ಟೆಸ್ಟ್ ರ‌್ಯಾಂಕಿಂಗ್‌ನಲ್ಲಿ ಗಂಭೀರ್‌ಗೆ 3ನೇ ಸ್ಥಾನಕ್ಕೆ ಭಡ್ತಿ

ಮಂಗಳವಾರ, 19 ಮೇ 2009 (19:56 IST)
ಇಂಗ್ಲೆಂಡ್ ವಿರುದ್ಧ ಕಳಪೆ ಪ್ರದರ್ಶನ ನೀಡಿದ ವೆಸ್ಟ್‌ಇಂಡೀಸ್‌ನ ಶಿವನಾರಾಯಣೆ ಚಂದರಪಾಲ್ ಐಸಿಸಿ ಟೆಸ್ಟ್ ರ‌್ಯಾಂಕಿಂಗ್‌ನಲ್ಲಿ ಕುಸಿತ ಕಂಡಿದ್ದು, ಟೀಮ್ ಇಂಡಿಯಾ ಆರಂಭಿಕ ಆಟಗಾರ ಗೌತಮ್ ಗಂಭೀರ್ ಕ್ರೀಡಾಜೀವನದ ಅತ್ಯುತ್ತಮ ರ‌್ಯಾಂಕಿಂಗ್ ಪಡೆದುಕೊಂಡಿದ್ದಾರೆ.

ನಾಲ್ಕನೇ ಸ್ಥಾನದಲ್ಲಿದ್ದ ಗಂಭೀರ್ ಒಂದು ಸ್ಥಾನ ಮೇಲಕ್ಕೇರುವ ಮೂಲಕ ಚಂದರಪಾಲ್‌ರನ್ನು ಕೆಳಕ್ಕೆ ತಳ್ಳಿದ್ದಾರೆ. ಅವರು ಇಂಗ್ಲೆಂಡ್ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿರಲಿಲ್ಲ. ಚಂದರಪಾಲ್‌ರ ಸ್ಥಾನವೀಗ ನಾಲ್ಕನೇಯದ್ದು.

ಉಳಿದಂತೆ ಸಚಿನ್ ತೆಂಡೂಲ್ಕರ್ (13), ವಿವಿಎಸ್ ಲಕ್ಷ್ಮಣ್ (15) ಮತ್ತು ವೀರೇಂದ್ರ ಸೆಹ್ವಾಗ್ (20) ಸ್ಥಾನಗಳಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಬ್ಯಾಟಿಂಗ್ ವಿಭಾಗದ ನಂ.1 ಸ್ಥಾನದಲ್ಲಿ ಪಾಕಿಸ್ತಾನ ನಾಯಕ ಯೂನಿಸ್ ಖಾನ್ ಹಾಗೂ ಎರಡನೇ ಸ್ಥಾನದಲ್ಲಿ ಶ್ರೀಲಂಕಾದ ಕುಮಾರ ಸಂಗಕ್ಕರ ಸ್ಥಿರವಾಗಿದ್ದಾರೆ.

ಬೌಲರುಗಳ ಪಟ್ಟಿಯಲ್ಲಿ ಇಶಾಂತ್ ಶರ್ಮಾ ಅಗ್ರ 20ರೊಳಗೆ ಸೇರ್ಪಡೆಯಾಗಿದ್ದಾರೆ. ಹರಭಜನ್ ಸಿಂಗ್ ಅಗ್ರ 10ರೊಳಗೆ ಆರನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಹಿರಿಯ ವೇಗಿ ಜಹೀರ್ ಖಾನ್ 11ನೇ ಸ್ಥಾನ ಪಡೆದಿದ್ದಾರೆ.

ಈ ವಿಭಾಗದಲ್ಲಿ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ನಂ.1 ಸ್ಥಾನವನ್ನು ಬಿಟ್ಟುಕೊಟ್ಟಿಲ್ಲ. ನಂತರದ ಸ್ಥಾನಗಳಲ್ಲಿ ಕ್ರಮವಾಗಿ ಡೇಲ್ ಸ್ಟೈನ್, ಮಿಚ್ಚೆಲ್ ಜಾನ್ಸನ್, ಸ್ಟುವರ್ಟ್ ಕ್ಲಾರ್ಕ್, ಮಕಾಯ ಎನ್‌ಟಿನಿ ಕಾಣಿಸಿಕೊಂಡಿದ್ದಾರೆ.

ಆಲ್-ರೌಂಡರ್ಸ್ ಪಟ್ಟಿಯ ಅಗ್ರ 5ರಲ್ಲಿ ಯಾವೊಬ್ಬ ಭಾರತೀಯನೂ ಸ್ಥಾನ ಪಡೆದಿಲ್ಲ. ಆದರೆ 9 ಮತ್ತು 10ನೇ ಸ್ಥಾನದಲ್ಲಿ ಹರಭಜನ್ ಸಿಂಗ್ ಮತ್ತು ಇರ್ಫಾನ್ ಪಠಾಣ್ ಕಾಣಿಸಿಕೊಂಡಿದ್ದಾರೆ. ಈ ವಿಭಾಗದಲ್ಲಿ ಮುಂಚೂಣಿ ಸ್ಥಾನ ದಕ್ಷಿಣ ಆಫ್ರಿಕಾದ ಜಾಕ್ವಾಸ್ ಕ್ಯಾಲಿಸ್‌ರದ್ದು.

ಅದೇ ಹೊತ್ತಿಗೆ ವೆಸ್ಟ್‌ಇಂಡೀಸ್ ವಿರುದ್ಧ ಜಯಭೇರಿ ಬಾರಿಸಿದ ಇಂಗ್ಲೆಂಡ್ ತಂಡದ ರ‌್ಯಾಂಕಿಂಗ್‌ನಲ್ಲಿ ಪಾಕಿಸ್ತಾನವನ್ನು ಕೆಳಕ್ಕೆ ತಳ್ಳಿ ಐದನೇ ಸ್ಥಾನವನ್ನು ಅಲಂಕರಿಸಿದೆ.

ಟೆಸ್ಟ್ ಸರಣಿಯನ್ನು ಜಯಿಸುವುದರೊಂದಿಗೆ ಮೂರು ರ‌್ಯಾಂಕಿಂಗ್ ಅಂಕಗಳನ್ನು ಪಡೆದುಕೊಂಡ ಇಂಗ್ಲೆಂಡ್ ತಂಡವು ಪಾಕಿಸ್ತಾನವನ್ನು ಆರನೇ ಸ್ಥಾನಕ್ಕೆ ನೂಕಿದೆ. ವೆಸ್ಟ್‌ಇಂಡೀಸ್ ಸ್ಥಾನದಲ್ಲಿ ಯಾವುದೇ ಬದಲಾವಣೆಯಾಗದೆ ಏಳನೇ ಸ್ಥಾನದಲ್ಲಿ ಮುಂದುವರಿದಿದೆ.

ವೆಬ್ದುನಿಯಾವನ್ನು ಓದಿ