ಅಂಪೈರ್ ಸ್ಟೀವ್ ಬಕ್ನರ್ ಆಶಿರ್ವಾದ ಇರುವವರೆಗೆ ಆಸ್ಟ್ರೇಲಿಯ ತಂಡವು ಚಾಂಪಿಯನ್ ತಂಡವಾಗಿ ಮೆರೆಯಲಿದೆ. ಸಿಡ್ನಿ ಪಂದ್ಯದಲ್ಲಿ ಬಕ್ನರ್ ನೀಡಿದ ಅನ್ಯಾಯದ ತೀರ್ಪುಗಳ ಬಲದ ಮೇಲೆ ಆಸ್ಟ್ರೇಲಿಯ, ಟೀಮ್ ಇಂಡಿಯಾವನ್ನು 122 ರನ್‌ಗಳ ಅಂತರದಲ್ಲಿ ಸೋಲಿಸಿ, ನಾಲ್ಕು ಪಂದ್ಯಗಳ ಸರಣಿಯಲ್ಲಿ 2-0 ಅಂತರದಲ್ಲಿ ಮುನ್ನಡೆ ಸಾಧಿಸಿತು.
ಮೂರನೆ ಟೆಸ್ಟ್ ಪಂದ್ಯವು ಪರ್ಥ್‌ನಲ್ಲಿ ಜನವರಿ 16ರಿಂದ ಪ್ರಾರಂಭವಾಗಲಿದೆ. ಸಭ್ಯರ ಆಟ ಎಂದು ಹೆಸರು ಪಡೆದ ಕ್ರಿಕೆಟ್‌ಗೆ ಅರವತ್ತರ ಅರಳು ಮರಳಿನ ಬಕ್ನರ್ ಅಪವಾದವಾದರು.
ಭೋಜನ ವಿರಾಮದ ನಂತರ ಆಸಾಧ್ಯದ ಸವಾಲು ಬೆನ್ನತ್ತಿದ ಭಾರತಕ್ಕೆ ಕನಿಷ್ಠ ಡ್ರಾ ಮಾಡಿಕೊಳ್ಳುವ ಅವಕಾಶವನ್ನು ಬಕ್ನರ್ ಎರಡು ಬಾರಿ ನಿರಾಕರಿಸಿದರು. ರಾಹುಲ್ ದ್ರಾವಿಡ್ ಅವರ ಬ್ಯಾಟಿಗೆ ಚೆಂಡು ತಾಗದೇ ಇದ್ದರೂ ಚೆಂಡು ತಾಗಿದೆ ಎಂದು ತಗಾದೆ ತೆಗೆದ ಬಕ್ನರ್ ಸೂಸುತ್ರವಾಗಿ ಸಾಗಿದ ಭಾರತದ ಬಂಡಿಯ ಗಾಲಿ ತೆಗೆದರು.
ನಂತರ ಇದೇ ಬಕ್ನರ್ ತಗಾದೆಗೆ ಬಲಿಯಾಗಿದ್ದು. ಸೌರವ್ ಗಂಗೂಲಿ. ದ್ರಾವಿಡ್‌ರೊಂದಿಗೆ ಆಕರ್ಷಕ ಆಟ ಕಟ್ಟಿದ್ದ ಗಂಗೂಲಿ ಪೆವಿಲಿಯನ್‌ಗೆ ಮರಳುವ ಮುನ್ನ 9 ಬೌಂಡರಿಗಳೊಂದಿಗೆ ಅರ್ಧಶತಕದ ಗಡಿಯನ್ನು ದಾಟಿದರು. ನಂತರ ಬಂದವರಲ್ಲಿ ನಾಯಕ ಅನಿಲ್ ಕುಂಬ್ಳೆ ಅಜೇಯವಾಗಿ ನಿಂತು ಕೆಚ್ಚೆದೆಯ ಆಟ ಪ್ರದರ್ಶಿಸಿ ಏಳು ಬೌಂಡರಿಗಳ ನೆರವಿನೊಂದಿಗೆ 45 ರನ್ ಮಾಡಿದರು.
ಸಿಡ್ನಿ ಟೆಸ್ಟ್‌ನಲ್ಲಿ ಬಕ್ನರ್ ಮಾಡಿದ ವಿವಾದಗಳನ್ನು ಹೊರತು ಪಡಿಸಿದರೆ ಭಾರತದ ಪ್ರದರ್ಶನ ವಿಶ್ವಚಾಂಪಿಯನ್‌ರಿಗಿಂತ ಉತ್ಕೃಷ್ಟವಾಗಿತ್ತು. ಭಾರತೀಯರು ವೇಗದ ಬೌಲಿಂಗ್ ಎದುರು ಪರದಾಡುತ್ತಾರೆ ಎನ್ನುವ ಮಾತು ಪೂರ್ಣ ಪ್ರಮಾಣದಲ್ಲಿ ಸುಳ್ಳಾಯಿತು. ಬ್ರೆಟ್ ಲೀಯನ್ನು ಸಮರ್ಥವಾಗಿ ಎದುರಿಸಿದ ಲಕ್ಷ್ಮಣ್, ಸಚಿನ್ ತೆಂಡುಲ್ಕರ್ ಮತ್ತು ರಾಹುಲ್ ದ್ರಾವಿಡ್ ಭಾರಿ ಮೊತ್ತವನ್ನು ಕಲೆಹಾಕದಿದ್ದರೂ ಆಡಿದ ಜೊತೆಯಾಟ ಆಸಿಸ್ ಪಾಲಿಗೆ ಪರ್ಥ್‌ನಲ್ಲಿ ಮಗ್ಗಲು ಮುಳ್ಳಾಗಿ ಕಾಡುವುದಂತೂ ಖಚಿತ.
ಭಾರತೀಯ ಬೌಲಿಂಗ್ ತನ್ನ ಪೂರ್ಣ ಸಾಮರ್ಥ್ಯವನ್ನು ಪರೀಕ್ಷೆಗೆ ಒಡ್ಡಿದ್ದು ಈ ಪಂದ್ಯದಲ್ಲಿ ರುದ್ರಪ್ರತಾಪ್ ಸಿಂಗ್ ಐದು, ಹರ್ಭಜನ್ ಸಿಂಗ್ ನಾಲ್ಕು ಮತ್ತು ಅನಿಲ್ ಕುಂಬ್ಳೆ ಎಂಟು ವಿಕೆಟ್ ತೆಗೆದದ್ದು, ತಂಡದ ಆಟಕ್ಕೆ ಹಿಡಿದ ಕನ್ನಡಿ. ಹರ್ಭಜನ್ ಸಿಂಗ್ ಬೌಲಿಂಗ್‌ನಲ್ಲಿ ಸತ್ವವೇ ಇಲ್ಲ ಎಂದು ಬೊಗಳೆ ಬಿಟ್ಟ ರಿಕಿ ಪಾಂಟಿಂಗ್ ಎರಡು ಇನ್ನಿಂಗ್ಸ್‌ಗಳಲ್ಲಿ ವಿಕೆಟ್ ನೀಡಿದ್ದು, ಆಡಿದ ಮಾತು ನುಂಗಿದ ಹಾಗೇ ಆಗಿರಬೇಕು.