ಮೋದಿ ಒಬ್ಬ ಮೋಸಗಾರ: ರಾಜಸ್ತಾನ ಆರೋಪ

ಗುರುವಾರ, 19 ಮಾರ್ಚ್ 2009 (16:45 IST)
ಇಂಡಿಯನ್ ಪ್ರೀಮಿಯರ್ ಲೀಗ್ ಎರಡನೇ ಅವತರಣಿಕೆಯ ಪರಿಷ್ಕೃತ ವೇಳಾಪಟ್ಟಿಯನ್ನು ರಾಜಸ್ತಾನ ಸರಕಾರಕ್ಕೆ ಸಲ್ಲಿಸಿಲ್ಲ ಮತ್ತು ಭದ್ರತೆ ಕುರಿತಂತೆ ಯಾವುದೇ ಚರ್ಚೆ ನಡೆಸಿಲ್ಲ; ಇದು ಐಪಿಎಲ್ ಆಯುಕ್ತ ಲಲಿತ್ ಮೋದಿಯ ಕುತಂತ್ರವಾಗಿದ್ದು, ಅವರೊಬ್ಬ ಮೋಸಗಾರ ಎಂದು ರಾಜಸ್ತಾನ ಗೃಹ ಸಚಿವ ಶಾಂತಿ ಧಾರಿವಾಲ್ ಆರೋಪಿಸಿದ್ದಾರೆ.

ಆದರೆ ಈ ಆರೋಪಗಳನ್ನು ನಿರಾಕರಿಸಿರುವ ಲಲಿತ್ ಮೋದಿ, ಸರಕಾರ ಸುಳ್ಳು ಹೇಳುತ್ತಿದ್ದು ಅವರ ಹೇಳಿಕೆಗಳು ನಿರಾಧಾರ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಜೈಪುರ ವಿಚಾರದಲ್ಲಿ ನಿಮಗೇನಾದರೂ ಕೇಳುವುದಿದ್ದರೆ ಕೇಂದ್ರ ಗೃಹ ಸಚಿವಾಲಯವನ್ನು ವಿಚಾರಿಸಿ. ನಾವು ದಿನಗಳನ್ನು ನಿಗದಿ ಪಡಿಸಿದ್ದೆವು. ಆದರೆ ಅರೆಸೇನಾಪಡೆಗಳ ಪ್ರಸ್ತಾಪ ಇದ್ದುದರಿಂದ ದಿನಾಂಕಗಳನ್ನು ಬದಲಾಯಿಸುವಂತೆ ಸಚಿವಾಲಯ ನಮಗೆ ಸೂಚಿಸಿತು. ಇದು ರಾಜಸ್ತಾನ ಸರಕಾರ ಮತ್ತು ಗೃಹ ಸಚಿವಾಲಯಕ್ಕೆ ಸಂಬಂಧಿಸಿದ ವಿಚಾರ. ಅವರಿಗೆ ಸಂಬಂಧಪಟ್ಟದ್ದೇ ಹೊರತು ನಮಗಲ್ಲ ಎಂದು ಮೋದಿ ವಿವರಿಸಿದರು.

ಐಪಿಎಲ್ ಎರಡನೇ ಅವತರಣಿಕೆಯ ಪರಿಷ್ಕೃತ ವೇಳಾಪಟ್ಟಿಯನ್ನು ಸರಕಾರಕ್ಕೆ ಸಲ್ಲಿಸಿಲ್ಲ ಮತ್ತು ಭದ್ರತೆ ಕುರಿತಾಗಿ ಯಾವೊಂದು ಮಾತುಕತೆಯನ್ನೂ ನಡೆಸಿಲ್ಲ. ಆದಾಗ್ಯೂ ಜೈಪುರದಲ್ಲಿನ ಪಂದ್ಯಗಳನ್ನು ರದ್ದು ಮಾಡಲಾಗಿದೆ. ನಾವೀಗಲೂ ಐಪಿಎಲ್ ಪಂದ್ಯಗಳಿಗಾಗಿ ತಯಾರಿ ನಡೆಸುತ್ತಿದ್ದೇವೆ. ಜೈಪುರದಲ್ಲಿ ನಡೆಯುವುದೆಂದು ನಿಗದಿಯಾಗಿದ್ದ ಪಂದ್ಯಗಳನ್ನು ಬೇರೆಡೆಗೆ ಸ್ಥಳಾಂತರಿಸಲು ಲಲಿತ್ ಮೋದಿಯೇ ಕಾರಣ ಎಂದು ರಾಜಸ್ತಾನ ಸರಕಾರ ನೇರವಾಗಿ ಆರೋಪಿಸಿದೆ.

