ಅವರಿಲ್ಲದಿದ್ದರೆ ನಾನಿಂದು ಹೀಗಿರುತ್ತಿರಲಿಲ್ಲ: ಸಚಿನ್

ಬುಧವಾರ, 15 ಏಪ್ರಿಲ್ 2009 (15:02 IST)
ಪರ್ವತದಷ್ಟು ರನ್‌ಗಳು, ದಾಖಲೆಗಳ ಮೇಲೆ ದಾಖಲೆಗಳನ್ನೇ ಪೇರಿಸಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ತನ್ನ ಮೂವರು ಗುರುಗಳ ಕೊಡುಗೆಗಳನ್ನು ಕೊಂಡಾಡಿದ್ದು, ನನ್ನ ಜೀವನದಲ್ಲಿ ಅವರು ಇಲ್ಲದೇ ಇರುತ್ತಿದ್ದರೆ ನಾನು ಕೇವಲ ಮತ್ತೊಬ್ಬ ಯುವಕ ಮಾತ್ರ ಆಗಿರುತ್ತಿದ್ದೆ ಎಂದಿದ್ದಾರೆ.

ತನ್ನ ತಂದೆ ರಮೇಶ್ ತೆಂಡೂಲ್ಕರ್, ಹಿರಿಯ ಸಹೋದರ ಅಜಿತ್ ಹಾಗೂ ಬಾಲ್ಯದ ಕೋಚ್ ರಮಾಕಾಂತ್ ಅಚ್ರೇಕರ್ ನಾನು ಈ ಮಟ್ಟಕ್ಕೆ ಬೆಳೆಯಲು ಕಾರಣರು ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.

"ನನ್ನ ಮೊದಲ ಗುರು ತಂದೆ. ಅವರು ನನ್ನ ಜೀವನಕ್ಕೆ ದಿಕ್ಕನ್ನೊದಗಿಸಿದರು" ಎಂದು ಮಂಗಳವಾರ ಮಾತನಾಡುತ್ತಾ ಅವರು ತಿಳಿಸಿದ್ದಾರೆ.

"ಜೀವನದಲ್ಲಿನ ಎಲ್ಲವೂ ತಾತ್ಕಾಲಿಕ ಎಂಬುದು ಅವರು ನೀಡಿದ ಪ್ರಮುಖ ಸಲಹೆಗಳಲ್ಲೊಂದು. ಜನರ ಮನಸ್ಸಿನಲ್ಲಿ ನಿಮ್ಮ ಬಗೆಗಿರುವ ಭಾವನೆ ಮಾತ್ರ ಕೊನೆಯವರೆಗೆ ಉಳಿಯುತ್ತದೆ. ನೀನು ಕ್ರಿಕೆಟ್‌ನಿಂದ ಹೊರ ಬಂದ ನಂತರವೂ ಜನ ನಿನ್ನನ್ನು ಉತ್ತಮ ಮಾನವೀಯ ಮೌಲ್ಯಗಳುಳ್ಳವನು ಎಂದು ನೆನಪಿಸಿಕೊಳ್ಳುವಂತಾಗಬೇಕು ಎಂದು ಅವರು ಹೇಳಿದ್ದರು" ಎಂದು ತಂದೆಯನ್ನು ಭಾವಪೂರ್ಣವಾಗಿ ತೆಂಡೂಲ್ಕರ್ ನೆನಪಿಸಿಕೊಂಡರು.

ಮತ್ತೂ ಮಾತು ಮುಂದುವರಿಸಿದ ಅವರು, "ಜನ ನಿನ್ನ ಸುತ್ತ ನಿನ್ನನ್ನು ಪ್ರೀತಿಸುತ್ತಾ, ನಿನ್ನೊಂದಿಗಿರಲು ಇಷ್ಟಪಡುತ್ತಾ ಇರುವ ದಿನ ನಿನಗೆ ಯಶಸ್ವಿ ಎನಿಸಲಿದ್ದಿ ಎಂದು ಅವರು ತಿಳಿಸಿ್ದದರು. ನನ್ನ ಪ್ರಕಾರ ಇದು ಅವರು ನನಗೆ ನೀಡಿದ ಅತ್ಯಂತ ಅಮೂಲ್ಯ ಸಲಹೆ ಎಂದು ಭಾವಿಸಿದ್ದೇನೆ" ಎಂದರು.

