- ಭುವನ್ ಪುದುವೆಟ್ಟು ಈ ಸ್ಥಿತಿಗೆ ಐಪಿಎಲ್ ಕಾರಣ ಎಂದು ಗ್ಯಾರಿ ಕಸ್ಟರ್ನ್ ಒಂದು ಕಡೆಯಿಂದ ಮೂದಲಿಸುತ್ತಿದ್ದರೆ ಅತ್ತ ಧೋನಿ ಆಯ್ಕೆ ಸರಿಯಿರಲಿಲ್ಲ ಎಂದು ಗೊಂದಲವೆಬ್ಬಿಸಿದ್ದಾರೆ. ಐಪಿಎಲ್‌ನಲ್ಲಿ ಭರಪೂರ ರನ್‌ಗಳ ಹೊಳೆಯನ್ನೇ ಹರಿಸಿದ್ದ ದಾಂಡಿಗರು ಅದೇ ಪ್ರಕಾರದ ವಿಶ್ವಕಪ್‌ನಲ್ಲಿ ವಿಫಲವಾದದ್ದು ಯಾಕೆ?
ರೋಹಿತ್ ಶರ್ಮಾ, ಸುರೇಶ್ ರೈನಾ, ಧೋನಿ ಮುಂತಾದವರು ಕಾಂಚಾಣಪೂರಿತ ಐಪಿಎಲ್‌ನಲ್ಲಿ ಈ ಬಾರಿಯೂ ಮಿಂಚಿದ್ದರು. ಅನುಭವ ಪಡೆದುಕೊಂಡ ಕಾರಣ ಆಟದಲ್ಲಿ ಇನ್ನೂ ಹೆಚ್ಚಿನ ಪಕ್ವತೆ ಕಂಡು ಬರಬೇಕಿತ್ತು. ಆದರೆ ಐಪಿಎಲ್‌ನ ಅರ್ಧ ನಿರ್ವಹಣೆಯನ್ನೂ ಅವರು ನೀಡಲು ವಿಫಲರಾಗಿದ್ದಾರೆ.
ಅಲ್ಲಿ ಬಳಲಿದ್ದರು ಎಂಬುದು ಭಾರತೀಯರಿಗೆ ಮಾತ್ರ ಯಾಕೆ ಅನ್ವಯವಾಗಬೇಕು? ವೆಸ್ಟ್‌ಇಂಡೀಸ್‌ನ ಕ್ರಿಸ್ ಗೇಲ್ ಐಪಿಎಲ್‌ನಲ್ಲಿ ಆಡಿದ ನಂತರ ಟೆಸ್ಟ್ ಸರಣಿಯಲ್ಲೂ ಬೆವರು ಹರಿಸಿದ್ದರು. ಇದೀಗ ವಿಶ್ವಕಪ್‌ನಲ್ಲಿ ಅವರ ಶಕ್ತಿ ಕುಂದಿದೆಯೇ? ಅಷ್ಟಕ್ಕೂ ಅವರೇನೂ ಭಾರತೀಯ ತಂಡದಲ್ಲಿರುವ ಆಟಗಾರರಷ್ಟು ಯುವಕರಲ್ಲ.
ಜಾಕ್ವಾಸ್ ಕ್ಯಾಲಿಸ್, ತಿಲಕರತ್ನೆ ದಿಲ್‌ಶಾನ್, ಸನತ್ ಜಯಸೂರ್ಯ, ದ್ವಾಯ್ನೆ ಬ್ರಾವೋ, ಹರ್ಷೆಲ್ ಗಿಬ್ಸ್, ಕುಮಾರ ಸಂಗಕ್ಕರ ಮುಂತಾದ ಅಗ್ರ ಆಟಗಾರರು ಇದೇ ಕಾರಣವನ್ನು ಯಾಕೆ ನೀಡಿಲ್ಲ ಅಥವಾ ಪ್ರದರ್ಶನದಲ್ಲಿ ಹಿನ್ನಡೆಯನ್ನು ಯಾಕೆ ಅನುಭವಿಸಿಲ್ಲ?
