ಟೆಸ್ಟ್ ಎವರೆಸ್ಟ್ ಶಿಖರಾಗ್ರದಲ್ಲಿ ಮಾಸ್ಟರ್ ಬ್ಲಾಸ್ಟರ್

ಅವಿನಾಶ್

PTI
ಕ್ರಿಕೆಟ್ ಜಗತ್ತಿನ ಮಾಸ್ಟರ್ ಬ್ಲಾಸ್ಟರ್ ಖ್ಯಾತಿಯ ಸಚಿನ್ ರಮೇಶ್ ತೆಂಡುಲ್ಕರ್ ಎಂಬ ಈ ಮುಂಬಯಿಯ ಸಿಡಿಲ ಮರಿ, ಮೊಹಾಲಿಯಲ್ಲಿ ಶುಕ್ರವಾರ ಟೆಸ್ಟ್ ಕ್ರಿಕೆಟ್ ರನ್ನುಗಳ ಮೇರು ಪರ್ವತವೇರಿ, ಬ್ರಿಯಾನ್ ಲಾರಾ ಎಂಬ ವಿಂಡೀಸ್ ದೈತ್ಯನ ವಿಶ್ವದಾಖಲೆ ಮುರಿದು ಮುನ್ನಡೆದರು. ಅವರೀಗ ವಿಶ್ವ ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್ನುಗಳ ಸರದಾರ. ಇದನ್ನು ಕ್ರಿಕೆಟ್ ಚರಿತ್ರೆಯ ಮೈಲಿಗಲ್ಲು ಎನ್ನಿ, ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ಕ್ಷಣ ಎನ್ನಿ. ಸಿಡಿಲ ಮರಿಗೆ ಸಾಟಿ ಯಾರೂ ಇಲ್ಲ ಎಂಬುದು ಅಷ್ಟೇ ದಿಟ. ಅವರೀಗ 12 ಸಾವಿರ ಕ್ರಿಕೆಟ್ ಟೆಸ್ಟ್ ರನ್ನುಗಳನ್ನು ದಾಟಿದ ಏಕೈಕ ಆಟಗಾರ.

ಲಾರಾ ಅವರು 131 ಟೆಸ್ಟ್ ಪಂದ್ಯಗಳಲ್ಲಿ ಒಟ್ಟುಗೂಡಿಸಿದ್ದ 11,953 ರನ್ನುಗಳನ್ನು ತಮ್ಮ 151ನೇ ಪಂದ್ಯದಲ್ಲಿ ಹಿಂದಿಕ್ಕಿದ ಸಚಿನ್, ಇದೀಗ ಅಗ್ರಮಾನ್ಯ ರನ್ ಸರದಾರ. ಈ ರನ್ನುಗಳ ಶಿಖರವೇರುವ ಕ್ಷಣಗಳಿಗಾಗಿ ಅವರು ಸಾಕಷ್ಟು ಕಾಯಬೇಕಾಯಿತು ಎಂಬುದು ನಿರ್ವಿವಾದ. ಈ ಹಿಂದಿನ ಶ್ರೀಲಂಕಾ ಸರಣಿಯಲ್ಲೇ ಅವರು ದಾಖಲೆ ಮುರಿಯುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಅಲ್ಲಿ ನಡೆದ ಮೂರು ಟೆಸ್ಟ್ ಪಂದ್ಯಗಳಲ್ಲಿ ಸಚಿನ್ ಬ್ಯಾಟಿನಿಂದ ಹೊರಬಂದದ್ದು ಕೇವಲ 95 ರನ್ನುಗಳು ಮಾತ್ರ.

PTI
ಆಸೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ನಡೆದ ಬೆಂಗಳೂರಿನಲ್ಲಿ 49 ರನ್ ಗಳಿಸಿ ಔಟಾಗಿದ್ದ 35ರ ಹರೆಯದ ಸಚಿನ್‌ಗೆ ಈ ದಾಖಲೆ ಮಾಡಲು ಬೇಕಾಗಿದ್ದುದು ಕೇವಲ 15 ರನ್ನುಗಳು. ಶುಕ್ರವಾರದ ಶುಭದಿನ ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಶನ್ ಮೈದಾನದಲ್ಲಿ ಈ ಕ್ಷಣಗಳಿಗಾಗಿ ಕಾತರದಿಂದ ಕಾಯುತ್ತಿದ್ದ ಮೊಹಾಲಿ ಕ್ರಿಕೆಟ್ ಅಭಿಮಾನಿಗಳನ್ನು ಈ 35ರ ಹರೆಯದ ವಂಡರ್ ಕಿಡ್ ನಿರಾಶೆಗೊಳಿಸಲಿಲ್ಲ. ಅದೆಷ್ಟೋ ಬಾರಿ ಕಾಂಗರೂಗಳನ್ನು ಚಚ್ಚುತ್ತಲೇ, ಕಾಡುತ್ತಲೇ ಇದ್ದ ಸಚಿನ್, ಅದೇ ಬಲಾಢ್ಯ ತಂಡದ ವಿರುದ್ಧ ಈ ಸಾಧನೆ ದಾಖಲಿಸಿದ್ದು ಕೂಡ ಇಲ್ಲಿ ಗಮನಾರ್ಹ.


