ಕೊಲ್ಕತ್ತಾ ತಂಡದಲ್ಲಿ ಗಂಗೂಲಿ ಆಡಲಿದ್ದಾರೆ: ಫ್ರಾಂಚೈಸಿ

ಬುಧವಾರ, 25 ಮಾರ್ಚ್ 2009 (12:38 IST)
ಐಪಿಎಲ್ ತಂಡ ಕೊಲ್ಕತ್ತಾ ನೈಟ್ ರೈಡರ್ಸ್ ತರಬೇತುದಾರ ಜಾನ್ ಬುಚನಾನ್ ಮತ್ತು ಕಪ್ತಾನ ಸೌರವ್ ಗಂಗೂಲಿ ಮಧ್ಯೆ ಭಿನ್ನಾಭಿಪ್ರಾಯಗಳು ತಲೆದೋರಿದ್ದು, ನಾಯಕತ್ವ ಬದಲಿಸುವುದು ಖಚಿತ. ಆದರೆ ತಂಡದಲ್ಲಿ ಗಂಗೂಲಿ ಸ್ಥಾನ ಪಡೆಯಲಿದ್ದಾರೆ. ನಾಯಕನ ಸ್ಥಾನಕ್ಕೆ ನ್ಯೂಜಿಲೆಂಡ್ ಆಲ್-ರೌಂಡರ್ ಬ್ರೆಂಡನ್ ಮೆಕಲಮ್ ಬರುವ ಸಾಧ್ಯತೆಗಳು ದಟ್ಟವಾಗಿವೆ.

"ತಂಡಕ್ಕೆ ಗಂಗೂಲಿಯವರನ್ನು ಆರಿಸುವ ಬಗ್ಗೆ ಯಾವುದೇ ಅನಿಶ್ಚಿತತೆಯಿಲ್ಲ. ಅವರು ನಮ್ಮ ತಂಡದಲ್ಲಿರುತ್ತಾರೆ" ಎಂದು ಕೊಲ್ಕತ್ತಾ ನೈಟ್ ರೈಡರ್ಸ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಜೋಯ್ ಭಟ್ಟಾಚಾರ್ಯ ಸ್ಪಷ್ಟಪಡಿಸಿದ್ದಾರೆ.

ತಂಡದ ನಿರ್ದೇಶಕ ಜಾನ್ ಬುಚನಾನ್‌ರವರು ಗಂಗೂಲಿ ಬಗ್ಗೆ ಅಸಂತೃಪ್ತರಾಗಿದ್ದು, ತಂಡಕ್ಕೆ ಸೇರ್ಪಡೆಗೊಳಿಸುವ ಸಾಧ್ಯತೆಗಳು ಕ್ಷೀಣಿಸಿವೆ. ಅಲ್ಲದೆ ಕಪ್ತಾನಗಿರಿಯನ್ನು ನಿಶ್ಚಿತವಾಗಿ ಬದಲಾವಣೆ ಮಾಡಲಾಗುತ್ತದೆ ಎಂದು ವರದಿಯಾಗಿತ್ತು.

"ದಕ್ಷಿಣ ಆಫ್ರಿಕಾ ಅಥವಾ ಇಂಗ್ಲೆಂಡ್‌ನ ವಾತಾವರಣದಲ್ಲಿ ಟ್ವೆಂಟಿ-20 ಆಡಲು 37ರ ಹರೆಯದ ಗಂಗೂಲಿ ಶಕ್ತರಲ್ಲ. ಅವರಲ್ಲಿ ದೈಹಿಕ ಕ್ಷಮತೆಯ ಕೊರತೆಯಿದೆ ಎನ್ನವುದು ಬುಚನಾನ್ ಅಭಿಪ್ರಾಯ. ಬುಚನಾನ್‌ರವರು ಈಗಾಗಲೇ ತಂಡದ ಕಪ್ತಾನನ ಆಯ್ಕೆ ನಡೆಸಿದ್ದಾರೆ. ಆದರೆ ಮಾಲಕ ಶಾರೂಖ್ ಖಾನ್ ವಿದೇಶದಲ್ಲಿರುವುದರಿಂದ ಅನುಮೋದನೆ ಸಿಗಬೇಕಾಗಿದೆ" ಎಂದೂ ಅವರು ಇದೇ ಸಂದರ್ಭದಲ್ಲಿ ಬಹಿರಂಗ ಪಡಿಸಿದರು.

