ತದ್ರೂಪು ಕಂಡು ಅಚ್ಚರಿಗೊಂಡ ಮಾಸ್ಟರ್ ಬ್ಲಾಸ್ಟರ್

ಸೋಮವಾರ, 13 ಏಪ್ರಿಲ್ 2009 (20:16 IST)
ಲಂಡನ್‌ನ ಮಾದಮೇ ತುಸೌಡ್ಸ್ ಮ್ಯೂಸಿಯಂನಲ್ಲಿಡಬೇಕಾದ ಪ್ರಪ್ರಥಮ ಭಾರತೀಯ ಕ್ರೀಡಾಪಟು ಸಚಿನ್ ತೆಂಡೂಲ್ಕರ್ ಪ್ರತಿಮೆಯನ್ನು ಕಂಡು ಸ್ವತಃ ಅವರೇ ಮುಖಾಮುಖಿಯಾದಾಗ ಅಚ್ಚರಿಯೇ ಕಾದಿತ್ತು.

ಮುಂಬೈಯಲ್ಲಿನ ತಾಜ್ ಲ್ಯಾಂಡ್ಸ್ ಎಂಡ್ ಹೊಟೇಲ್‌ನಲ್ಲಿ ಸೋಮವಾರ ಈ ಪುತ್ಥಳಿಯನ್ನು ಅವರು ಮುಖಾಮುಖಿಯಾದರು. ಸುಮಾರು ಏಳು ಸಾವಿರ ಕಿಲೋ ಮೀಟರ್ ದೂರದಿಂದ ಕ್ರಿಕೆಟ್ ದಂತಕತೆಯ ಭೇಟಿಗಾಗಿ ಮುಂಬೈಗೆ ಆಮದಾಗಿದ್ದ ಮೂರ್ತಿ ಮತ್ತೆ ಲಂಡನ್‌ಗೆ ತೆರಳಲಿದೆ.

"ಈ ಕಲಾಕೃತಿ ನನ್ನನ್ನು ತೀವ್ರವಾಗಿ ಆಕರ್ಷಿಸಿದೆ ಮತ್ತು ತುಂಬಾ ಸಂತಸವೆನಿಸಿದೆ. ಮಾದಮೇ ತುಸೌಡ್ಸ್‌ನಲ್ಲಿರುವುದೇ ದೊಡ್ಡ ಗೌರವ. ಆ ಗೌರವವನ್ನು ಪಡೆಯುತ್ತಿರುವ ದೇಶದ ಮೊದಲ ಕ್ರೀಡಾಪಟು ನಾನೆಂಬುದೂ ತಿಳಿದಿದೆ. ಇದು ಭಾರತೀಯ ಕ್ರಿಕೆಟ್‌ಗೆ ಪ್ರೋತ್ಸಾಹ ಮತ್ತು ನನ್ನ ಕೊಡುಗೆಯ ಪ್ರತಿಫಲನವೆಂಬುದು ನನ್ನ ಭಾವನೆ" ಎಂದು ಸಚಿನ್ ಪ್ರತಿಕ್ರಿಯೆ ನೀಡಿದ್ದಾರೆ.

ಸಚಿನ್ ತೆಂಡೂಲ್ಕರ್ ಹುಟ್ಟುಹಬ್ಬದಂದು (ಏಪ್ರಿಲ್ 24) ಲಂಡನ್‌ನ ಮ್ಯೂಸಿಯಂನಲ್ಲಿ ಉದ್ಘಾಟನೆಗೊಳ್ಳಲಿರುವ ಈ ಪ್ರತಿಮೆಯನ್ನು ಕಂಡು ನನಗೆ ಮಾತೇ ಹೊರಡಲಿಲ್ಲ ಎಂದು ಸಚಿನ್ ತಿಳಿಸಿದರು. "ಯಾವುದನ್ನೂ ಸುಲಭವಾಗಿ ಪರಿಗಣಿಸುವ ವ್ಯಕ್ತಿ ನಾನಲ್ಲ. ಆದರೆ ನಾನು ಮತ್ತು ಕುಟುಂಬ ಆ ಮೂರ್ತಿಯನ್ನು ನೋಡಿದಾಗ ಆಶ್ಚರ್ಯವಾಯಿತು. ತದ್ರೂಪನ್ನು ನೋಡಿ ನನ್ನ ಪ್ರತಿಕ್ರಿಯೆಯೇ ಭಿನ್ನವಾಗಿತ್ತು. ಈ ಹಿಂದೆ ಈ ರೀತಿಯ ಪ್ರತಿಕ್ರಿಯೆಯನ್ನು ನಾನ್ಯಾವತ್ತೂ ತೋರಿಸಿರಲಿಲ್ಲ-- ಆ ರೀತಿಯ ವಿಶೇಷ ಭಾವ ನನ್ನಲ್ಲಿ ಮೂಡಿತು. ನಿಜಕ್ಕೂ ಪ್ರತಿಮೆ ನೈಜವಾಗಿದೆ, ಅದ್ಭುತವಾಗಿದೆ. ಆದರೆ ಅದು ಉಸಿರಾಡುತ್ತಿಲ್ಲವೆಂಬುದೇ ಸಮಾಧಾನಕರ ವಿಚಾರ" ಎಂದು ಮಾಸ್ಟರ್ ಬ್ಲಾಸ್ಟರ್ ಬಣ್ಣಿಸಿದರು.

