ಕಿವೀಸ್ ಪ್ರವಾಸ ಧೋನಿಗೆ ಅಗ್ನಿಪರೀಕ್ಷೆ: ಗಂಗೂಲಿ

ಶನಿವಾರ, 21 ಫೆಬ್ರವರಿ 2009 (11:37 IST)
ನ್ಯೂಜಿಲೆಂಡ್ ಪ್ರವಾಸದ ಸಂದರ್ಭದಲ್ಲಿ ಭಾರತವು ಅಲ್ಲಿ ಅಭ್ಯಾಸ ಪಂದ್ಯಗಳನ್ನಾಡದೆ ಇರುವುದಕ್ಕೆ ಆತಂಕ ವ್ಯಕ್ತಪಡಿಸಿರುವ ಟೀಮ್ ಇಂಡಿಯಾ ಮಾಜಿ ಕಪ್ತಾನ ಸೌರವ್ ಗಂಗೂಲಿ, ಈ ಸರಣಿಗಳು ಮಹೇಂದ್ರ ಸಿಂಗ್ ಧೋನಿ ಪಡೆಯ ನೈಜ ಸಾಮರ್ಥ್ಯಕ್ಕೆ ಒಡ್ಡಿರುವ ಪರೀಕ್ಷೆ ಎಂದಿದ್ದಾರೆ.

"ಉಪಖಂಡದಲ್ಲಿ ಧೋನಿ ತನ್ನ ನಾಯಕತ್ವದಲ್ಲಿ ಯಶಸ್ವಿಯಾಗಿದ್ದರಿಂದ ಈ ಸರಣಿಯು ಅವರ ನೈಜ ಸಾಮರ್ಥ್ಯವನ್ನು ಬಹಿರಂಗಪಡಿಸಲಿದೆ. ಆದರೆ ಆಸ್ಟ್ರೇಲಿಯಾದಲ್ಲಿನ ಏಕದಿನ ಸರಣಿಯನ್ನು ಮುನ್ನಡೆಸಿಯೂ ಅವರು ಸಫಲತೆ ಕಂಡಿದ್ದಾರೆ" ಎಂದು ಗಂಗೂಲಿ ತಿಳಿಸಿದರು.

2002ರಲ್ಲಿ ಭಾರತ ಕೊನೆಯ ಬಾರಿ ನ್ಯೂಜಿಲೆಂಡ್ ಪ್ರವಾಸ ಮಾಡಿತ್ತು. ಆಗ ಟೀಮ್ ಇಂಡಿಯಾ ನಾಯಕರಾಗಿದ್ದವರು ಸೌರವ್ ಗಂಗೂಲಿ. ಈ ಹಿನ್ನಲೆಯಲ್ಲಿ ಮಾತನಾಡುತ್ತಾ ಅವರು, ಅಭ್ಯಾಸ ಪಂದ್ಯಗಳನ್ನಾಡದೆ ನೇರವಾಗಿ ಸವಾಲುಗಳಿಗೆ ತೆರೆದುಕೊಳ್ಳುತ್ತಿರುವುದು ಅಲ್ಲಿನ ವಾತಾವರಣದ ದೃಷ್ಟಿಯಿಂದ ಕಷ್ಟದ ಕೆಲಸ ಎಂದಿದ್ದಾರೆ.

"ಅಲ್ಲಿ ನಮ್ಮ ತಂಡ ಯಾವುದೇ ಪೂರ್ವ ತಯಾರಿ ಪಂದ್ಯಗಳನ್ನಾಡದಿರುವುದು ಆತಂಕಕಾರಿ. ಇದು ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್‌ಗಳಲ್ಲಿ ಸುಲಭವಾದುದಲ್ಲ" ಎಂದು ತಿಳಿಸಿದರು.

ಕಪ್ಪು ಟೋಪಿಯ ಕಿವೀಸರನ್ನು ತಾಯ್ನೆಲದಲ್ಲಿ ಮಣಿಸುವುದು ಸುಲಭವಲ್ಲ ಎಂದ ಅವರು, ಆದರೆ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಲು ಭಾರತ ತಂಡದಲ್ಲಿ ಸಮತೋಲಿತ ಪರಿಸ್ಥಿತಿಯಿದೆ; ನಾವು ಸುಸ್ಥಿತಿಯಲ್ಲಿದ್ದೇವೆ ಎಂದಿದ್ದಾರೆ.

40 ವರ್ಷಗಳ ನಂತರ ಟೆಸ್ಟ್ ಸರಣಿ ಗೆದ್ದು ದಾಖಲೆ ನಿರ್ಮಿಸಬೇಕಾದರೆ ಪ್ರತಿಯೊಬ್ಬ ಆಟಗಾರನದೂ ಕೊಡುಗೆ ಅವಶ್ಯಕವಾಗಿರುತ್ತದೆ. ಇಡೀ ತಂಡ ಒಗ್ಗಟ್ಟಾಗಿ ತಮ್ಮ ಸಾಮರ್ಥ್ಯವನ್ನು ತೋರಿಸಿದಲ್ಲಿ ಸರಣಿ ಗೆಲುವು ಸಾಧ್ಯ. ಕ್ರೀಡೆಯಲ್ಲಿ ಹಿರಿಯ-ಕಿರಿಯ ಎಂಬ ವಿಭಾಗಗಳಿಲ್ಲ. ತಂಡದ ಫಲಿತಾಂಶ ಉತ್ತಮವಾಗಿರಬೇಕಾದರೆ ಪ್ರತಿಯೊಬ್ಬರು ಉತ್ತಮ ಆಟವನ್ನು ನೀಡಬೇಕು ಎಂದು ಗಂಗೂಲಿ ಹೇಳಿದರು.

ಮುಂದಿನ ಎರಡು ವರ್ಷಗಳಲ್ಲಿ ಭಾರತ ಹಲವು ವಿದೇಶೀ ಪ್ರವಾಸಗಳನ್ನು ಕೈಗೊಳ್ಳಲಿದೆ. ಅಲ್ಲಿಯೂ ನಮ್ಮ ತಂಡ ಅತ್ಯುತ್ತಮ ಪ್ರದರ್ಶನ ನೀಡಿದಲ್ಲಿ ವಿಶ್ವದಲ್ಲೇ ಭಾರತವು ಶ್ರೇಷ್ಠ ತಂಡ ಎಂದು ನಿರ್ಧಾರವಾಗಬಹುದು. ಆದರೆ ಈಗಿನ ಒಟ್ಟಾರೆ ತಂಡಗಳನ್ನು ಗಮನಿಸಿದಾಗ ದಕ್ಷಿಣ ಆಫ್ರಿಕಾ ತಂಡವೇ ನಂಬರ್ ವನ್ ಎಂದು ಗಂಗೂಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