PTI
ಧೋನಿ ಹೇಳುವಂತೆ ಗಾಯಾಳು ಆಟಗಾರರನ್ನು ವಿಶ್ವಕಪ್ ತಂಡಕ್ಕೆ ಆರಿಸಲಾಗಿತ್ತು ಎನ್ನುವುದು ಕೂಡ ಸಮರ್ಥನೀಯವಲ್ಲ. ಯುವರಾಜ್ ಸಿಂಗ್, ಗೌತಮ್ ಗಂಭೀರ್, ಸುರೇಶ್ ರೈನಾ, ರೋಹಿತ್ ಶರ್ಮಾ, ಯೂಸುಫ್ ಪಠಾಣ್.. ಅಷ್ಟೇ ಯಾಕೆ ಸ್ವತಃ ಧೋನಿ ಗಾಯಾಳು ಆಟಗಾರರೇ? ಇವರಲ್ಲಿಬ್ಬರಾದರೂ ಪಂದ್ಯವೊಂದರಲ್ಲಿ ಎದೆಯೊಡ್ಡಿ ನಿಲ್ಲುತ್ತಿದ್ದರೆ ಸೋಲು ಬರುತ್ತಿತ್ತೇ? ಗಾಯಾಳುಗಳಾಗಿದ್ದು ವೀರೇಂದ್ರ ಸೆಹ್ವಾಗ್ ಮತ್ತು ಜಹೀರ್ ಖಾನ್ ಮಾತ್ರ. ಸೆಹ್ವಾಗ್ ತಂಡದಲ್ಲೇ ಇರಲಿಲ್ಲ. ಆದರೂ ಅವರನ್ನು ಮರೆಸುವ ಆಟ ನೀಡಲು ರೋಹಿತ್‌ಗೆ ಸಾಧ್ಯವಿತ್ತು. ಜಹೀರ್ ಖಾನ್‌ರಿಂದ ತಂಡಕ್ಕೆ ಹಿನ್ನಡೆಯಾಗಿಲ್ಲವೆನ್ನುವುದು ಧೋನಿ ಬೌಲರುಗಳ ಮೇಲೆ ವ್ಯಕ್ತಪಡಿಸಿರುವ ಮೆಚ್ಚುಗೆಯೇ ಸಾಕ್ಷಿ. ಅಷ್ಟಕ್ಕೂ ಇಲ್ಲಿ ನೀಲಿ ಹುಡುಗರಿಗೆ ಸೋಲುಂಟಾದದ್ದು ಬೌಲರುಗಳಿಂದಲ್ಲವಲ್ಲ..?
ಮುಗಿದು ಹೋಯಿತೇ ಟೀಮ್ ಇಂಡಿಯಾ ಜೈತ್ರ ಯಾತ್ರೆ?
ಹಾಗಂತ ಭಾರತೀಯ ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ನಾಯಕ ಮಹೇಂದ್ರ ಸಿಂಗ್ ಧೋನಿಯೇ ಹೇಳಿರುವಂತೆ ಭಾರತೀಯ ಅಭಿಮಾನಿಗಳು ಗೆದ್ದಾಗ ಬೆನ್ನು ತಟ್ಟಿದರೆ, ಬಿದ್ದಾಗ ತಿರುಗಿ ಗುದ್ದುತ್ತಾರೆ ಎನ್ನುವುದು ಸತ್ಯವಾದರೂ ಅದಕ್ಕಿರುವ ಕಾರಣವೂ ಅಷ್ಟೇ ಸ್ಪಷ್ಟ-- ಅವರು ಕ್ರಿಕೆಟ್‌ನಷ್ಟು ಬೇರೆ ಯಾವ ಆಟವನ್ನೂ ಪ್ರೀತಿಸಲಾರರು.
ನಿಜಕ್ಕೂ ಟೀಮ್ ಇಂಡಿಯಾ ಕಳಪೆ ಪ್ರದರ್ಶನ ತೋರಿಸಿ ಪರಾಜಯ ಹೊಂದಿದ್ದರೂ ಕಳಪೆ ತಂಡವೆಂದು ಹೇಳುವ ಹಾಗಿಲ್ಲ. ಅಭಿಮಾನಿಗಳೀಗ ತಕ್ಷಣದ ಫಲಿತಾಂಶದಿಂದ ಭಾರತ ತಂಡದ ಭವಿಷ್ಯವೇ ಮುಗಿಯಿತು ಎಂಬಂಥ ಮಾತುಗಳನ್ನಾಡುವ ಮೂಲಕ ತಮ್ಮ ಆಕ್ರೋಶವನ್ನು ಹೊರಗೆ ಹಾಕಿದರೂ ಅದರ ಹಿಂದಿನ ಆಶಯ ತಂಡ ಪುಟಿದೇಳಬೇಕೆಂಬುದು ಮತ್ತು ಕ್ರಿಕೆಟಿನ ಮೇಲಿರುವ ಪ್ರೀತಿ.