1999ರ ವಿಶ್ವಕಪ್ ನಡೆಯುತ್ತಿರುವಾಗ ಸಚಿನ್ ತಂದೆಯವರು ತೀರಿಕೊಂಡಿದ್ದರು. ಮಧ್ಯದಲ್ಲೇ ತವರಿಗೆ ವಾಪಸಾದ ಅವರು ತಂದೆಯ ಕರ್ಮಗಳನ್ನು ಮುಗಿಸಿದ ನಂತರ ವಾಪಸಾಗಿ ಶತಕವನ್ನು ಬಾರಿಸಿದ್ದರಲ್ಲದೆ, ಅದನ್ನು ಕಳೆದು ಹೋದ ತಂದೆಗೆ ಅರ್ಪಿಸಿದ್ದರು.

ತಂದೆಯ ಅನುಪಸ್ಥಿತಿಯಲ್ಲಿ ತನಗೆ ಅಣ್ಣನೇ ಮಾರ್ಗದರ್ಶಕ ಹಾಗೂ ದಾರ್ಶನಿಕರಾಗಿದ್ದು, ಅವರನ್ನು ಹಿಂಬಾಲಿಸುತ್ತಿದ್ದೇನೆ ಎಂದಿದ್ದಾರೆ. "ನನಗೆ ಅಣ್ಣನೇ ಎರಡನೇ ಗುರು. ನಾನು ಕ್ರಿಕೆಟ್‌ನಲ್ಲಿ ಏನನ್ನಾದರೂ ಸಾಧಿಸಿದ್ದರೆ ಅದರ ಕೀರ್ತಿ ಅವರಿಗೆ ಸಲ್ಲಬೇಕು. ನಾನು ಕ್ರಿಕೆಟ್ ಆಡಲು ಆರಂಭಿಸಿದ್ದೇ ಅವರ ಸಹಕಾರದಿಂದ ಮತ್ತು ಅದಕ್ಕೆ ಅವರೇ ಕಾರಣರು. ನಾನು ಇತರರಂತೆ ಕೇವಲ ಮೋಜುಗಾರ ಅಥವಾ ಶಾಲೆಗೆ ಹೋಗುವ ಹುಡುಗನಾಗಿ ಉಳಿಯುತ್ತಿದ್ದೆ. ಆದರೆ ಅವರು ನನ್ನನ್ನು ಆಡುವಂತೆ ಮಾಡಿದರು" ಎಂದು ತೀರಾ ಭಾವುಕರಾಗಿ ಅಗ್ರಜನ ತ್ಯಾಗವನ್ನು ಕೊಂಡಾಡಿದರು.

ಜತೆಗೆ ತನ್ನ ಮೊದಲ ತರಬೇತುದಾರ ರಮಾಕಾಂತ್ ಅಚ್ರೇಕರ್‌ರನ್ನು ಕೂಡ ಸಚಿನ್ ಮರೆಯಲಿಲ್ಲ. "ಅಚ್ರೇಕರ್ ಎಂದೆಂದೂ ಮರೆಯಲಾರದವರು. ನಾನು ಆಗ ಹೆಚ್ಚಿನ ಸಂದರ್ಭಗಳಲ್ಲಿ ಅಭ್ಯಾಸವನ್ನು ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದೆ. ಆದರೆ ನಾನೆಲ್ಲಿದ್ದರೂ ಅವರು ಬೈಕಿನಲ್ಲಿ ಬಂದು ಹುಡುಕಿ ಕರೆದುಕೊಂಡು ಹೋಗುತ್ತಿದ್ದರು. ಆ ಮೂಲಕ ಯಾವುದೇ ಅಭ್ಯಾಸದಿಂದ ವಂಚಿತನಾಗದಂತೆ ನೋಡಿಕೊಳ್ಳುತ್ತಿದ್ದರು. ಆ ದಿನಗಳು ನನ್ನ ಮೇಲೆ ಯಾವ ಪರಿಣಾಮ ಬೀರಿವೆ ಎಂಬುದನ್ನು ನಾನಿಂದು ತಿಳಿದುಕೊಂಡಿದ್ದೇನೆ" ಎಂದು ಜೇಪಿ ಸಿಮೆಂಟ್ಸ್ ರಾಯಭಾರಿಯಾಗಿ ನೇಮಕಗೊಂಡ ನಂತರ ಮಾತನಾಡುತ್ತಾ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