ತಾಳ್ಮೆಯಿಂದ ಬ್ಯಾಟ್ ಬೀಸುತ್ತಿರುವ ಭಾರತ: 278/4

ಗುರುವಾರ, 19 ಮಾರ್ಚ್ 2009 (11:02 IST)
ತಾಳ್ಮೆ ಮತ್ತು ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ದಾಂಡಿಗರಾದ ಗೌತಮ್ ಗಂಭೀರ್ (72), ರಾಹುಲ್ ದ್ರಾವಿಡ್ (66), ಸಚಿನ್ ತೆಂಡೂಲ್ಕರ್ (70*) ಅರ್ಧಶತಕಗಳ ನೆರವಿನಿಂದ ದಿನದಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 278 ರನ್ ದಾಖಲಿಸಿದೆ.

ಇಲ್ಲಿನ ಸೆಡನ್ ಪಾರ್ಕ್ ಕ್ರೀಡಾಂಗಣದಲ್ಲಿ ಮ‌ೂರು ಟೆಸ್ಟ್‌ಗಳ ಮೊದಲ ಪಂದ್ಯದ ಎರಡನೇ ದಿನದಾಟ ಇಂದು ನಡೆಯಿತು. ಮೊದಲ ಇನ್ನಿಂಗ್ಸ್‌ನಲ್ಲಿ ನ್ಯೂಜಿಲೆಂಡ್ 279ಕ್ಕೆ ಸರ್ವಪತನ ಕಂಡಿತ್ತು. ಆ ಮ‌ೂಲಕ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ ಇನ್ನೂ ಒಂದು ರನ್‌ ಹಿನ್ನಡೆಯಲ್ಲಿದೆ.

ಕಳೆದ ರಾತ್ರಿ ಭಾರೀ ಮಳೆ ಬಂದಿದ್ದ ಕಾರಣ ಇಂದು ದಿನದಾಟ ಆರಂಭಿಸಲು 15 ನಿಮಿಷ ವಿಳಂಬಿಸಲಾಯಿತು. ನಿನ್ನೆ 7 ಓವರುಗಳಲ್ಲಿ ವಿಕೆಟ್ ನಷ್ಟವಿಲ್ಲದೆ 29 ರನ್ ದಾಖಲಿಸಿದ್ದ, ಭಾರತ ಇಂದು 83.5 ಓವರುಗಳಲ್ಲಿ 249 ರನ್ ದಾಖಲಿಸಲಷ್ಟೇ ಶಕ್ತವಾಯಿತು. ದಿನದಂತ್ಯದಲ್ಲಿ ಬೆಳಕಿನ ಕೊರತೆ ಕಾಡಿದ ಕಾರಣ ಆಟವನ್ನು ಬೇಗನೆ ಮುಗಿಸಲಾಗಿದೆ.

ಆರಂಭಿಕ ದಿನ ಮೊದಲ ಇನ್ನಿಂಗ್ಸ್‌ನಲ್ಲಿ ಗೌತಮ್ ಗಂಭೀರ್ ಮತ್ತು ವೀರೇಂದ್ರ ಸೆಹ್ವಾಗ್ ಕ್ರಮವಾಗಿ 6 ಮತ್ತು 22 ರನ್ ದಾಖಲಿಸಿದ್ದರು. ಇಂದು ಆಟವನ್ನು ಆರಂಭಿಸಿದ ಸ್ವಲ್ಪವೇ ಹೊತ್ತಿನಲ್ಲಿ ಸೆಹ್ವಾಗ್ ಆತುರಪಟ್ಟು ರನ್ನೌಟಾದರು. ಅವರು 21 ಎಸೆತಗಳಿಂದ 24 ರನ್ ಗಳಿಸಿದ್ದರು. ಮೊದಲ ವಿಕೆಟ್ ಕಳೆದುಕೊಂಡ ಭಾರತ ಆಗ 37 ರನ್ ಗಳಿಸಿತ್ತು.