PTI
ಯಾವುದೇ ಕ್ರಿಕೆಟ್ ಪ್ರಕಾರದಲ್ಲೂ ಸತತ ಮೂರು ಸೋಲುಗಳನ್ನು ಟೀಮ್ ಇಂಡಿಯಾ ಕಂಡು ಎಷ್ಟು ಕಾಲವಾಯಿತೋ? ಟ್ವೆಂಟಿ-20 ವಿಶ್ವಕಪ್‌ನ ಸೂಪರ್ ಎಂಟರಲ್ಲಿ ಒಂದೂ ಪಂದ್ಯವನ್ನು ಗೆಲ್ಲಲು ಧೋನಿ ಪಡೆಗೆ ಸಾಧ್ಯವಾಗಿಲ್ಲವೆಂದರೆ ಅದು ಆಶ್ಚರ್ಯವಲ್ಲದೆ ಮತ್ತೇನು?
ಹಾಗೆ ನೋಡಿದರೆ ದಕ್ಷಿಣ ಆಫ್ರಿಕಾವನ್ನು ಹೊರತುಪಡಿಸಿ ವೆಸ್ಟ್‌ಇಂಡೀಸ್ ಮತ್ತು ಇಂಗ್ಲೆಂಡ್ ತಂಡಗಳು ಹೇಳಿಕೊಳ್ಳುವ ಫಾರ್ಮ್ ಹೊಂದಿದ್ದ ತಂಡಗಳಲ್ಲ. ಹಾಗಿದ್ದೂ ಭಾರತವು ತಾಳ ತಪ್ಪಿ ಉದ್ದುದ್ದ ಮಕಾಡೆ ಮಲಗಿದ ಹಿಂದಿನ ಕಾರಣಗಳೇನೋ?
ಅತಿರಥ ಮಹಾರಥ ಬ್ಯಾಟ್ಸ್‌ಮನ್‌ರನ್ನು ಹೊಂದಿರುವ ತಂಡವೆನ್ನುವ ತುರಾಯಿಯನ್ನು ಸಿಕ್ಕಿಸಿಕೊಂಡ ತಂಡವಿದು. ನಿಜಕ್ಕೂ ವಿಶ್ವದ ಯಾವುದೇ ತಂಡವೂ ಭಾರತದಷ್ಟು ಉತ್ಕೃಷ್ಟ ದಾಂಡಿಗರನ್ನು ಹೊಂದಿಲ್ಲ. ಆದರೂ...
ಅವರನ್ನೆಲ್ಲ ಇವರು ನೆನಪಿಸಿದರು..
ಕೊನೆಯ ಪಂದ್ಯವನ್ನೇ ಗಮನಕ್ಕೆ ತೆಗೆದುಕೊಂಡರೂ ನಮ್ಮ ಭಾರತೀಯ ದಾಂಡಿಗರು ಅತ್ತ ವೇಗಕ್ಕೂ ಸಲ್ಲದೆ ಇತ್ತ ಸ್ಪಿನ್ ಬೌಲಿಂಗನ್ನೂ ಎದುರಿಸಲಾಗದೆ ಬೆನ್ನು ಬೆನ್ನಿಗೆ ಹೊರಟು ಹೋದಾಗ ನಿಜಕ್ಕೂ ನೆನಪಿಗೆ ಬಂದದ್ದು ತೆಂಡೂಲ್ಕರ್, ದ್ರಾವಿಡ್, ಲಕ್ಷ್ಮಣ್ ಮತ್ತು ಗಂಗೂಲಿ. ವೀಕ್ಷಕ ವಿವರಣೆಗಾರರೂ ಇದನ್ನು ಬೊಟ್ಟು ಮಾಡುತ್ತಾ ಅವರನ್ನೆಲ್ಲಾ ಕರೆ ತರಬೇಕು ಎಂದು ಯುವ ದಾಂಡಿಗರ 'ಸಾಮರ್ಥ್ಯ'ದ ಬಗ್ಗೆ ಟೀಕೆ ಮಾಡುತ್ತಿದ್ದರು.
