ಕನ್ನಡದ ಜಪ ಮಾಡಲು ಮಗದೊಂದು ರಾಜ್ಯೋತ್ಸವ

ಅವಿನಾಶ್ ಬಿ.
WD
ನರಕಕ್ಕಿಳ್ಸಿ ನಾಲ್ಗೆ ಸೀಳ್ಸಿ
ಬಾಯಿ ಒಲಿಸಾಕಿದ್ರೂನೆ
ಮೂಗ್ನಲ್ ಕನ್ನಡ ಪದವಾಡ್ತೀನಿ
ನನ್ ಮನಸನ್ನ್ ನೀ ಕಾಣೆ!

ಅಂತ ಜಿ.ಪಿ.ರಾಜರತ್ನಂ ತಮ್ಮ ಕನ್ನಡ ಮನಸ್ಸನ್ನು ಬಿಚ್ಚಿಟ್ಟಿದ್ದರು.

ಕೈ ಕತ್ತರಿಸಿ, ನಾಲಿಗೆ ಸೀಳಿ, ಹೊಡಿ, ಬಡಿ, ಅಯೋಗ್ಯ, ಸುಳ್ಳ, ಭ್ರಷ್ಟಾಚಾರಿ, ಕಳ್ಳ ಎಂಬಿತ್ಯಾದಿ ಅತ್ಯಮೂಲ್ಯ ಪದ ಸಂಪತ್ತನ್ನು, ಕನ್ನಡದ ನುಡಿಗಳು ಹೊರಹೊಮ್ಮುವ ನಮ್ಮ ಜನ ನಾಯಕರ ಬಾಯಿಗಳ ಮೂಲಕ ಕೇಳಿಸಿಕೊಳ್ಳುತ್ತಲೇ ನಾವಿಂದು ಮಗದೊಂದು ಕನ್ನಡದ ಉತ್ಸವದ ಹೊಸ್ತಿಲಿಗೆ ತಲುಪಿದ್ದೇವೆ.

ಪ್ರತೀ ಬಾರಿ ಕನ್ನಡ ರಾಜ್ಯೋತ್ಸವ ಬಂದಾಗ ನಾವೆಲ್ಲಾ ಎಚ್ಚೆತ್ತುಕೊಂಡು, ಕನ್ನಡ ಉಳಿಸಿ, ಬೆಳೆಸಿ ಅಂತೆಲ್ಲಾ ಹಾರಾಡುತ್ತೇವೆ, ಹೋರಾಡುತ್ತೇವೆ ಮತ್ತು 'ಹೋರಾಟ' ಮಾಡಬೇಕು ಎಂದೆಲ್ಲಾ ಕರೆ ನೀಡುತ್ತೇವೆ. ಕನ್ನಡವೇ ಪ್ರಧಾನ ಭಾಷೆಯಾಗಿರುವ ರಾಜ್ಯದಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ಮಾಡಿಕೊಂಡಿದ್ದೇವೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಿದೆ, ಕನ್ನಡ ಸಾಹಿತ್ಯ ಪರಿಷತ್ತು ಇದೆ, ಅಲ್ಲಲ್ಲಿ ಕನ್ನಡ ಜಾಗೃತಿಗಾಗಿ ಅಭಿಯಾನಗಳು, ಕನ್ನಡದ ರಕ್ಷಣೆಯ ಹೆಸರಿನಲ್ಲಿ ಹೋರಾಟಗಳು ನಡೆಯುತ್ತಿವೆ... ಇಂಥ ಪರಿಸ್ಥಿತಿಗೆ ಕಾರಣವೇನು?

ಕನ್ನಡಕ್ಕಳಿವಿಲ್ಲ...
ಕರ್ನಾಟಕದಲ್ಲಿ ಕನ್ನಡದ ಬಳಕೆ ಕಡಿಮೆಯಾಗ್ತಿದೆ ಎಂಬುದು ನಿಜವಾಗಿದ್ದರೂ, ಕನ್ನಡ ಸಾಯುತ್ತಿದೆ ಎಂಬುದು ಮಾತ್ರ ಶುದ್ಧ ಸುಳ್ಳು. ಕನ್ನಡದ ಬಗೆಗಿನ ಅಭಿಮಾನ ನಮಗೆ ಕಡಿಮೆಯಾಗುತ್ತಿದೆ ಎಂಬುದು ಒಪ್ಪ ತಕ್ಕ ಮಾತೇ. ಇದಕ್ಕೊಂದೆರಡು ಉದಾಹರಣೆ ಇಲ್ಲಿದೆ.

