ಕೋಲ್ಕತಾ ನೈಟ್ ರೈಡರ್ಸ್ ಸೆಮಿಫೈನಲ್‌ನಿಂದ ಔಟ್

ಬುಧವಾರ, 6 ಮೇ 2009 (11:09 IST)
ಗೌತಮ್ ಗಂಭೀರ್ ಅವರ ಅಜೇಯ 71 ರನ್‌ಗಳು ಇದೀಗಾಗಲೇ ಸೋತುಸುಣ್ಣವಾಗಿರುವ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಡೆಲ್ಲಿ ಡೇರ್ ಡೆವಿಲ್ಸ್ 9 ವಿಕೆಟ್‌ಗಳ ಜಯಸಾಧಿಸಲು ನೆರವಾಯಿತು. ಇದರಿಂದಾಗಿ ಡೇರ್ ಡೆವಿಲ್ಸ್ ಐಪಿಎಲ್ ಪಟ್ಟಿಯ ತುತ್ತತುದಿಗೇರಿದರೆ, ನೈಟ್ ರೈಡರ್ಸ್‌ನ ಸೆಮಿಫೈನಲ್ ಆಸೆ ಸಂಪೂರ್ಣ ಕಮರಿ ಹೋಗಿದೆ.

ಗಂಭೀರ್ (ಅಜೇಯ 71) ಸಕಾಲಿಕವಾಗಿ ಫಾರ್ಮ್‌ಗೆ ಮರಳಿದ್ದು, ಅವರಿಗೆ ಎರಡು ಬಾರಿ ರೈಡರ್ಸ್ 21 ಮತ್ತು 65ರ ವೇಳೆ ಜೀವದಾನ ನೀಡಿತು. ಈ ತಪ್ಪಿಗೆ ರೈಡರ್ಸ್ ಭಾರೀ ಬೆಲೆ ತೆರಬೇಕಾಯಿತು. ಇತ್ತ ಗಂಭೀರ್ ಈ ಬಾರಿಯ ಐಪಿಎಲ್‌ನಲ್ಲಿ ಪ್ರಥಮ ಅರ್ಧ ಸೆಂಚುರಿ ಬಾರಿಸಿದರು. ಒಟ್ಟಾರೆಯಾಗಿ ಐಪಿಎಲ್‍ನಲ್ಲಿ ಅವರು ಬಾರಿಸುತ್ತಿರುವ ಆರನೇ ಅರ್ಧ ಶಕತ ಇದಾಗಿದೆ.

ಡೆವಿಲ್ಸ್‌ನ ಡೇವಿಡ್ ವಾರ್ನರ್(36) ಮತ್ತು ತಿಲಕರತ್ನೆ ದಿಲ್ಶನ್(42 ಅಜೇಯ) ಅವರ ಕೊಡುಗೆಯೂ ತಂಡದ ಗೆಲುವಿಗೆ ಸಹಕರಿಸಿತು. ಕೋಲ್ಕತಾ ತಂಡವು ಡೆಲ್ಲಿ ತಂಡಕ್ಕೆ 155 ರನ್‌ಗಳ ಸವಾಲೊಡ್ಡಿತ್ತು. 57 ಬಾಲುಗಳನ್ನು ಎದುರಿಸಿದ ಗಂಭೀರ್ ರನ್ ಸಂಗ್ರಹದಲ್ಲಿ ಏಳು ಬೌಂಡರಿಗಳು ಸೇರಿದ್ದವು. ಅವರ ಗಲುವಿನ ರನ್ ಸಹ ಕೊನೆಯ ಫೋರ್‌ನಲ್ಲೇ ಅಡಕವಾಗಿದ್ದು, ಒಂದು ವಿಕೆಟ್ ನಷ್ಟಕ್ಕೆ ತಂಡವು 157 ರನ್ ಗಳಿಸಿತ್ತು.

ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ರೈಡರ್ಸ್ ಮೂರು ವಿಕೆಟ್ ನಷ್ಟಕ್ಕೆ 154 ರನ್ ಗಳಿಸಿತ್ತು. ಇದು ಈ ಬಾರಿಯ ಪಂದ್ಯಾವಳಿಯಲ್ಲಿ ತಂಡವು ಗಳಿಸಿದ ಗರಿಷ್ಠ ಮೊತ್ತ ಆದರೂ ಅದು ಪ್ರಯೋಜನಕ್ಕೆ ಬರಲಿಲ್ಲ. ತಂಡದ ಮೋರ್ನೆ ವಾನ್ 48 ರನ್ ಗಳಿಸಿದ್ದರು.

ಡೇರ್‌ಡೆವಿಲ್ಸ್ ಆಡಿರುವ ಒಟ್ಟು ಏಳು ಪಂದ್ಯಗಳಲ್ಲಿ ಇದು ಐದನೆ ಗೆಲುವಾಗಿದೆ. ಇದರಿಂದಾಗಿ 10 ಅಂಕಗಳಿಸಿರುವ ಡೆವಿಲ್ಸ್ ಪಟ್ಟಿಯ ಅಗ್ರ ಸ್ಥಾನದಲ್ಲಿದೆ. ನಂತರದ ಸ್ಥಾನ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡದ್ದು.

ಆದರೆ ಕೋಲ್ಕತಾ ಕಥೆ ಕರುಣಾಜನಕ. ಅವರು ಆಡಿದ ಒಂಬತ್ತು ಪಂದ್ಯಗಳಲ್ಲಿ ಏಳು ಪಂದ್ಯಗಳನ್ನು ಸೋತು ಎಂಟು ತಂಡದ ಅಂಕಪಟ್ಟಿಯ ಅತ್ಯಂತ ಕೆಳಗಿನ ಸ್ಥಾನದಲ್ಲಿದೆ. ಅವರು ಗಳಿಸಿದ ಒಟ್ಟುಅಂಕ 3 ಪಾಯಿಂಟುಗಳು. ಅವರು ಇನ್ನೂ ಐದು ಪಂದ್ಯಗಳನ್ನು ಆಡ ಬೇಕಿದ್ದರೂ ಅದು ಔಪಚಾರಿಕ ಮಾತ್ರ.

ವೆಬ್ದುನಿಯಾವನ್ನು ಓದಿ