ಪಾಕ್ ಕ್ರಿಕೆಟಿಗರ ತರಬೇತಿಗೆ ಮೊಯಿನ್ ನೇಮಕ

ಸೋಮವಾರ, 21 ಜುಲೈ 2008 (12:46 IST)
ಆಟಗಾರರ ಅಶಿಸ್ತಿನ ವರ್ತನೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ಗೆ ತಲೆನೋವು ತಂದಿದ್ದು, ರಾಷ್ಟ್ರೀಯ ಮತ್ತು ಪ್ರಾದೇಶಿಕ ಅಕಾಡೆಮಿಗಳ ಯುವ ಆಟಗಾರರಿಗೆ ಶಿಸ್ತಿನ ಕುರಿತಂತೆ ಉತ್ತಮ ತರಬೇತಿ ನೀಡಲು ಮಾಜಿ ಆಟಗಾರ ಮೊಯಿನ್ -ಉಲ್-ಹಕ್ ಅವರನ್ನು ಪಿಸಿಬಿ ನೇಮಕ ಮಾಡಿ ಆದೇಶ ಹೊರಡಿಸಿದೆ.

ಮಾಜಿ ಆಟಗಾರ ಮೊಯಿನ್ -ಉಲ್-ಹಕ್ ಐದು ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳನ್ನಾಡಿದ್ದಾರೆ. ಇಂಗ್ಲೆಂಡ್‌ನ ಲಂಕಾಶೈರ್‌ನಲ್ಲಿ ಕ್ರೀಡಾ ವ್ಯವಸ್ಥಾಪನೆ ವಿಭಾಗದಲ್ಲಿ ಮಾಸ್ಟರ್ಸ್ ಡಿಗ್ರಿಯನ್ನು ಪಡೆದಿದ್ದು, ಕರಾಚಿ ವಿಶ್ವವಿದ್ಯಾಲಯದಲ್ಲಿ ಎಂಬಿಎ ಪದವಿಯನ್ನು ಪಡೆದಿದ್ದಾರೆ.

ಯುವ ಆಟಗಾರರಿಗೆ ಉತ್ತಮ ಚಾರಿತ್ರ್ಯವನ್ನು ಹೊಂದಲು ಅವಶ್ಯಕ ಮಾಹಿತಿ, ಪಂದ್ಯಗಳ ಬಗ್ಗೆ ಸಕಾರಾತ್ಮಕ ಯೋಚನೆ, ಭವಿಷ್ಯದ ಯೋಜನೆಗಳ ಬಗ್ಗೆ ಯುವ ಆಟಗಾರರಿಗೆ ಸೂಕ್ತ ಮಾಹಿತಿಯನ್ನು ಒದಗಿಸಲು ತಮ್ಮನ್ನು ನೇಮಕ ಮಾಡಲಾಗಿದೆ ಎಂದು ಮೊಯಿನ್ ಹೇಳಿದ್ದಾರೆ.

ಯುವ ಆಟಗಾರರನ್ನು ಸುಶಿಕ್ಷತರನ್ನಾಗಿ ರೂಪಿಸಿ ಕ್ರೀಡೆಯತ್ತ ಗಮನಹರಿಸಲು ಅಗತ್ಯವೆಂದು ಕಂಡು ಬಂದ ಹಿನ್ನೆಲೆಯಲ್ಲಿ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಈ ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದು ಅವರು ತಿಳಿಸಿದ್ದಾರೆ.

ಆಟಗಾರರನ್ನು ಶಿಸ್ತಿನ ಸಿಪಾಯಿಗಳಂತೆ ರೂಪಿಸಿ ರಾಷ್ಟ್ರೀಯ ತಂಡದಲ್ಲಿರುವ ಜವಾಬ್ದಾರಿಯನ್ನು ಅರಿಯಲು ಯೋಜನೆಗಳನ್ನು ರೂಪಿಸುವಂತೆ ಕ್ರಿಕೆಟ್ ತಜ್ಞರು ಹಾಗೂ ಮಾಜಿ ಆಟಗಾರರ ಟೀಕೆಗಳ ಹಿನ್ನೆಲೆಯಲ್ಲಿ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಮೊಯಿನ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.

ಡೋಪ್ ಹಗರಣ ಹಾಗೂ ಅಶಿಸ್ತಿನ ವರ್ತನೆ ಹಾಗೂ ವಿವಾದಗಳ ಸುಳಿಯಿಂದ ಬೇಸತ್ತ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಆಟಗಾರರನ್ನು ಸುಶಿಕ್ಷಿತರನ್ನಾಗಿಸಿ ಶಿಸ್ತಿನ ತರಬೇತಿ ನೀಡಲು ಯೋಜನೆಯನ್ನು ಹಮ್ಮಿಕೊಂಡಿದೆ ಎಂದು ಪಿಸಿಬಿ ತಿಳಿಸಿದೆ.

ವೆಬ್ದುನಿಯಾವನ್ನು ಓದಿ