ಎರಡು ವರ್ಷಗಳ ಹಿಂದೆ, ತುರ್ತು ಕಾರ್ಯ ನಿಮಿತ್ತ ಚೆನ್ನೈನಿಂದ ಕನ್ನಡದ ರಾಜಧಾನಿ ಬೆಂಗಳೂರಿಗೆ ಬಂದಿಳಿಯಬೇಕಾಗಿತ್ತು. ವಿಮಾನ ನಿಲ್ದಾಣದಿಂದ ಹೊರಬಂದು ಮುಂದಿನ ವಿಮಾನಕ್ಕೆ ಸಾಕಷ್ಟು ಸಮಯವಿದ್ದುದರಿಂದ ಮಧ್ಯಾಹ್ನದೂಟ ಪೂರೈಸೋಣವೆಂದು ದೊಮ್ಮಲೂರಿಗೆ ಟ್ಯಾಕ್ಸಿ ಹಿಡಿಯಲು ತೆರಳಿದೆ. ಅಲ್ಲಿ ನಾಲ್ಕೈದು ಮಂದಿ ಟ್ಯಾಕ್ಸಿವಾಲಾರನ್ನು ವಿಚಾರಿಸಿದಾಗ (ಬಾಯಿಗೆ ಬಂದ ರೇಟು… ಚರ್ಚೆ ಮಾಡೋದು ನಮ್ಮ ಕರ್ಮ!) ಅವರೆಲ್ಲಾ ಮಾತನಾಡಿದ್ದು ಅಚ್ಚ ತಮಿಳಿನಲ್ಲಿ! ಯಾಕಂದ್ರೆ ಚೆನ್ನೈ ವಿಮಾನದಿಂದ ಬಂದವರು ತಮಿಳರೇ ಅಂತ ಅವರಿಗೆ ಬಲವಾದ ನಂಬಿಕೆ!

ಊಟ ಮುಗಿಸಿ, ಮರಳಿ ವಿಮಾನ ನಿಲ್ದಾಣಕ್ಕೆ ಹೋಗಲೆಂದು ಆಟೋ ರಿಕ್ಷಾವನ್ನು ನಿಲ್ಲಿಸಿದೆವು. 'ಕಹಾಂ ಜಾನಾ ಹೈ ಸಾಬ್' ಅಂತ ಆಟೋ ಚಾಲಕನಿಂದ ಪ್ರಶ್ನೆ ಎದುರಾಯಿತು. ಬಹುಶಃ ನನ್ನನ್ನು ನೋಡಿ ಇದ್ಯಾರೋ ಮಾರ್ವಾಡಿ ಇಲ್ಲವೇ ಉತ್ತರ ಭಾರತೀಯ ಇರ್ಬೇಕೂಂತ ತೀರ್ಮಾನ ಮಾಡಿರಬೇಕು. ಯಾಕಂದ್ರೆ ಆಟೋ ರಿಕ್ಷಾದವರಿಗೆ ಚಹರೆ ನೋಡಿ ತಮ್ಮ ಸಂಭಾವ್ಯ ಗಿರಾಕಿಯನ್ನು ಕೈತಪ್ಪಿ ಹೋಗದಂತೆ ಮಾಡುವ ಕಲೆ ಬಹುಶಃ ಗೊತ್ತಿರಬೇಕು.

ಆಟೋದಲ್ಲಿ ಕುಳಿತ ಮೇಲೆ, 'ಕೌನ್ಸಾ ಫ್ಲೈಟ್ ಹೈ ಸಾಬ್' ಅಂತ ಆತ ಕೇಳಿದಾಗ, 'ಮಂಗಳೂರು' ಅಂತ ಅಚ್ಚಕನ್ನಡದಲ್ಲಿ ಉದ್ದೇಶಪೂರ್ವಕವಾಗಿ ಹೇಳಿದೆ. ಆಗ ಆತನಿಗೆ ಇವರು ಕನ್ನಡದವರೇ ಅಂತ ಜ್ಞಾನೋದಯವಾಯಿತು. ಮತ್ತೆ ಕನ್ನಡದಲ್ಲೇ ಮಾತು ಮುಂದುವರಿಸಿದೆವು.