ಆಸ್ಟ್ರೇಲಿಯಾ ಪರವಾಗಿ ಚೊಚ್ಚಲ ಕ್ರಿಕೆಟ್ ಆಡುತ್ತಿರುವ ಸಿಡ್ಲ್ ಎಸೆತವನ್ನು ಥರ್ಡ್ ಮ್ಯಾನ್‌ನತ್ತ ಅಟ್ಟಿದ ಸಚಿನ್, ಟೆಸ್ಟ್ ರನ್ನುಗಳ ಪರ್ವತದ ಶಿಖರಾಗ್ರ ತಲುಪಿದರು. ಸ್ಟೇಡಿಯಂ ತುಂಬೆಲ್ಲಾ ಪಟಾಕಿ, ಹರ್ಷೋದ್ಗಾರ. ಪ್ರೇಕ್ಷಕರೆಲ್ಲರೂ ಎದ್ದುನಿಂತು ಸಿಡಿಲ ಮರಿಗೆ ಅಭಿವಂದನೆ ಸಲ್ಲಿಸಿದರು. ಆಸೀಸ್ ಆಟಗಾರರೆಲ್ಲರೂ ಈ ಪೋರನ ಕೈಕುಲುಕಿ ಅಭಿನಂದನೆಗೈದರು. ಯಾವ ಬೌಲರ್ ಎಸೆತಕ್ಕೆ ಸಚಿನ್ 3 ರನ್ ಹೊಡೆದು ಈ ವಿಶ್ವ ದಾಖಲೆ ಸ್ಥಾಪಿಸಿದರೋ, ಅದೇ ಬೌಲರ್, ಚೊಚ್ಚಲ ಅಂತಾರಾಷ್ಟ್ರೀಯ ಏಕದಿನ ಪಂದ್ಯವಾಡುತ್ತಿರುವ ಪೀಟರ್ ಮ್ಯಾಥ್ಯೂ ಸಿಡ್ಲ್ ಅವರಿಗಿದು ಮರೆಯಲಾರದ ಪಂದ್ಯ. ಯಾಕೆಂದರೆ ಸಿಡ್ಲ್‌ಗೇ ಈ ಸಿಡಿಲಮರಿ ವಿಕೆಟ್ ಕೂಡ ದೊರೆಯಿತು. ಅದು ಕೂಡ ಚೊಚ್ಚಲ ಅಂತಾರಾಷ್ಟ್ರೀಯ ವಿಕೆಟ್!

ಆಸೀಸ್ ತಂಡಕ್ಕೂ ಸಚಿನ್ ಅವರ ಈ ಸಾಧನೆ ವಿಶೇಷವಾದದ್ದು. ಯಾಕೆಂದರೆ ಬ್ರಿಯಾನ್ ಲಾರಾ ಅವರು 2005ರಲ್ಲಿ ಅಡಿಲೇಡ್‌ನಲ್ಲಿ ಮುರಿದದ್ದು ಇದೇ ಆಸ್ಟ್ರೇಲಿಯಾದ ಅಂದಿನ ನಾಯಕ ಅಲನ್ ಬಾರ್ಡರ್ ಅವರ ಅತ್ಯಧಿಕ ರನ್ನುಗಳ ದಾಖಲೆಯನ್ನು. ಇದೀಗ ಲಾರಾ ದಾಖಲೆ ನುಚ್ಚುನೂರಾಗಿದೆ.

