್ತು, ಮರುದಿನ ಮುಂಜಾವ 3.15ರ ವೇಳೆಗೆ ಅರುಣ್ ಶರ್ಮಾ ದೆಹಲಿಯ ಆಸ್ಪತ್ರೆಗೆ ತಲುಪಿದ್ದ. ರಕ್ತದೊತ್ತಡ ತೀರಾ ಕಡಿಮೆ ಇತ್ತು. ಆಂತರಿಕ ರಕ್ತಸ್ರಾವವೂ ತೀವ್ರವಾಗಿತ್ತು. ಚೆಸ್ಟ್ ಟ್ಯೂಬ್ ಹಾಕಿದ ಕೆಲವೇ ಕ್ಷಣದಲ್ಲಿ ಲೀಟರುಗಟ್ಟಲೆ ರಕ್ತ ಹೊರಬಂದಿತು. ಆತ ಅದಾಗಲೇ 2.5 ಲೀಟರ್ ರಕ್ತ ಕಳೆದುಕೊಂಡಿದ್ದ ಎಂದಿದ್ದಾರೆ ಎಐಐಎಂಎಸ್ ತೀವ್ರನಿಗಾ ಘಟಕದ ಮುಖ್ಯಸ್ಥ ಡಾ.ಎಂ.ಸಿ.ಮಿಶ್ರಾ.

ವೆಬ್ದುನಿಯಾವನ್ನು ಓದಿ