ನಾನು ಕೇಳಿದೆ… 'ಯಾಕಪ್ಪಾ ಬೆಂಗಳೂರಲ್ಲಿದ್ದುಕೊಂಡೂ ಕನ್ನಡದಲ್ಲಿ ಮಾತನಾಡಿಸೋದಿಲ್ಲ?'. ಅಂತ ಕೇಳಿದಾಗ ಆತ ಹೇಳಿದ್ದು: 'ಸಾರ್, ನಾನು ಕನ್ನಡದೋನೇ. ಆದ್ರೆ ನನ್ನ ಆಟೋ ಏರೋರು ಯಾರು ಕೂಡ ಕನ್ನಡ ಮಾತಾಡಲ್ಲ. ಕನ್ನಡದವರೇ ಆದ್ರೂ ವಿಮಾನ ನಿಲ್ದಾಣಕ್ಕೆ ಹೋಗೋವಾಗಲಂತೂ ಅಪ್ಪಿತಪ್ಪಿಯೂ ಕನ್ನಡ ಮಾತಾಡಲೊಲ್ಲರು. ಯಾಕೆ ಗೊತ್ತೇ? ಅವರಿಗೆ ಕನ್ನಡ ಮಾತಾಡಿದ್ರೆ ತಮ್ಮ ಪ್ರೆಸ್ಟೀಜ್ ಕಡಿಮೆ ಅನ್ನೋ ಭಾವನೆ. ಠುಸ್ ಪುಸ್ ಇಂಗ್ಲೀಷೋ, ಹಿಂದಿನೋ… ಅಥವಾ ಕನ್ನಡ ಬಿಟ್ಟು ಬೇರಾವುದೇ ಭಾಷೆ ಮಾಡಿದ್ರೇನೇ ಆತ್ಮತೃಪ್ತಿ ಮತ್ತು ಪ್ರೆಸ್ಟೀಜ್ ವಿಷ್ಯ ಕೂಡ'.

ಇದನ್ನು ಕೇಳಿ, ನಮ್ಮ ನೆಲದಲ್ಲೇ ಕನ್ನಡ ಅವಜ್ಞೆಗೊಳಗಾಗುತ್ತಿದೆ ಎಂಬ ಮಾತಿನಲ್ಲಿ ಉತ್ಪ್ರೇಕ್ಷೆ ಇರಲಿಲ್ಲ ಎಂಬುದು ಖಚಿತವಾಯಿತು. ಮತ್ತು ಈ ಮನೋಭಾವವು ಭರ್ಜರಿಯಾಗಿಯೇ ಕನ್ನಡ ರಾಜ್ಯೋತ್ಸವ ಆಚರಿಸುತ್ತಾ ಕನ್ನಡಾಭಿಮಾನ ಮೆರೆಯುತ್ತಿರುವ ಪಂಗಡಗಳಲ್ಲಿ ಒಂದಾಗಿರುವ ಆಟೋ-ಟ್ಯಾಕ್ಸಿ ಚಾಲಕರಿಗೆ ಸೀಮಿತವೂ ಅಲ್ಲ. ಕನ್ನಡದ ರಾಜಧಾನಿಯಲ್ಲಿ ಕನ್ನಡದ ಸ್ಥಿತಿ ಗತಿಯಿದು!

ಅದೇ ತಮಿಳುನಾಡು ನೋಡಿ. ಚೆನ್ನೈ ವಿಮಾನ ನಿಲ್ದಾಣದಲ್ಲಿ ಇಳಿದ ತಕ್ಷಣವೇ ಆಟೋ ಅಥವಾ ಟ್ಯಾಕ್ಸಿಯವ ಮಾತಾಡೋದೇ ತಮಿಳಿನಲ್ಲಿ. ಅಲ್ಲಿ ಇದ್ದದ್ದು ಇಲ್ಲಿ ಯಾಕಾಗುವುದಿಲ್ಲ? ಯಾಕಾಗುತ್ತಿಲ್ಲ? ಇದು ನಮಗೆ ನಾವೇ ಕೇಳಿಕೊಳ್ಳಬೇಕಾದ ಪ್ರಶ್ನೆ.

