ಫೋರ್ಬ್ಸ್ ಪಟ್ಟಿಯಲ್ಲಿ 16ನೇ ಸ್ಥಾನ ಗಳಿಸಿರುವ ಮಹೇಂದ್ರ ಸಿಂಗ್ ಧೋನಿ

ಬುಧವಾರ, 21 ಆಗಸ್ಟ್ 2013 (12:42 IST)
PR
PR
ನವದೆಹಲಿ: ಭಾರತದ ಕ್ರಿಕೆಟ್ ತಂಡದ ಅಗ್ರಮಾನ್ಯ ನಾಯಕ, ಬಿರುಸಿನ ಹೊಡೆತಗಳ ಆಟಗಾರ ಮಹೇಂದ್ರ ಸಿಂಗ್ ಧೋನಿ ಅತ್ಯಧಿಕ ಗಳಿಕೆಯ ಅಥ್ಲೆಟ್ಸ್‌ಗಳಿಗಿರುವ ಪೋರ್ಬ್ಸ್ ಪಟ್ಟಿಯಲ್ಲಿ 16ನೇ ಶ್ರೇಯಾಂಕ ಗಳಿಸಿದ್ದಾರೆ. ಅವರ ಸಂಪಾದನೆಯು 31.5 ದಶಲಕ್ಷ ಡಾಲರ್‌ಗಳಾಗಿದ್ದು(180 ಕೋಟಿ) ರಾಫೆಲ್ ನಡಾಲ್ ಮತ್ತು ಉಸೇನ್ ಬೋಲ್ಟ್ ಅವರಿಗಿಂತ ಮೇಲ್ಮಟ್ಟದಲ್ಲಿರಿಸಿದೆ. ವಿಶ್ವದಲ್ಲಿ ಅತ್ಯಧಿಕ ಪಾವತಿಯ ಅಥ್ಲೆಟ್‌ಗಳ ಫೋರ್ಬ್ಸ್ ಪಟ್ಟಿಯಲ್ಲಿ ಭಾರತದ ಕ್ರಿಕೆಟ್ ತಂಡದ 31 ವರ್ಷ ವಯಸ್ಸಿನ ನಾಯಕ ಧೋನಿ 2012 ಜೂನ್ ಮತ್ತು 2013 ಜೂನ್ ನಡುವೆ ಈ ಸಂಪಾದನೆ ಮಾಡಿದ್ದಾರೆ. ಈ ಪಟ್ಟಿಯು ಧೋನಿಯನ್ನು F1 ರೇಸರ್ ಫರ್ನಾಂಡೊ ಅಲೋನ್ಸೊ(19ನೇ ರ‌್ಯಾಂಕ್) ಲೆವಿಸ್ ಹ್ಯಾಮಿಲ್ಟನ್(26ನೇ ರ‌್ಯಾಂಕ್) ನೋವಾಕ್ ಜೋಕೋವಿಕ್(28ನೇ ಸ್ಥಾನ), ರಾಫೆಲ್ ನಡಾಲ್ 30ನೇ ಸ್ಥಾನ ಮತ್ತು ಉಸೇನ್ ಬೋಲ್ಟ್ (40ನೇ ಸ್ಥಾನ) ಅವರಿಗಿಂತ ಮೇಲ್ಮಟ್ಟದಲ್ಲಿರಿಸಿದೆ. ಈ ಲೆಕ್ಕಾಚಾರವು ಕ್ಲಬ್ ಮತ್ತು ರಾಷ್ಟ್ರೀಯ ತಂಡಗಳಿಂದ ಸಂಬಳಗಳು, ಬೋನಸ್‌ಗಳು ಮತ್ತು ನಗದು ಹಣ ಹಾಗು ಒಡಂಬಡಿಕೆ ಆದಾಯವನ್ನು ಆಧರಿಸಿದೆ.

