ಕಪ್ಪು ಚುಕ್ಕೆಯೊಂದಿಗೆ ನಿರ್ಗಮಿಸಲಾರೆ: ದಾಲ್ಮಿಯಾ

ಶನಿವಾರ, 20 ಡಿಸೆಂಬರ್ 2008 (13:31 IST)
ತನ್ನ ಮೇಲೆ ಹೊರಿಸಲಾಗಿರುವ ಆರೋಪಗಳನ್ನು ತೊಡೆದು ಹಾಕುವುದಕ್ಕೆ ಒತ್ತು ಕೊಡುತ್ತಿದ್ದೇನೆಯೇ ಹೊರತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಮರಳುವ ಉದ್ದೇಶ ಇಟ್ಟುಕೊಂಡಿಲ್ಲ ಎಂದು ಐಸಿಸಿಯ ಮಾಜಿ ಅಧ್ಯಕ್ಷ ಜಗಮೋಹನ್ ದಾಲ್ಮಿಯಾ ಸ್ಪಷ್ಟಪಡಿಸಿದ್ದಾರೆ.

"ಬಿಸಿಸಿಐಗೆ ಮರಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಈ ಹಿಂದೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ, ಏಷಿಯಾ ಕ್ರಿಕೆಟ್ ಮಂಡಳಿ (ಎಸಿಸಿ) ಮತ್ತು ಬಿಸಿಸಿಐಯಲ್ಲಿ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದೇನೆ. ಯಾವಾಗ ನಿವೃತ್ತಿಯಾಗ ಬೇಕೆಂಬುದು ತಿಳಿದಿದ್ದೇನೆ" ಎಂದು ಅವರು ತಿಳಿಸಿದರು.

"ಆದರೆ ನಾನು ಯಾವುದೇ ಕಪ್ಪು ಚುಕ್ಕೆಯನ್ನು ಹೊತ್ತುಕೊಂಡು ಇಲ್ಲಿಂದ ನಿರ್ಗಮಿಸಲಾರೆ. ಯಾಕೆಂದರೆ ನಾನು ಯಾವುದೇ ತಪ್ಪು ಮಾಡಿಲ್ಲ. ನಾನು ನಿರ್ದೋಷಿ ಎಂಬುದನ್ನು ಸಾಬೀತುಪಡಿಸಿದ ನಂತರವೇ ನಾನು ಹೋಗುತ್ತೇನೆ" ಎಂದು 68ರ ದಾಲ್ಮಿಯಾ ಬಂಗಾಳ ಮತ್ತು ಗೋವಾ ನಡುವಿನ ರಣಜಿ ಪ್ಲೇಟ್ ಗ್ರೂಫ್‌ನ ಪಂದ್ಯ ವೀಕ್ಷಣೆ ಮಧ್ಯೆ ಅಭಿಪ್ರಾಯಪಟ್ಟರು.

ನಕಲಿ ದಾಖಲೆಗಳ ಸೃಷ್ಟಿಗೆ ಸಂಬಂಧಿಸಿದಂತೆ ಅಂದಿನ ಬಿಸಿಸಿಐ ಅಧ್ಯಕ್ಷ ಜಗಮೋಹನ್ ದಾಲ್ಮಿಯಾ ಅವರನ್ನು ಬಿಸಿಸಿಐ 2006ರಲ್ಲಿ ವಜಾಗೊಳಿಸಿತ್ತು. ನಂತರ ನ್ಯಾಯಾಲಯದ ಕಟಕಟೆಯನ್ನೇರಿದ್ದ ಪ್ರಕರಣಕ್ಕೆ ಕಳೆ ಬಂದದ್ದು ಇತ್ತೀಚೆಗೆ. ಕೊಲ್ಕತ್ತಾ ಹೈಕೋರ್ಟ್ ಬಿಸಿಸಿಐನ ಅಧ್ಯಕ್ಷ ಶಶಾಂಕ್ ಮನೋಹರ್ ಮತ್ತು ಮಾಜಿ ಮುಖ್ಯಸ್ಥ ಶರದ್ ಪವಾರ್ ಸೇರಿದಂತೆ ಬಿಸಿಸಿಐಯ ಆರು ಮಂದಿ ಪದಾಧಿಕಾರಿಗಳ ವಿರುದ್ಧ ಕ್ರಿಮಿನಲ್ ವಿಚಾರಣೆ ನಡೆಸಬೇಕೆಂದು ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ಬಿಸಿಸಿಐ ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಮೇಲ್ಮನವಿಯನ್ನು ವಿಚಾರಣೆ ನಡೆಸಿ ಡಿಸೆಂಬರ್ 5ರಂದು ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆಯಾಜ್ಞೆ ವಿಧಿಸಿತ್ತು.

ವೆಬ್ದುನಿಯಾವನ್ನು ಓದಿ