ಆರು ಪಂದ್ಯಗಳನ್ನು ಜಯಿಸಿದ ಡೆಲ್ಲಿಗೆ ಅಗ್ರ ಸ್ಥಾನ

ಶನಿವಾರ, 9 ಮೇ 2009 (13:05 IST)
ಐಪಿಎಲ್ 35ನೇ ಪಂದ್ಯದಲ್ಲಿ ಮುಖಾಮುಖಿಯಾದ ಡೆಲ್ಲಿ ಡೇರ್‌ಡೆವಿಲ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಶುಕ್ರವಾರ ಸೃಷ್ಟಿಯಾದ ದಾಖಲೆಗಳ ಪಟ್ಟಿಯತ್ತ ಒಂದು ಪಕ್ಷಿನೋಟ. ಈ ಪಂದ್ಯವನ್ನು ಡೆಲ್ಲಿ ಡೇರ್‌ಡೆವಿಲ್ಸ್ 7 ವಿಕೆಟುಗಳಿಂದ ಗೆದ್ದುಕೊಂಡಿತ್ತು.

- 116ಕ್ಕೆ ಸರ್ವಪತನ ಕಂಡ ಮುಂಬೈ ಇಂಡಿಯನ್ಸ್ ಇಡೀ ಐಪಿಎಲ್‌ನಲ್ಲೇ ತನ್ನ ಅತೀ ಕಡಿಮೆ ಮೊತ್ತವನ್ನು ದಾಖಲಿಸಿತು. ಉದ್ಘಾಟನಾ ಆವೃತ್ತಿಯಲ್ಲಿ ಕಿಂಗ್ಸ್ XI ಪಂಜಾಬ್ ವಿರುದ್ಧ ಮೊಹಾಲಿಯಲ್ಲಿ 116/9 ದಾಖಲಿಸಿದ್ದು ಮುಂಬೈಯ ಇದುವರೆಗಿನ ಅತೀ ಕಡಿಮೆ ಮೊತ್ತವಾಗಿತ್ತು.

- ಮುಂಬೈ ಇಂಡಿಯನ್ಸ್ ವಿರುದ್ಧ ಏಳು ವಿಕೆಟ್‌ಗಳ ಜಯ ಸಾಧಿಸುವ ಮೂಲಕ ಡೆಲ್ಲಿ ಡೇರ್‌ಡೆವಿಲ್ಸ್ ಐಪಿಎಲ್ ದ್ವಿತೀಯ ಆವೃತ್ತಿಯಲ್ಲಿ ಆಡಿದ ಎಂಟು ಪಂದ್ಯಗಳಲ್ಲಿ ಆರು ಜಯವನ್ನು ದಾಖಲಿಸಿತು.

- ಐಪಿಎಲ್ ಎರಡನೇ ಆವೃತ್ತಿಯಲ್ಲಿ ಆರು ಜಯ ದಾಖಲಿಸಿದ ಮೊದಲ ತಂಡ ಡೆಲ್ಲಿ ಡೇರ್‌ಡೆವಿಲ್ಸ್. ಆ ಮೂಲಕ 12 ಅಂಕಗಳನ್ನು ಪಡೆದುಕೊಂಡು ಪಟ್ಟಿಯಲ್ಲಿ ಅಗ್ರ ಸ್ಥಾನ ಗಳಿಸಿದೆ.

- ಆರಂಭಿಕ ಆಟಗಾರರಾದ ಲ್ಯೂಕ್ ರೋಂಚಿ ಮತ್ತು ಜೀನ್ ಪೌಲ್ ಡ್ಯುಮಿನಿ ಇಬ್ಬರೂ ಶೂನ್ಯಕ್ಕೆ ನಿರ್ಗಮಿಸುವ ಮೂಲಕ ಐಪಿಎಲ್‌ನಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ ನಾಲ್ಕನೇ ಜೋಡಿ ಎಂಬ ಕುಖ್ಯಾತಿ ಪಡೆದಿದೆ.

- ಐಪಿಎಲ್‌ನಲ್ಲಿ ಡ್ಯುಮಿನಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದು ಇದೇ ಮೊದಲು ಮತ್ತು ಟ್ವೆಂಟಿ-20ಯಲ್ಲಿ ಐದನೇಯದ್ದು.

- ತಿಲಕರತ್ನೆ ದಿಲ್‌ಶಾನ್ 62.00ರ ಸರಾಸರಿಯಲ್ಲಿ 248 ರನ್ ಗಳಿಸುವ ಮೂಲಕ ಡೆಲ್ಲಿ ಡೇರ್‌ಡೆವಿಲ್ಸ್‌ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ಆಟಗಾರನೆನಿಸಿಕೊಂಡಿದ್ದಾರೆ.

- ನಂತರದ ಸ್ಥಾನ 57.75ರ ಸರಾಸರಿಯಲ್ಲಿ ಆರು ಇನ್ನಿಂಗ್ಸ್‌ಗಳಿಂದ 231 ರನ್ನು ಗಳಿಸಿರುವ ಡೆಲ್ಲಿ ತಂಡದ ಮತ್ತೊಬ್ಬ ದಾಂಡಿಗ ಅಬ್ರಹಾಂ ಡೇ ವಿಲ್ಲರ್ಸ್‌ರದ್ದು. ಅವರು ಕಳೆದ ಪಂದ್ಯದಲ್ಲಿ 38 ಎಸೆತಗಳಿಂದ 50 ರನ್ ದಾಖಲಿಸಿದ್ದರು. ಒಟ್ಟಾರೆ ಅವರು ಒಂದು ಶತಕ ಹಾಗೂ ಎರಡು ಅರ್ಧಶತಕಗಳನ್ನೂ ದಾಖಲಿಸಿದ್ದಾರೆ.

- ಐಪಿಎಲ್‌ನಲ್ಲಿ ಎರಡನೇ ಬಾರಿ ಆಶಿಶ್ ನೆಹ್ರಾ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.

- 15 ರನ್ನುಗಳಿಗೆ 3 ವಿಕೆಟ್ ಪಡೆಯುವ ಮೂಲಕ ರಾಜತ್ ಭಾಟಿಯಾ ಟ್ವೆಂಟಿ-20ಯಲ್ಲಿ ತನ್ನ ವೈಯಕ್ತಿಕ ಪ್ರದರ್ಶನವನ್ನು ಉತ್ತಮಪಡಿಸಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