ಐಪಿಎಲ್ ವೇಳಾಪಟ್ಟಿಗೆ ಬೆಂಗಳೂರು ಹಸಿರು ನಿಶಾನೆ

ಗುರುವಾರ, 19 ಮಾರ್ಚ್ 2009 (17:39 IST)
ಇಂಡಿಯನ್ ಪ್ರೀಮಿಯರ್ ಲೀಗ್ ಎರಡನೇ ಅವತರಣಿಕೆಯ ಬೆಂಗಳೂರಿನ ಪಂದ್ಯಗಳಿಗೆ ಕರ್ನಾಟಕ ಹಸಿರು ನಿಶಾನೆ ತೋರಿಸಿದ್ದು, ಕ್ರೀಡಾಕೂಟ ಸರಾಗವಾಗಿ ನಡೆಯಲಿದೆ ಎಂದು ಬೆಂಗಳೂರು ರಾಯಲ್ ಚಾಲೆಂಜರ್ಸ್ ಮಾಲಕ ವಿಜಯ ಮಲ್ಯ ಭರವಸೆ ವ್ಯಕ್ತಪಡಿಸಿದ್ದಾರೆ.

ಗೃಹ ಸಚಿವಾಲಯ ಮತ್ತು ಐಪಿಎಲ್ ಪ್ರತಿನಿಧಿಗಳ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಅವರು, ಟ್ವೆಂಟಿ-20 ಎರಡನೇ ಅವತರಣಿಕೆ ಶೀಘ್ರದಲ್ಲೇ ಸುಗಮವಾಗಿ ಆರಂಭ ಕಾಣಲಿದೆ ಎಂದರು.

ಈ ಟೂರ್ನಮೆಂಟ್‌ಗಾಗಿ ಭಾರತವು ಸಂಪೂರ್ಣ ಭದ್ರತೆಯನ್ನು ನೀಡಲಿದೆ. ಸಂಕಷ್ಟದಲ್ಲಿರುವ ಐಪಿಎಲ್ ಪರಿಷ್ಕೃತ ವೇಳಾಪಟ್ಟಿ ಶೀಘ್ರದಲ್ಲೇ ಪ್ರಕಟವಾಗಲಿದೆ ಎಂದು ಇದೇ ಸಂದರ್ಭದಲ್ಲಿ ಮದ್ಯದ ದೊರೆ ತಿಳಿಸಿದ್ದಾರೆ.

"ಐಪಿಎಲ್ ವೇಳಾಪಟ್ಟಿ ವಿವಾದ ಶೀಘ್ರದಲ್ಲೇ ಅಂತ್ಯ ಕಾಣಲಿದೆ. ದಿನಾಂಕಗಳನ್ನು ನಿಗದಿಪಡಿಸುವುದು ಮತ್ತು ಭದ್ರತೆ ವಿಚಾರಗಳನ್ನು ಬಿಸಿಸಿಐ ನೋಡಿಕೊಳ್ಳುತ್ತದೆ. ಅದರಲ್ಲಿ ಮಾಡಬೇಕಾದ ಬದಲಾವಣೆಗಳನ್ನು ಅವರು ಮಾಡಿಕೊಳ್ಳಲಿದ್ದಾರೆ. ನಮ್ಮದು ಭಾರತ- ಹಾಗಾಗಿ ಸಮರ್ಥ ಭದ್ರತೆ ಸಿಗಲಿದೆ. ಐಪಿಎಲ್ ಸರಾಗವಾಗಿ ನಡೆಯುವ ವಿಶ್ವಾಸ ನನ್ನಲ್ಲಿದೆ. ಚುನಾವಣೆಗಳು ಕೂಡ ಮುಖ್ಯವಾಗಿದ್ದು, ಇಡೀ ಪ್ರಕರಣ ಸುಖಾಂತ್ಯ ಕಾಣಲಿದೆ" ಎಂದು ಮಲ್ಯ ಭರವಸೆ ವ್ಯಕ್ತಪಡಿಸಿದರು.

ಅದೇ ಹೊತ್ತಿಗೆ ಮಾತನಾಡಿರುವ ಬೆಂಗಳೂರು ಪೊಲೀಸ್ ಕಮೀಷನರ್ ಶಂಕರ್ ಬಿದರಿ, ಬೆಂಗಳೂರಿನಲ್ಲಿ ನಡೆಯುವ ಎಲ್ಲಾ ಪಂದ್ಯಗಳಿಗೂ ಗರಿಷ್ಠ ಭದ್ರತೆ ನೀಡಲಾಗುತ್ತದೆ ಎಂದಿದ್ದಾರೆ. "ನಾವು ಭದ್ರತೆ ಬಗ್ಗೆ ಎರಡು ಸುತ್ತಿನ ಮಾತುಕತೆ ನಡೆಸಿದ್ದೇವೆ. ಸಂಪೂರ್ಣ ಭದ್ರತೆ ನೀಡುವ ಬಗ್ಗೆ ನಾವು ಭರವಸೆ ನೀಡಿದ್ದೇವೆ ಮತ್ತು ಈ ಸಂಬಂಧ ಲಿಖಿತವಾಗಿ ತಿಳಿಸಲಾಗಿದೆ" ಎಂದು ಬಿದರಿ ತಿಳಿಸಿದರು.

ಪಶ್ಚಿಮ ಬಂಗಾಲ, ಹಿಮಾಚಲ ಪ್ರದೇಶ ಮತ್ತು ಪಂಜಾಬ್‌ಗಳು ಒಪ್ಪಿಗೆ ನೀಡಿದ ನಂತರ ಬೆಂಗಳೂರು ಕೂಡ ಅದೇ ಹಾದಿಯಲ್ಲಿ ಸಾಗಿದೆ.

ಬೆಂಗಳೂರಿನಲ್ಲಿ ಏಪ್ರಿಲ್ 23ರ ನಂತರ ಅಂದರೆ ಚುನಾವಣೆಗಳು ಮುಗಿದ ಮೇಲೆ ಪಂದ್ಯಗಳನ್ನು ನಡೆಸಲಾಗುತ್ತದೆ. ಮೇ 4, 7, 10, 11, 14, 19 ಮತ್ತು 20ರಂದು ರಾಯಲ್ ಚಾಲೆಂಜರ್ಸ್ ಪಂದ್ಯಗಳು ಬೆಂಗಳೂರಿನಲ್ಲಿ ನಡೆಯಲಿವೆ ಎಂದು ಐಪಿಎಲ್ ತನ್ನ ನೂತನ ವೇಳಾಪಟ್ಟಿಯಲ್ಲಿ ತಿಳಿಸಿದೆ ಎಂದು ತಿಳಿದು ಬಂದಿದೆ.

ವೆಬ್ದುನಿಯಾವನ್ನು ಓದಿ