ಈ ವರ್ಷದ ಪಟ್ಟಿಯಲ್ಲಿ ಧೋನಿ 15 ಸ್ಥಾನಗಳಷ್ಟು ಮೇಲೇರಿದ್ದಾರೆ. ಅವರು ಕಳೆದ ವರ್ಷ 31ನೇ ಸ್ಥಾನದಲ್ಲಿದ್ದರು. ಧೋನಿ ಬ್ಯಾಟಿಂಗ್ ಮತ್ತು ವಿಕೆಟ್ ಕೀಪಿಂಗ್ ಎರಡರಲ್ಲೂ ಮಿಂಚಿದ್ದು, ಅವರ ನಾಯಕತ್ವದಲ್ಲಿ ಭಾರತ ತಂಡ ಅನೇಕ ಕಿರೀಟಗಳನ್ನು ಮುಡಿಗೇರಿಸಿಕೊಂಡಿದೆ. ಭಾರತ 2007ರಲ್ಲಿ ಐಸಿಸಿ ವಿಶ್ವಕಪ್ ಟ್ವೆಂಟಿ 20, 2007-08ರ ಸಿಬಿ ಸೀರೀಸ್, 2010 ಏಷ್ಯಾ ಕಪ್, 2011 ಐಸಿಸಿ ಕ್ರಿಕೆಟ್ ವಿಶ್ವಕಪ್ ಮತ್ತು 2013ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದುಕೊಂಡಿದೆ. ಐಸಿಸಿ ಟೆಸ್ಟ್ ರ‌್ಯಾಂಕಿಂಗ್‌ನಲ್ಲಿ ಭಾರತ ತಂಡವನ್ನು ಪ್ರಥಮ ಬಾರಿಗೆ ನಂಬರ್ ಒಂದು ಸ್ಥಾನಕ್ಕೆ ಧೋನಿ ಮುನ್ನಡೆಸಿದ್ದಾರೆ.

2013ರಲ್ಲಿ ಅವರ ನಾಯಕತ್ವದಲ್ಲಿ ಭಾರತ ತಂಡ ಟೆಸ್ಟ್ ಸರಣಿಯನ್ನು ಆಸ್ಟ್ರೇಲಿಯಾ ವಿರುದ್ಧ 40 ವರ್ಷಗಳ ನಂತರ ಮೊದಲ ಬಾರಿಗೆ ಗೆದ್ದುಕೊಂಡ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.ಧೋನಿಯನ್ನು ಹೊರತುಪಡಿಸಿ ಸಚಿನ್ ತೆಂಡೂಲ್ಕರ್ ಫೋರ್ಬ್ಸ್ ಪಟ್ಟಿಯಲ್ಲಿ ಕಾಣಿಸಿಕೊಂಡ ಕ್ರೀಡಾಪಟುವಾಗಿದ್ದಾರೆ.

ಫೋರ್ಬ್ಸ್ ಪಟ್ಟಿಯಲ್ಲಿ ಅವರು 31ನೇ ಸ್ಥಾನ ಪಡೆದಿದ್ದು, ಒಟ್ಟು ವಾರ್ಷಿಕ ಗಳಿಕೆ 22 ದಶಲಕ್ಷ ಡಾಲರ್‌ಗಳಾಗಿದೆ(125 ಕೋಟಿ).ಈ ಪಟ್ಟಿಯಲ್ಲಿ ಖ್ಯಾತ ಗಾಲ್ಫ್ ಆಟಗಾರ ಟೈಗರ್ ವುಡ್ಸ್ ಅಗ್ರಪಂಕ್ತಿಯನ್ನು ಅಲಂಕರಿಸಿದ್ದಾರೆ. ಅವರ ಗಳಿಕೆ ಕಳೆದ ವರ್ಷ 78.1 ದಶಲಕ್ಷ ಡಾಲರ್‌. ಅವರ ಬೆನ್ನಹಿಂದೆಯೇ ರೋಜರ್ ಫೆಡರರ್ 71. 5 ದಶಲಕ್ಷ ಡಾಲರ್ ಮತ್ತು ಬಾಸ್ಕೆಟ್‌ಬಾಲ್ ಆಟಗಾರ ಕೋಬ್ ಬ್ರಯಾಂಟ್ 61.9 ದಶಲಕ್ಷ ಡಾಲರ್‌ಗಳಾಗಿವೆ. ಫೋರ್ಬ್ಸ್ ಪಟ್ಟಿಯಲ್ಲಿ ರಷ್ಯಾದ ಟೆನ್ನಿಸ್ ಆಟಗಾರ್ತಿ ಮಾರಿಯಾ ಶರಪೋವಾ ಅತ್ಯಧಿಕ ಗಳಿಕೆಯ ಮಹಿಳಾ ಅಥ್ಲೆಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರ ಗಳಿಕೆ 2012 ಜೂನ್ ಮತ್ತು 2013 ಜೂನ್ ನಡುವೆ 29 ದಶಲಕ್ಷ ಡಾಲರ್. ಅಮೆರಿಕಾದ ಸೆರೆನಾ ವಿಲಿಯಮ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದು, 20.5 ದಶಲಕ್ಷ ಡಾಲರ್ ಗಳಿಕೆ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