ಬ್ರಿಯಾನ್ ಲಾರಾ ಅವರು 131 ಪಂದ್ಯಗಳ 232 ಇನ್ನಿಂಗ್ಸ್‌ಗಳಲ್ಲಿ ಆಡಿ 11,953 ರನ್ ಸಂಪಾದಿಸಿದ್ದರು. ಇದರಲ್ಲಿ, ಇದುವರೆಗೆ ವಿಶ್ವದ ಯಾವುದೇ ಕ್ರಿಕೆಟಿಗ ದಾಖಲಿಸಿರದ, ವಿಶ್ವ ದಾಖಲೆಯ ಅಜೇಯ 400 ರನ್ನುಗಳು (ಇಂಗ್ಲೆಂಡ್ ವಿರುದ್ಧ) ಕೂಡ ಸೇರಿದೆ. ಸಚಿನ್ ತಮ್ಮ 19 ವರ್ಷಗಳ ಕ್ರಿಕೆಟ್ ವೃತ್ತಿ ಜೀವನದಲ್ಲಿ ಆಡಿದ್ದು 151 ಟೆಸ್ಟ್ ಪಂದ್ಯಗಳು ಹಾಗೂ 246 ಇನ್ನಿಂಗ್ಸ್‌ಗಳು. ಅವರು ದಾಖಲಿಸಿದ ಅತ್ಯಧಿಕ ರನ್ ಎಂದರೆ ಅಜೇಯ 248. ಅವರು 54.17ರ ರನ್ ಸರಾಸರಿಯಲ್ಲಿ 39 ಶತಕಗಳು, 50 ಅರ್ಧಶತಕಗಳನ್ನು ಇದುವರೆಗೆ ಸಿಡಿಸಿದ್ದಾರೆ.

ಏಕದಿನ ಪಂದ್ಯಗಳಲ್ಲೂ ಮೇರು ಸಾಧನೆ ಮಾಡಿರುವ ಸಚಿನ್, ಇದುವರೆಗೆ 417 ಪಂದ್ಯಗಳಲ್ಲಿ 407 ಇನ್ನಿಂಗ್ಸ್ ಆಡಿ, 16,361 ರನ್ ಸಂಗ್ರಹಿಸಿದ್ದಾರೆ. ಇದರಲ್ಲಿ ಅತ್ಯಧಿಕ 42 ಶತಕಗಳು, 89 ಅರ್ಧ ಶತಕಗಳು ಸೇರಿದ್ದು, ಬ್ಯಾಟಿಂಗ್ ಸರಾಸರಿ 44.33, ಸ್ಟ್ರೈಕ್ ರೇಟ್ 85.49. ಅತ್ಯಧಿಕ ರನ್ ಅಜೇಯ 186.

PTI
ಫ್ರಂಟ್ ಫುಟ್ ಮತ್ತು ಬ್ಯಾಕ್ ಫುಟ್ ಎರಡರಲ್ಲೂ ಅತ್ಯದ್ಭುತವಾಗಿ ಬ್ಯಾಟು ಬೀಸಬಲ್ಲ ಈ ಹುಡುಗ, ಮೈದಾನದ ಆದ್ಯಂತ ಚೆಂಡು ಅಟ್ಟಾಡಿಸಿ ರನ್ ಗಳಿಸಬಲ್ಲ ಸಾಮರ್ಥ್ಯವುಳ್ಳವರು. ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ, ವಿವಿಎಸ್ ಲಕ್ಷ್ಮಣ್ ಮುಂತಾದವರು ತಂಡ ಸೇರಿಕೊಂಡಾಗ ಸಚಿನ್ ಮೇಲಿನ ಒತ್ತಡ ಒಂದಷ್ಟು ಕಡಿಮೆಯಾಯಿತಷ್ಟೇ ಆದರೂ, ಅನಿವಾರ್ಯ ಸಂದರ್ಭಗಳಲ್ಲಿ ಎಲ್ಲರೂ ಮುಖ ಮಾಡುತ್ತಿದ್ದುದು... "ಸಚಿನ್ ಇದ್ದಾರಲ್ಲ" ಎಂದೇ! ಎದುರಾಳಿ ತಂಡಗಳಿಗೆ ಅತ್ಯಂತ ಬಹುಮೂಲ್ಯ ವಿಕೆಟ್ ಆಗಿದ್ದುದು ಕೂಡ ಅವರೇ!