ಮನಸ್ಸಿನ ಉದಾರತೆ ಹೆಚ್ಚೇ ಆಯಿತು...
WD
ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಅವರು ಚೆನ್ನೈಗೆ ಬಂದಿದ್ದಾಗ ಹೇಳಿದ್ದ ಮಾತು ನೆನಪಾಗುತ್ತಿದೆ. “ಕನ್ನಡದ ನೆಲದಲ್ಲಿಯೇ ಕನ್ನಡ ಯಾರಿಗೂ ಬೇಡವಾಗುತ್ತಿದೆ. ಶಿಕ್ಷಣದಲ್ಲಿ ಕನ್ನಡ ಕಡ್ಡಾಯ ಮಾಡುವ ಕುರಿತು ನ್ಯಾಯಾಲಯಕ್ಕೆ ಮನವರಿಕೆ ಮಾಡುವ ಪ್ರಯತ್ನವೂ ಸರಕಾರದಿಂದ ಸಾಧ್ಯವಾಗಿಲ್ಲ" ಎಂದಿದ್ದ ಅವರು, “ಬೆಂಗಳೂರಿನಲ್ಲಿ ಶೇ.20 ಮಾತ್ರ ಕನ್ನಡ ಮಾತನಾಡುವವರಿದ್ದಾರೆ. ನಾವೋ, ಬೇರೆ ನಾಡಿಗೆ ಹೋದಾಗ ಅಲ್ಲಿನ ಭಾಷೆ ಕಲಿತುಕೊಳ್ಳಲು ಪ್ರಯತ್ನಿಸುತ್ತೇವೆ. ಆದರೆ, ಬೆಂಗಳೂರಿಗೆ ವಲಸೆ ಬಂದವರು ಅವರವರ ಭಾಷೆಯಲ್ಲಿಯೇ ಮಾತನಾಡುತ್ತಾರೆಯೇ ಹೊರತು ಕನ್ನಡ ಕಲಿಯುವ ಪ್ರಯತ್ನ ಮಾಡುತ್ತಿಲ್ಲ. ಇದಕ್ಕೆ ಪ್ರಮುಖ ಕಾರಣವೆಂದರೆ, ನಾವು ಅವರಿಗೆ ಅವರ ತಮಿಳು ಭಾಷೆಯಲ್ಲಿಯೇ ಉತ್ತರಿಸುವ ಪ್ರಯತ್ನ ಮಾಡುತ್ತೇವೆ.” ಎಂದಿದ್ದರು. ಕನ್ನಡಿಗರು ಉದಾರ ಹೃದಯಿಗಳು, ಅವರ ಉದಾರತೆ ಹೆಚ್ಚೇ ಆಗಿದೆ ಅನ್ನಿಸುವುದಿಲ್ಲವೇ?

ಪ್ರತಿಷ್ಠೆ ಬಿಟ್ಟು ಕನ್ನಡವನ್ನು ಪ್ರೀತಿಸ್ಬೇಕು...
ಹಿಂದೆಲ್ಲಾ ಕನ್ನಡಕ್ಕಾಗಿ ಸಾಕಷ್ಟು ಮಂದಿ ಹೋರಾಟ ಮಾಡಿದ್ದಾರೆ. ಅಂದು ಪರಿಸ್ಥಿತಿಯೇ ಬೇರೆ, ಈಗಿನ ಅನಿವಾರ್ಯತೆಯ ಸ್ಥಿತಿ ಬೇರೆ. ಅಂದು ಕನ್ನಡದ ರಕ್ಷಣೆಗಾಗಿ ಹೋರಾಟ ಬೇಕಿತ್ತು, ಇಂದು ಅದನ್ನು ಉಳಿಸಿಕೊಳ್ಳುವ ಹೋರಾಟ ಎನ್ನುವುದಕ್ಕಿಂತಲೂ ಇಚ್ಛಾಶಕ್ತಿ, ಪ್ರೀತಿ, ಕಳಕಳಿ ಬೇಕಿದೆ ನಮಗೆ.