ಮೋದಿ ಓರ್ವ ದಗಾಕೋರರಾಗಿದ್ದು, ರಾಜಸ್ತಾನ ಜನತೆಗೆ ಮೋಸ ಮಾಡಿದ್ದಾರೆ ಎಂದೂ ಗೃಹ ಸಚಿವ ಶಾಂತಿ ಧಾರಿವಾಲ್ ಟೀಕಿಸಿದ್ದಾರೆ.

ಮೊದಲು ನಿಗದಿಯಾಗಿದ್ದ ಐಪಿಎಲ್ ಪಂದ್ಯಗಳಲ್ಲಿ ಕೆಲವು ಪಂದ್ಯಗಳಿಗೆ ಚುನಾವಣೆ ಹಿನ್ನಲೆಯಲ್ಲಿ ಭದ್ರತೆ ಒದಗಿಸಲು ಅಸಾಧ್ಯ ಎಂದಿದ್ದೆವು. ಇಡೀ ಟೂರ್ನಮೆಂಟ್‌ಗೆ ಭದ್ರತೆ ಅಸಾಧ್ಯ ಎಂದು ನಾವು ಯಾವತ್ತೂ ಹೇಳಿಲ್ಲ. ಆದರೆ ಇಡೀ ಟೂರ್ನಮೆಂಟನ್ನೇ ಜೈಪುರದಿಂದ ವರ್ಗಾಯಿಸಲಾಗಿದೆ. ಇದು ಲಲಿತ್ ಮೋದಿಯವರ ದ್ವೇಷದ ಕ್ರಮವಾಗಿದ್ದು, ಮೋದಿ ರಾಜಸ್ತಾನಕ್ಕೆ ಮೋಸ ಮಾಡಿದ್ದಾರೆ ಎಂದು ಜನ ತಿಳಿದುಕೊಂಡಿದ್ದಾರೆ ಎಂದು ಸರಕಾರ ಆರೋಪಿಸಿದೆ.

ಐಪಿಎಲ್ ನೂತನ ವೇಳಾಪಟ್ಟಿಯ ಯಾವುದೇ ವಿಚಾರಗಳನ್ನು ನಮಗೆ ಅಧಿಕೃತವಾಗಿ ತಿಳಿಸಲಾಗಿಲ್ಲ. ದಿನ ಪತ್ರಿಕೆಗಳನ್ನು ನೋಡಿದ ನಂತರವೇ ಜೈಪುರದಿಂದ ಪಂದ್ಯಗಳು ಸ್ಥಳಾಂತರಗೊಂಡ ವಿಚಾರ ತಿಳಿದು ಬಂತು. ಈ ಎಲ್ಲಾ ವಿಚಾರಗಳ ಹಿಂದೆ ಮೋದಿ ಕೈವಾಡವಿದೆ ಎಂದು ಧಾರಿವಾಲ್ ತಿಳಿಸಿದರು.

ಜೈಪುರದಲ್ಲಿ ನಡೆಯಬೇಕಾಗಿದ್ದ ಐಪಿಎಲ್‌ನ ಏಳು ಪಂದ್ಯಗಳಲ್ಲಿ ನಾಲ್ಕು ಪಂದ್ಯಗಳನ್ನು ಮುಂಬೈಯ ಡಿ.ವೈ. ಪಾಟೀಲ್ ಕ್ರೀಡಾಂಗಣ ಹಾಗೂ ಮ‌ೂರು ಪಂದ್ಯಗಳನ್ನು ನಾಗ್ಪುರದಲ್ಲಿ ನಡೆಯಲಾಗುತ್ತದೆ ಎಂದು ಹೊಸ ವೇಳಾಪಟ್ಟಿಯಲ್ಲಿ ಐಪಿಎಲ್ ತಿಳಿಸಿದೆ ಎಂದು ವರದಿಯಾಗಿತ್ತು.

ವೆಬ್ದುನಿಯಾವನ್ನು ಓದಿ