PTI
ಹೌದಲ್ಲ.. ನಾವು ತೆಂಡೂಲ್ಕರ್, ದ್ರಾವಿಡ್, ಗಂಗೂಲಿಯವರನ್ನು ಯಾವ್ಯಾವುದೋ ವಿಚಾರಗಳಿಗಾಗಿ ಟೀಕಿಸುತ್ತಿದ್ದೆವು. ಆದರೆ ನೆನಪಿರಲಿ-- ಅವರು ಸುಲಭವಾಗಿ ಬೌಲರುಗಳಿಗೆ ಶರಣಾಗುತ್ತಿರಲಿಲ್ಲ. ಆತ್ಮವಿಶ್ವಾಸವನ್ನು ಅಷ್ಟು ಬೇಗ ಕಳೆದುಕೊಳ್ಳುವವರಲ್ಲ. ಪ್ರಸಕ್ತ ಇಂಗ್ಲೆಂಡ್‌ಗೆ ಪ್ರಯಾಣಿಸಿದ ನಮ್ಮ ತಂಡದಲ್ಲಿರುವುದು ಬಹುತೇಕ ಯುವ ಆಟಗಾರರೇ. ಇದೇ ಮುಳುವಾಯಿತೇ?
ಈ ಬಾರಿ ಸ್ಮರಣಾರ್ಹವೆನ್ನುವುದೇನಿದೆ?
ಕಳೆದ ಬಾರಿಯ ವಿಶ್ವಕಪ್‌ನಲ್ಲಿ ನಮ್ಮದೇ ತಂಡದ ಬಗ್ಗೆ ನಾವೆಷ್ಟು ಹೆಮ್ಮೆಪಡುತ್ತಿದ್ದೆವು. ಎಲ್ಲವೂ ಅನಿರೀಕ್ಷಿತವಾಗಿ ನಡೆದು ಹೋಗಿತ್ತು. ಸೂಪರ್ ಎಂಟರ ಒಂದೇ ಒಂದು ಪಂದ್ಯವನ್ನೂ ಬಿಟ್ಟುಕೊಡದೆ, ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾದಂತಹ ಆಸ್ಟ್ರೇಲಿಯಾವನ್ನೇ ಮಣಿಸಿ ಫೈನಲ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ರೋಚಕವಾಗಿ ಸೋಲಿಸಿದ ಎಲ್ಲಾ ಕ್ಷಣಗಳೂ ಅವಿಸ್ಮರಣೀಯ.
PTI
ಫ್ಲಿಂಟಾಫ್ ಕಿಚಾಯಿಸಿದ್ದಕ್ಕೆ ಪೌರುಷ ಪ್ರದರ್ಶಿಸಿದ್ದ ಯುವರಾಜ್ ಸಿಂಗ್, ಸ್ಟುವರ್ಟ್ ಬ್ರಾಡ್‌ರ ಒಂದು ಓವರಿನ ಎಲ್ಲಾ ಎಸೆತಗಳನ್ನು ಪೆವಿಲಿಯನ್‌ಗೆ, ಅದರಾಚೆ ಅಟ್ಟಿದ್ದನ್ನು ಈಗಲೂ ಟೀವಿಯಲ್ಲಿ ಆಗಾಗ ಬರುವಾಗ ಕಣ್ ಬಿಟ್ಟು ನೋಡುತ್ತಿಲ್ಲವೇ? ಈ ಬಾರಿ ಆ ರೀತಿಯ ಒಂದೇ ಒಂದು ಪ್ರದರ್ಶನವಾದರೂ ನೆನಪಿಗೆ ಬರುತ್ತಿದೆಯೇ?