ಕನ್ನಡದ ಪ್ರಜ್ಞೆ ಕಡಿಮೆ ಆಗುತ್ತಿದೆ, ಕನ್ನಡದ ಮನಸ್ಸುಗಳು ಸಂಕೋಚಗೊಳ್ಳುತ್ತಿವೆ. ಎಲ್ಲಿಯವರೆಗೆ ಎಂದರೆ, ಚೆನ್ನೈ-ಮಂಗಳೂರು ಅಥವಾ ಚೆನ್ನೈ-ಬೆಂಗಳೂರು ರೈಲಿನಲ್ಲಿ ಹೋಗುತ್ತಿದ್ದಾಗಲೂ, ಕನ್ನಡಿಗರನೇಕರು ತಮ್ಮ ಓದುವ ತುಡಿತ ಹತ್ತಿಕ್ಕಲಾರದೆ ಸುಧಾ, ತರಂಗ, ಮಯೂರ ಇತ್ಯಾದಿಗಳನ್ನು ಬೇರೆ ಆಂಗ್ಲ ಪತ್ರಿಕೆಯ ಮಧ್ಯೆ ಇಟ್ಟು ಓದಿನ ಹಸಿವು ತಣಿಸಿಕೊಳ್ಳುತ್ತಿದ್ದುದನ್ನು ಕಣ್ಣಾರೆ ಕಂಡಿದ್ದೇನೆ. ಅಂದರೆ ಕನ್ನಡ ಓದುವುದೆಂದರೆ ಪ್ರತಿಷ್ಠೆಯ ಕೊರತೆ ಎಂಬ ಭಾವನೆಯೋ ಇವರಿಗೆ? ಎಂಥ ಅಭಿಮಾನಶೂನ್ಯತೆ!

ಕುಂದುತ್ತಿದೆ ಭಾಷಾ ಪ್ರೇಮ...
ಕನ್ನಡದ ನಡು ನಡುವೆ ಪರಭಾಷೆಯ ಬಲವಂತ ಹೇರಿಕೆಯಾಗುತ್ತಿರುವುದನ್ನು ನಾವು ವೇದನೆಯಿಂದಲೇ ಗಮನಿಸುತ್ತಿದ್ದೇವೆ. ಎಲ್ಲಿಯವರೆಗೆ ಎಂದರೆ, ನಗರ ಪ್ರದೇಶ ಒತ್ತಟ್ಟಿಗಿರಲಿ, ಹುಯ್ಯೋ ಹುಯ್ಯೋ ಮಳೆರಾಯ ಅಂತೆಲ್ಲಾ ಮಳೆಯ ಬರುವಿಕೆಗಾಗಿ ಹೊಯ್ದಾಡುತ್ತಿದ್ದ ಗ್ರಾಮಾಂತರ ಪ್ರದೇಶದ ಮನಸ್ಸುಗಳು ಕೂಡ ಇಂದು 'ರೈನ್ ರೈನ್ ಗೋ ಅವೇ' ಅನ್ನೋ ಮಳೆಯನ್ನೇ ಓಡಿಸಿಬಿಡುವ ಪ್ರಾಸಕ್ಕೆ ಮರುಳಾಗಿ, ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಿರುವುದು ವಿಪರ್ಯಾಸವೇ ಸರಿ.

ಹಾಗಂತ, ಎಲ್ಲ ಕಡೆಗಳಲ್ಲಿ ಕನ್ನಡ ಕನ್ನಡ ಅಂತೇನೂ ಗಲಾಟೆ ಮಾಡಬೇಕಿಲ್ಲ. ಜೀವನೋಪಾಯಕ್ಕೆ ಇಂದು ಆಂಗ್ಲ ಭಾಷೆ ಅಗತ್ಯವಿದೆ, ಅದು ಇದ್ದರೆ ಆಧುನಿಕ ಯುಗದ, ಹೊಸ ತಂತ್ರಜ್ಞಾನದ, ಭರ್ಜರಿ ಸಂಪಾದನೆಯ ಉದ್ಯೋಗ ದೊರೆಯುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಕಂಪ್ಯೂಟರ್ ಯುಗದಲ್ಲಿ ಸಾಫ್ಟ್‌ವೇರ್ ಕ್ಷೇತ್ರ ಈ ಪರಿ ಬೆಳೆದಿದ್ದು ಇಂಗ್ಲಿಷ್ ಕೋಡಿಂಗ್‌ಗಳಿಂದ ಎಂಬುದು ಸತ್ಯ ಮತ್ತು ಪ್ರಾದೇಶಿಕ ಭಾಷೆಗಳಲ್ಲಿ ಅವುಗಳಿನ್ನೂ ಅಭಿವೃದ್ಧಿಯ ಹಂತದಲ್ಲಿವೆ ಎಂಬುದು ಕೂಡ ಅಷ್ಟೇ ನಿಜ. ಜಾಗತಿಕ ಮಟ್ಟದಲ್ಲಿ ನಾವು ಸ್ಪರ್ಧಿಸಬೇಕಿದ್ದರೆ, ಇಂಗ್ಲಿಷ್ ಶಾಲೆಗಳು ಹೆಚ್ಚಬೇಕಾಗಿದೆ ಎಂದು ಇನ್ಫೋಸಿಸ್‌ನ ನಾರಾಯಣ ಮೂರ್ತಿ ಹೇಳಿ ವಿವಾದ ಸೃಷ್ಟಿಸಿದ್ದನ್ನು ಕೂಡ ಇಲ್ಲಿ ನೆನಪಿಸಿಕೊಳ್ಳಬೇಕು.