ಕ್ರಿಕೆಟ್ ಜಗತ್ತಿನ ಸರ್ವಶ್ರೇಷ್ಠ ದಂತಕಥೆ ಡಾನ್ ಬ್ರಾಡ್ಮನ್ ಅವರೇ ಸಚಿನ್ ಶೈಲಿಗೆ ಮಾರು ಹೋಗಿ ಅಭಿನಂದಿಸಿರುವುದು ಅವರೊಳಗಿನ ಸಾಮರ್ಥ್ಯಕ್ಕೆ ನಿಚ್ಚಳ ನಿದರ್ಶನ. 16ನೇ ವಯಸ್ಸಿಗೇ ಟೆಸ್ಟ್ ಕ್ರಿಕೆಟಿಗೆ ಪಾದಾರ್ಪಣೆ ಮಾಡಿದ ಅವರು ಮೊದಲ ಟೆಸ್ಟ್ ಶತಕ ದಾಖಲಿಸಿದ್ದು ಓಲ್ಡ್ ಟ್ರಾಫರ್ಡ್‌ನಲ್ಲಿ. ಆಗ ಅವರ ವಯಸ್ಸು 17. ಇದೀಗ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್‌ಗಳೆರಡರಲ್ಲೂ ಅತ್ಯಧಿಕ ಶತಕ ದಾಖಲಿಸಿದ ಅಗ್ರಮಾನ್ಯ ಕ್ರಿಕೆಟಿಗ ಎಂಬ ಹಿರಿಮೆ ಅವರದು. ವಿಶೇಷವೇನು ಗೊತ್ತೆ? ಅವರ ಮೊದಲ ಏಕದಿನ ಶತಕ ದಾಖಲಾಗಿದ್ದು 79ನೇ ಪಂದ್ಯದಲ್ಲಿ!

ಟೆಸ್ಟ್ ಕ್ರಿಕೆಟಿನ ಅಗ್ರಗಣ್ಯ 10 ಮಂದಿಯ ದಾಖಲೆಯ ಪಟ್ಟಿ ಇಲ್ಲಿದೆ
ಇದೀಗ ತೆಂಡುಲ್ಕರ್ ಅವರನ್ನು ಟೆಸ್ಟ್ ಕ್ರಿಕೆಟ್‌ನಲ್ಲಿ ಹಿಂದಿಕ್ಕಬಲ್ಲವರು ಭಾರತದ ರಾಹುಲ್ ದ್ರಾವಿಡ್ (10,341) ಆಸ್ಟ್ರೇಲಿಯಾ ನಾಯಕ ರಿಕಿ ಪಾಂಟಿಂಗ್ (10,239).

ಸಚಿನ್ ಅದ್ಭುತ ಆಟ ದಾಖಲಾಗಿದ್ದು 1999ರಲ್ಲಿ ನ್ಯೂಜಿಲೆಂಡ್ ವಿರುದ್ಧ. ಅವರು ಗಳಿಸಿದ ಅಜೇಯ 126 ರನ್ ಅಂದು ವಿಶೇಷವಾಗಿತ್ತು. ಅಂದು ಮೊದಲ ಇನ್ನಿಂಗ್ಸಿನಲ್ಲಿ ಭಾರತವು ಕೇವಲ 83 ರನ್ನುಗಳಿಗೆ ಗಂಟು ಮೂಟೆ ಕಟ್ಟಿದ್ದರೆ, ಎರಡನೇ ಇನ್ನಿಂಗ್ಸಿನಲ್ಲಿ ಸಚಿನ್ ಶತಕದ ನೆರವಿನಿಂದ 3 ವಿಕೆಟ್ ನಷ್ಟಕ್ಕೆ 505 ರನ್ ಸೇರಿಸಿ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು ಭಾರತ.

ಸ್ವತಃ ಬ್ರಿಯಾನ್ ಲಾರಾ ಅವರೇ ಸಚಿನ್ ತನ್ನ ದಾಖಲೆ ಮುರಿಯಲಿ, ಗುಡ್‌ಲಕ್ ಎಂದು ಹಾರೈಸಿರುವುದು ಈ ವಿಶ್ವವಿಖ್ಯಾತ ದಾಂಡಿಗನ ಬ್ಯಾಟು ಬೀಸುವಿಕೆಗೆ ದೊರೆತ ಗೌರವವೂ ಹೌದು.

ಭಾರತ ಕಂಡ ಮಹಾನ್ ಕ್ರಿಕೆಟಿಗ, ಭಾರತ ಮಾತೆಯ ಹೆಮ್ಮೆಯ ಪುತ್ರ ಸಚಿನ್ ತೆಂಡುಲ್ಕರ್ ಕ್ರಿಕೆಟ್ ಜಗತ್ತನ್ನು ಮತ್ತಷ್ಟು ಕಾಲ ಬೆಳಗಿಸಲಿ ಎಂಬುದು ಅಭಿಮಾನಿಗಳ ಸದಾಶಯ.