ಸಾರಾಯಿ ಜಾರಿ: ಖರ್ಗೆ ಅಸಮಾಧಾನ

ಮಂಗಳವಾರ, 6 ಮೇ 2008 (17:02 IST)
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಾರಾಯಿ ನಿಷೇಧ ಹಿಂತೆಗೆದುಕೊಳ್ಳಲಾಗುವುದು ಎಂದು ಕಾಂಗ್ರೆಸ್ ಹಿರಿಯ ಮುಖಂಡ ಜರ್ನಾರ್ಧನ ಪೂಜಾರಿ ಇತ್ತೀಚೆಗೆ ನೀಡಿರುವ ಹೇಳಿಕೆಗೆ ಪಕ್ಷದ ಮುಖಂಡರೇ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಸಾರಾಯಿ ಜಾರಿಗೊಳಿಸುವುದಾಗಿ ಹೇಳಿರುವುದು ಪೂಜಾರಿ ಅವರವೈಯಕ್ತಿಕ ವಿಚಾರ ವಿನಃ ಪಕ್ಷದ ವಿಚಾರವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರಣಾಳಿಕೆಯಲ್ಲಿ ತಿಳಿಸಿರುವ ಅಂಶಗಳನ್ನು ಜಾರಿಗೆ ತರುತ್ತೇವೆ. ಪ್ರಣಾಳಿಕೆ ಅಂಶಗಳನ್ನು ಬಿಟ್ಟು ನಾಯಕರು ಇತರ ಯಾವುದೇ ವಿಷಯವನ್ನೂ ಪ್ರಸ್ತಾಪಿಸಿದರೂ, ಅದು ಅವರ ವೈಯಕ್ತಿಕ ಅಭಿಪ್ರಾಯಗಳಾಗುತ್ತವೆಯೇ ಹೊರತು ಪಕ್ಷದ್ದಾಗುವುದಿಲ್ಲ ಎಂದು ತಿಳಿಸಿದರು.

ಪಕ್ಷದ ಪ್ರಣಾಳಿಕೆಯನ್ನು ಸಿದ್ದಪಡಿಸುವುದಕ್ಕಾಗಿ ಹಿರಿಯ ಮುಖಂಡ ಸಿ.ಕೆ. ಜಾಫರ್ ಶರೀಫ್ ನೇತೃತ್ವದಲ್ಲಿ ಉನ್ನತ ಸಮಿತಿ ರಚಿಸಲಾಗಿದ್ದು, ರಾಜ್ಯದ ಸಮಗ್ರ ಅಭಿವೃದ್ದಿಯನ್ನು ಗಮನದಲ್ಲಿಟ್ಟುಕೊಂಡು ಪ್ರಣಾಳಿಕೆ ಸಿದ್ದಪಡಿಸಲಾಗಿದೆ. ಪ್ರಣಾಳಿಕೆಯಲ್ಲಿ ಸಾರಾಯಿ ನಿಷೇಧ ಕುರಿತು ಪ್ರಸ್ತಾಪ ಮಾಡದೇ ಇರುವುದರಿಂದ ಯಾವುದೇ ಗೊಂದಲ ಬೇಡ ಎಂದು ಅವರು ತಿಳಿಸಿದರು.

ವೆಬ್ದುನಿಯಾವನ್ನು ಓದಿ