ಕನ್ನಡ ಕಲಿತವನಿಗೆ ಕನ್ನಡ ನಾಡಿನಲ್ಲಿ ಒಳ್ಳೆಯ ಉದ್ಯೋಗ ದೊರೆಯುವುದಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದ್ದಾದರೂ ಹೇಗೆ? ಮತ್ತದೇ ಕಾರಣ ಧುತ್ತನೇ ಬಂದು ನಿಲ್ಲುತ್ತದೆ, 'ರಾಜಕೀಯ ಇಚ್ಛಾಶಕ್ತಿಯ ಕೊರತೆ'! ಅದನ್ನು ದೂರಿಯೂ ಪ್ರಯೋಜನವಿಲ್ಲ, ದೂರದೆಯೂ ಪ್ರಯೋಜನವಿಲ್ಲ.

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿದೆ ಅಂತ ನಾವೆಲ್ಲಾ ಹುಚ್ಚೆದ್ದು ಕುಣಿದವರಿದ್ದೇವೆ. ಏನು ಪ್ರಯೋಜನ ಅಂತ ಕೇಳಿದ್ರೆ, ಕೇಂದ್ರದಿಂದ ಕೋಟಿ ಕೋಟಿ ಹಣ ಬರುತ್ತದಂತೆ ಎಂಬ ಉತ್ತರವನ್ನೂ ಕೇಳಿದ್ದೇವೆ. ಅಷ್ಟಕ್ಕೇ ಸುಮ್ಮನಾಗಿದ್ದೇವೆ.

ಕನ್ನಡದ ಸುಗಂಧ ಸರ್ವವ್ಯಾಪಿ...
ನಮ್ಮ ನಿಮ್ಮೆಲ್ಲರ ವೆಬ್‌ದುನಿಯಾ ಕನ್ನಡದ ಪುಟ್ಟ ತಂಡ ಇರುವುದು ತಮಿಳರ ನಾಡಿನಲ್ಲಿ. ಹೇಳಿ ಕೇಳಿ ಭಾಷೆಯ ಮೇಲೆ ವಿಪರೀತ ಅಭಿಮಾನವಿರುವ (ಕೆಲವೊಮ್ಮೆ ದುರಭಿಮಾನವನ್ನೂ ಕಾಣುತ್ತೇವೆ) ಅಲ್ಲಿ ಇದ್ಕೊಂಡು ಏನು ಕನ್ನಡದ ಸಾಧನೆ ಮಾಡ್ತೀರಾ ಅಂತ ಉಡಾಫೆಯ ಮಾತುಗಳನ್ನು ನಮ್ಮ ಕೆಲವು ಓದುಗರೂ ಕೇಳಿದ್ದಾರೆ. ಕನ್ನಡದ ಕೈಂಕರ್ಯ ಮಾಡಲು, ಕನ್ನಡದ ಬಗ್ಗೆ ಹೆಮ್ಮೆ ಪಟ್ಟುಕೊಳ್ಳಲು, ತಮಿಳರ ನಾಡಿನಲ್ಲಿದ್ದುಕೊಂಡು ಕನ್ನಡದ ಹೆಸರು ಹೇಳಿ ಅನ್ನ ತಿನ್ನುತ್ತೇವೆ ಎಂದು ಎದೆತಟ್ಟಿ ಹೇಳಿಕೊಳ್ಳಲು ದೇಶ-ಗಡಿ ಯಾವುದೂ ಅಡ್ಡಿಯಾಗುವುದಿಲ್ಲ ಎಂಬುದೇ ನಮ್ಮ ಉತ್ತರ. ಕನ್ನಡವೆಂಬುದು ಎಲ್ಲಿದ್ದರೂ ತನ್ನ ಸುಗಂಧ ಬೀರುತ್ತಿರುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.