ಗೌತಮ್ ಗಂಭೀರ್ (72) ಮತ್ತು ರಾಹುಲ್ ದ್ರಾವಿಡ್ (66) ತಾಳ್ಮೆಯ ಆಟವಾಡಿ ಅರ್ಧಶತಕ ದಾಖಲಿಸಿದ್ದಾಗ ಕ್ರಮವಾಗಿ ಕ್ರಿಸ್ ಮಾರ್ಟಿನ್‌ ಮತ್ತು ಇಯಾನ್ ಓಬ್ರಿಯಾನ್‌ರಿಗೆ ಬಲಿಯಾದರು. ಮ‌ೂರು ವಿಕೆಟ್ ಕಳೆದುಕೊಂಡ ಭಾರತ ಆಗ 177 ರನ್ ದಾಖಲಿಸಿತ್ತು.

ಕಲಾತ್ಮಕ ದಾಂಡಿಗ ವಿವಿಎಸ್ ಲಕ್ಷ್ಮಣ್ 91 ಎಸೆತಗಳಿಂದ 30 ರನ್ ದಾಖಲಿಸಿದ್ದಾಗ ಮಾರ್ಟಿ‌ನ್‌ಗೆ ಮ‌ೂರನೇ ವಿಕೆಟ್ ಆಹಾರವಾದರು. ಸಚಿನ್ ತೆಂಡೂಲ್ಕರ್ 135 ಎಸೆತಗಳಿಂದ 70 ಹಾಗೂ ಯುವರಾಜ್ ಸಿಂಗ್ 6 ರನ್ ಗಳಿಸಿ ಆಟವನ್ನು ನಾಳೆಗೆ ಮುಂದೂಡಿದ್ದಾರೆ. 118 ಎಸೆತಗಳಿಂದ ಹೊರ ಬಂದ ಸಚಿನ್ ತೆಂಡೂಲ್ಕರ್ 52ನೇ ಟೆಸ್ಟ್ ಅರ್ಧಶತಕ 8 ಬೌಂಡರಿಗಳನ್ನೊಳಗೊಂಡಿತ್ತು.

ನಾಲ್ಕು ವಿಕೆಟ್ ಕಳೆದುಕೊಂಡಿರುವ ಭಾರತ ಎರಡನೇ ದಿನದಂತ್ಯಕ್ಕೆ 90.5 ಓವರುಗಳಲ್ಲಿ 255 ರನ್ ದಾಖಲಿಸಿದೆ. ನ್ಯೂಜಿಲೆಂಡ್ ಪರ ಕ್ರಿಸ್ ಮಾರ್ಟಿನ್ 2 ಹಾಗೂ ಇಯಾನ್ ಓಬ್ರಿಯಾನ್ ತಲಾ ಒಂದು ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್ ಪಟ್ಟಿ

ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್ 279

ಭಾರತ ಮೊದಲ ಇನ್ನಿಂಗ್ಸ್ 278/4

ಬ್ಯಾಟಿಂಗ್: ಗೌತಮ್ ಗಂಭೀರ್ 72, ವೀರೇಂದ್ರ ಸೆಹ್ವಾಗ್ 24, ರಾಹುಲ್ ದ್ರಾವಿಡ್ 66, ಸಚಿನ್ ತೆಂಡೂಲ್ಕರ್ 70*, ಯುವರಾಜ್ ಸಿಂಗ್ 8*.

ವಿಕೆಟ್ ಪತನ: 1-37 (ಸೆಹ್ವಾಗ್, 9.2 ಓವರ್), 2-142 (ಗಂಭೀರ್, 41.4 ಓವರ್), 3-177 (ದ್ರಾವಿಡ್, 53.2 ಓವರ್), 4-238 (ಲಕ್ಷ್ಮಣ್, 81.3 ಓವರ್).

ಬೌಲಿಂಗ್: ಕ್ರಿಸ್ ಮಾರ್ಟಿನ್ 20-7-53-2, ಕೈಲ್ ಮಿಲ್ಸ್ 15-2-70-0, ಇಯಾನ್ ಓಬ್ರಿಯಾನ್ 19.5-4-56-1, ಜೇಮ್ಸ್ ಫ್ರಾಂಕ್ಲಿನ್ 13-1-46-0, ಡೇನಿಯಲ್ ವೆಟ್ಟೋರಿ 16-2-40-0, ಜೆಸ್ಸಿ ರೈಡರ್ 7-5-10-0.

ವೆಬ್ದುನಿಯಾವನ್ನು ಓದಿ