ನನ್ನ ಮಗ ಅರ್ಜುನ್ ಮೂರ್ತಿಯ ಕೈಯಿಂದ ಬ್ಯಾಟ್ ಪಡೆದು ಆಡುವುದರಲ್ಲಿದ್ದ. ಆದರೆ ನಾನು ತೀರಾ ಹತ್ತಿರ ಹೋಗದಂತೆ ಆತನಿಗೆ ಸೂಚನೆ ನೀಡಿದೆ ಎಂದರು.

ನಿಮ್ಮ ಪ್ರಕಾರ ತುಸೌಡ್ಸ್‌ನಲ್ಲಿಡಬೇಕಾದ ಮುಂದಿನ ಪ್ರತಿಮೆ ಯಾರದ್ದು ಎಂದಾಗ, "ಮುಂದೆ ಯಾರು ಸ್ಥಾನ ಪಡೆಯುತ್ತಾರೆಂದು ನಾನು ಹೇಳಲಾರೆ. ಅಲ್ಲಿ ಸ್ಥಾನ ಪಡೆಯುವುದೇ ವಿಶೇಷ ಗೌರವ. ಭಾರತೀಯರು ಸೇರಿದಂತೆ ಹಲವಾರು ಶ್ರೇಷ್ಠರು ಅಲ್ಲಿದ್ದಾರೆ" ಎಂದರು.

ನಿಮ್ಮ ಪ್ರತಿಮೆಯನ್ನು ತುಸೌಡ್ಸ್ ಈ ಹಿಂದೆಯೇ ಸ್ಥಾಪಿಸಬೇಕಿತ್ತು ಎಂದೆನಿಸುತ್ತಿದೆಯೇ ಎಂಬ ಪ್ರಶ್ನೆಗೆ ಅವರು, ನನ್ನ ಪ್ರತಿಮೆಯನ್ನು ಯಾವಾಗ ಎಲ್ಲಿ ಅಥವಾ ಈ ವರ್ಷವೋ ಅಥವಾ ಎರಡು ವರ್ಷಗಳ ಮೊದಲು ಸ್ಥಾಪಿಸಬೇಕೋ ಎನ್ನುವುದನ್ನು ನಿರ್ಧರಿಸುವವನು ನಾನಲ್ಲ. ಅದರ ಬಗ್ಗೆ ನಾನು ಯಾವುದೇ ಯೋಚನೆ ಮಾಡಿಲ್ಲ. ಈಗ ಅಲ್ಲಿ ಸ್ಥಾನ ಪಡೆದಿರುವುದಕ್ಕೆ ಸಂತಸಗೊಂಡಿದ್ದೇನೆ ಎಂದರು.

ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರೀಡಾಕೂಟದ ನಂತರ ತಾನು ಲಂಡನ್‌ಗೆ ತೆರಳಿ ತುಸೌಡ್ಸ್‌ನಲ್ಲಿನ ನನ್ನ ಪ್ರತಿಮೆಯನ್ನು ನಾನು ಸ್ವತಃ ನೋಡಲಿದ್ದೇನೆ ಎಂದು ಸಚಿನ್ ತಿಳಿಸಿದ್ದಾರೆ. "ನನಗೆ 15 ವರ್ಷ ಪ್ರಾಯವಾದಾಗಿನಿಂದ ತುಸೌಡ್ಸ್‌ಗೆ ಭೇಟಿ ನೀಡಬೇಕೆಂದು ಯೋಚಿಸುತ್ತಿದ್ದೆ. ಆದರೆ ಇದುವರೆಗೂ ಸಾಧ್ಯವಾಗಿಲ್ಲ. ಇಂಗ್ಲೆಂಡ್‌ ಪ್ರವಾಸದಲ್ಲಿದ್ದಾಗಲೂ ವೇಳಾಪಟ್ಟಿಯ ಕಾರಣ ಸಮಯ ಸಿಕ್ಕಿರಲಿಲ್ಲ. ಆದರೆ ಈ ಬಾರಿ ಅಲ್ಲಿನ ಪ್ರತಿಮೆಗಳ ವೀಕ್ಷಣೆ ಮಾಡಲಿದ್ದೇನೆ. ಅಲ್ಲದೆ ಹೇಗೆ ತಯಾರಿಸಲಾಗುತ್ತದೆ ಎಂಬುದನ್ನೂ ತಿಳಿದುಕೊಳ್ಳಬೇಕಿದೆ" ಎಂದು ತನ್ನ ಕುತೂಹಲವನ್ನು ತೋಡಿಕೊಂಡಿದ್ದಾರೆ.
PTI