ಆದರೆ ಹಾಗಂತ, ನಮ್ಮ ತಾಯ್ನುಡಿಯ ಬಗ್ಗೆ ನಮಗೆ ತಾತ್ಸಾರವಿರಬಾರದು, ನಾಚಿಕೆಯೂ ಇರಬಾರದು ಅಲ್ಲವೇ? ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳು ಸಮದಂಡಿಯಾಗಿದ್ದರೆ, ಒಂದು ಭಾಷೆಯು ಪ್ರೀತಿಗೆ ಮತ್ತೊಂದು ವ್ಯವಹಾರಕ್ಕೆ. ಪ್ರೀತಿ ಎಂಬುದು ಬಲವಂತವಾಗಿ ಹುಟ್ಟಲಾರದು ಎಂಬುದು ಯುವ ಜನಾಂಗದ ಅನುಭವ. ಹೀಗಾಗಿ ಕನ್ನಡ ಪ್ರೀತಿ ಮನಸ್ಸಿನೊಳಗೆ ಹುಟ್ಟಬೇಕು. ಅದು ಭಾವನಾತ್ಮಕವಾಗಿ ಬೆಳಯಬೇಕೇ ಹೊರತು, ವ್ಯಾವಹಾರಿಕವಾಗಿ ನಮ್ಮೊಳಗೆ ಮೊಳೆತುಕೊಂಡು ಬೆಳೆದರೆ ಖಂಡಿತಾ ಕನ್ನಡದ ಉದ್ಧಾರ ಸಾಧ್ಯವಿಲ್ಲ.

ಕನ್ನಡ ಬೆಳೆಯಬೇಕಿದ್ದರೆ, ಕನ್ನಡಿಗರು ಬೆಳೆಯಬೇಕು. ಹೀಗಾಗಿ ಉದ್ಯೋಗ ಕ್ಷೇತ್ರಗಳಲ್ಲಿ ಕಟ್ಟಾ ಕನ್ನಡಿಗರಿಗೆ ಮೀಸಲಾತಿ ನೀಡಬೇಕು, ಆದರೆ ಕನ್ನಡದ ಹೆಸರಲ್ಲಿ ಉದ್ಯೋಗ ಗಿಟ್ಟಿಸಿಕೊಂಡವರು ಕನ್ನಡದ ಅಭಿವೃದ್ಧಿಗೆ ಇಂಥದ್ದನ್ನು ಮಾಡಬೇಕು ಎಂಬ ಕಟ್ಟುಪಾಡು ಇರಬೇಕು. ಏನಂತೀರಿ?

[ಕನ್ನಡಿಗ ಓದುಗ ಬಂಧುಗಳಲ್ಲಿ ಮತ್ತೆ ಮನವಿ. ವೆಬ್‌ದುನಿಯಾದ ಯಾವುದೇ ಚರ್ಚಾ ವಿಭಾಗಗಳಲ್ಲಿ, ನೀವು ಕಲಿತ ಕನ್ನಡದ ಕಗ್ಗೊಲೆ ಮಾಡಬೇಡಿ. ಅಶ್ಲೀಲ, ಅಸಭ್ಯ, ಹೊಲಸು ಪದಗಳ ಬಳಕೆಯನ್ನು, ಒಮ್ಮೆ ಹಾಕಿದ್ದನ್ನೇ ನಕಲು ಮಾಡಿ ಪುನಃ ಪುನಃ ಹಾಕಬೇಡಿ. ಹಾಗಂತ ಈ ರಾಜ್ಯೋತ್ಸವಕ್ಕೊಂದು ನಿರ್ಣಯ/ಪ್ರತಿಜ್ಞೆ/ಶಪಥ ಕೈಗೊಳ್ಳಿ. ಎಲ್ಲರಿಗೂ ಒಳ್ಳೆಯದಾಗಲಿ.]

||ಸವಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ||

ಇದೂ ಓದಿ
ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ...

ವೆಬ್ದುನಿಯಾವನ್ನು ಓದಿ