ಗಂಗೂಲಿಯವರ ದೈಹಿಕ ಕ್ಷಮತೆಯ ವಿಚಾರದಲ್ಲಿ ಆಸ್ಟ್ರೇಲಿಯನ್ ಕೋಚ್ ಅಸಮಾಧಾನ ಹೊಂದಿರುವುದು ನಿಜ. ಕೋಚ್ ಇಲ್ಲಿದ್ದಾಗ ಗಂಗೂಲಿ ಅಭ್ಯಾಸಕ್ಕೂ ಹಾಜರಾಗುತ್ತಿರಲಿಲ್ಲ. ಅದರಿಂದಾಗಿ ಬುಚನಾನ್ ಅಸಮಾಧಾನರಾಗಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಕಳೆದ ಕೆಲವು ಸಮಯದಿಂದ ದೂರ ಉಳಿದಿರುವ ಗಂಗೂಲಿ ಅಭ್ಯಾಸದ ಅಗತ್ಯವಿತ್ತು. ಈ ಕಾರಣದಿಂದ ಅವರ ದೈಹಿಕ ಕ್ಷಮತೆ ಸರಿಯಾಗಿಲ್ಲ ಎಂಬುದು ಬುಚನಾನ್ ವಾದ. ಹಾಗೆಂದು ಬುಚನಾನ್-ಗಂಗೂಲಿ ನಡುವೆ ಯಾವುದೇ ಸಮಸ್ಯೆಗಳಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.

ಗಂಗೂಲಿಯವರಿಂದ ಕಪ್ತಾನಗಿರಿಯನ್ನು ಕಸಿದುಕೊಳ್ಳುವುದು ಖಚಿತ. ಆದರೆ ಅವರ ಸ್ಥಾನಕ್ಕೆ ಯಾರನ್ನು ಆರಿಸಲಾಗುತ್ತದೆ ಎಂದು ಹೇಳಲಾಗಿಲ್ಲ. ನ್ಯೂಜಿಲೆಂಡ್ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಬ್ರೆಂಡನ್ ಮೆಕಲಮ್, ವೆಸ್ಟ್‌ಇಂಡೀಸ್ ಕಪ್ತಾನ ಕ್ರಿಸ್ ಗೇಲ್ ಮತ್ತು ಆಸ್ಟ್ರೇಲಿಯಾದ ಬ್ರಾಡ್ ಹಾಡ್ಜ್ ನಾಯಕತ್ವದ ಕುರಿತ ಚರ್ಚೆಯಲ್ಲಿದ್ದಾರೆ ಎಂದು ತಿಳಿದು ಬಂದಿದೆ.

ಈ ವಿಚಾರದ ಬಗ್ಗೆ ಗಂಗೂಲಿಯವರ ಪ್ರತಿಕ್ರಿಯೆ ಕೇಳಿದಾಗ, "ನನ್ನಲ್ಲಿ ಯಾವುದೇ ಮಾಹಿತಿಗಳಿಲ್ಲ. ಪ್ರತಿಕ್ರಿಯೆ ನೀಡಲಾರೆ" ಎಂದಿದ್ದಾರೆ. ಅವರು ಶಾರೂಖ್ ಖಾನ್ ಜತೆ ಮಾತುಕತೆ ನಡೆಸಿ ಸಮಸ್ಯೆಯನ್ನು ಬಗೆಹರಿಸುವ ಯೋಚನೆಯಲ್ಲಿದ್ದಾರೆ ಎನ್ನಲಾಗಿದೆ. ಅದೇ ಹೊತ್ತಿಗೆ ಶಾರೂಖ್ ಕೂಡ ಗಂಗೂಲಿ ಪರವಾಗಿ ನಿಲ್ಲುವ ಸಾಧ್ಯತೆಯಿದೆ ಎಂದು ಮ‌ೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