ಹಾಗೆ ನೆನಪಿಗೆ ಬರಬೇಕಾದ ಪ್ರದರ್ಶನದ ನಿರೀಕ್ಷೆಗಳು ಈ ಬಾರಿ ಆಂಗ್ಲರ ನಾಡಿಗೆ ತಂಡ ಹೊರಡುವಾಗ ಅಭಿಮಾನಿಗಳಲ್ಲಿತ್ತು. ಅಂತಹ ಖದರನ್ನು ಟೀಮ್ ಇಂಡಿಯಾ ಕಳೆದ ಕೆಲವು ತಿಂಗಳುಗಳಿಂದ ಪ್ರದರ್ಶಿಸುತ್ತಾ ಬಂದಿತ್ತು. ಆದರೆ ನಿರೀಕ್ಷೆಗಳೆಲ್ಲಾ ಹುಸಿಯಾಗಿವೆ. ಮುಂದಿನ ವಿಶ್ವಕಪ್‌ವರೆಗೆ ಕಾಯಿರಿ ಎಂದು ಧೋನಿ ಅಭಿಮಾನಿಗಳಿಗೆ ತಾಳ್ಮೆಯ ಪಾಠ ನೀಡಿದ್ದಾರೆ.
ಎಲ್ಲಿ ಹೋಯಿತು ಅದೆಲ್ಲ?
ಸೋಲಿನ ಹಿಂದಿರುವ ಕಾರಣಗಳೇನೇ ಇದ್ದರೂ ಅದ್ಯಾವುವೂ ಟೀಮ್ ಇಂಡಿಯಾಕ್ಕೆ ಸಮರ್ಥನೀಯವಲ್ಲ; ಕೆಲವು ತಿಂಗಳ ಹಿಂದೆ ದಕ್ಷಿಣ ಆಫ್ರಿಕಾವನ್ನು ಮೀರಿ ಎಲ್ಲಾ ವಿಭಾಗದಲ್ಲೂ ಚಾಂಪಿಯನ್ ಪಟ್ಟವನ್ನೇರುವ ಸಾಮರ್ಥ್ಯ ಧೋನಿ ಪಡೆಗಿದೆ ಎಂದು ಬಹುತೇಕ ಕ್ರಿಕೆಟ್ ಜಗತ್ತೇ ನುಲಿದಿತ್ತು. ಅಂತಹ ತಂಡದಿಂದ ಇಂತಹ ಪ್ರದರ್ಶನವೇ?
PTI
ಟ್ವೆಂಟಿ-20 ಕ್ರಿಕೆಟ್ ಪ್ರಕಾರವು ಅನಿಶ್ಚಿತ ಆಟವೆನ್ನುವುದನ್ನು ಒಪ್ಪಿಕೊಂಡರೂ ಸದಾ ಅನಿಶ್ಚಿತತೆಯೆಂಬುದು ಸಮರ್ಥನೀಯವೆನಿಸದು. ಕುಗ್ಗಿದ ಆತ್ಮವಿಶ್ವಾಸವನ್ನು ಹಿಗ್ಗಿಸಿ ಮುಂದಿನ ದಿನಗಳಲ್ಲಿ ಹಿಂದಿನ ವೈಭವವನ್ನು ಮರಳಿ ಗಿಟ್ಟಿಸಬೇಕಾದ ಅನಿವಾರ್ಯತೆ ಭಾರತಕ್ಕಿದೆ. ತಕ್ಷಣಕ್ಕೆ ಅದರ ಮುಂದಿರುವ ಸವಾಲು ವೆಸ್ಟ್‌ಇಂಡೀಸ್ ಪ್ರವಾಸ.
ಕಹಿ ನೆನಪುಗಳೊಂದಿಗೆ ಆಂಗ್ಲರ ನಾಡಿಗೆ ಗುಡೈ ಬೈ ಹೇಳುತ್ತಿರುವ ಟೀಮ್ ಇಂಡಿಯಾ ಏಕದಿನ ಸರಣಿಯ ನಾಲ್ಕು ಪಂದ್ಯಗಳಿಗಾಗಿ ಅಲ್ಲಿಂದಲೇ ಕೆರೆಬಿಯನ್ ನೆಲಕ್ಕೆ ದಾಂಗುಡಿಯಿಡಲಿದೆ. ಅಲ್ಲಿಂದ ವಾಪಸಾಗುವಾಗ ಮತ್ತಷ್ಟು ಕಾರಣಗಳನ್ನು ನೀಡುವಂತಾಗದಿರಲಿ.