ಟಿಕೆಟ್ ನಿರಾಸೆ: ಬಿಜೆಪಿಯಲ್ಲಿ ಭಿನ್ನಮತದ ಹೊಗೆ

ಸೋಮವಾರ, 14 ಏಪ್ರಿಲ್ 2008 (15:35 IST)
ಭಾನುವಾರ ಬಿಜೆಪಿ ಪ್ರಕಟಿಸಿದ ಅಭ್ಯರ್ಥಿಗಳ ಪಟ್ಟಿಯಲ್ಲಿ ಸುಮಾರು 12ರಷ್ಟು ಟಿಕೆಟ್ ವಂಚಿತರು ಅಸಮಾಧಾನದ ಹೊಗೆ ಎಬ್ಬಿಸಿದ್ದಾರೆ.

ಗೋವಿಂದರಾಜನಗರ ಕ್ಷೇತ್ರದಲ್ಲಿ ರವೀಂದ್ರ ಅವರಿಗೆ ಟಿಕೆಟ್ ನೀಡಿದ್ದನ್ನು ವಿರೋಧಿಸಿರುವ ಆ ಕ್ಷೇತ್ರದ ಇನ್ನೋರ್ವ ಟಿಕೆಟ್ ಆಕಾಂಕ್ಷಿ ಅಶೋಕ್ ಕುಮಾರ್ ಬೆಂಬಲಿಗರು, ಸೋಮವಾರ ಬಿಜೆಪಿ ಹಿರಿಯ ಮುಖಂಡ ಹಾಗೂ ಸಂಸದ ಅನಂತ್ ಕುಮಾರ್ ಮನೆಯ ಎದುರು ಧರಣಿ ನಡೆಸಿದ್ದಾರೆ.

ಅಶೋಕ್ ಕುಮಾರ್ ಅವರು ಅನಂತ್ ಬೆಂಬಲಿಗರು. ಈ ನಿಟ್ಟಿನಲ್ಲಿ ತಮ್ಮ ಬೆಂಬಲಿಗರನ್ನು ಬಿಟ್ಟು ವಲಸಿಗರಿಗೆ ಮಣೆ ಹಾಕಿರುವುದಕ್ಕೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಶಕುಂತಳಾ ಶೆಟ್ಟಿ ಸೇರಿದಂತೆ ಹಲವು ನಾಯಕರು ಬಿಜೆಪಿ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದಾರೆ.

ಈ ಮಧ್ಯೆ, ಜೆಡಿಎಸ್ ಇಂದು ಕರೆದಿದ್ದ ಸಂಸದೀಯ ಸಭೆಯನ್ನು ನಾಳೆಗೆ ಮುಂದೂಡಿದೆ. ಪಕ್ಷದ ಹಿರಿಯ ನಾಯಕರಾದ ದೇವೇಗೌಡರ ಅನುಪಸ್ಥಿತಿಯೇ ಇದಕ್ಕೆ ಕಾರಣ ಎನ್ನಲಾಗಿದೆ.

ಇದೇ ವೇಳೆ, ಮಾಜಿ ಮುಖ್ಯಮಂತ್ರಿ ಒಂದೇ ಬಾರಿ ಚುನಾವಣಾ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವುದಾಗಿ ಘೊಷಿಸಿದ್ದರೆ, ಇತ್ತ ದೇವೇಗೌಡರು ಮೊದಲ ಹಂತದ ಪಟ್ಟಿಯಲ್ಲಿ 90 ಅಭ್ಯರ್ಥಿಗಳಿಗೆ ಅವಕಾಶ ನೀಡುವುದಾಗಿ ಘೋಷಿಸಿದ್ದಾರೆ. ಅಲ್ಲದೆ, ಪಟ್ಟಿಯನ್ನು ಇದೇ ತಿಂಗಳ 20ರಂದು ಪ್ರಕಟಿಸುವುದಾಗಿ ತಿಳಿಸಿದ್ದಾರೆ. ಆದರೆ ಸಭೆಯನ್ನು ಮುಂದೂಡಿರುವುದು ಪಕ್ಷದ ಟಿಕೆಟ್ ಆಕಾಂಕ್ಷಿಗಳಿಗೆ ತೀವ್ರ ನಿರಾಸೆ ಉಂಟಾಗಿದೆ ಎಂದು ತಿಳಿದು ಬಂದಿದೆ.

ವೆಬ್ದುನಿಯಾವನ್ನು ಓದಿ