ಟ್ವೆಂಟಿ20: ನ್ಯೂಜಿಲಾಂಡ್‌ ವಿರುದ್ಧ ದ.ಆಫ್ರಿಕಾಗೆ ಗೆಲುವು

ಬುಧವಾರ, 10 ಜೂನ್ 2009 (09:26 IST)
ಇಂಗ್ಲೆಂಡ್‌ನ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಮಂಗಳವಾರ ರಾತ್ರಿ ನಡೆದ ಟ್ವೆಂಟಿ-20 ವಿಶ್ವಕಪ್ ಕ್ರಿಕೆಟ್‌ನ 'ಡಿ' ಗುಂಪಿನ ಪಂದ್ಯದಲ್ಲಿ ಪ್ರಬಲ ದಕ್ಷಿಣ ಆಫ್ರಿಕಾ ತಂಡವು ನ್ಯೂಜಿಲಾಂಡ್ ವಿರುದ್ಧ ಒಂದು ರನ್ನಿನ ರೋಚಕ ಜಯ ಗಳಿಸಿದೆ. ದಕ್ಷಿಣ ಆಫ್ರಿಕಾದ 128ರನ್‌ಗಳಿಗೆ ಉತ್ತರವಾಗಿ ಕಿವೀಸ್‌ ಪಡೆ ಕೇವಲ 127ರನ್‌ ಗಳಿಸಲಷ್ಟೇ ಶಕ್ತವಾಯಿತು. ಉತ್ತಮ ದಾಳಿ ಸಂಘಟಿಸಿದ ದಕ್ಷಿಣ ಆಫ್ರಿಕಾದ ವಾನ್ ಡರ್ ಮೆರ್ವೆ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಅರ್ಹರಾದರು.

ಗಾಯಾಳು ವೆಟರಿ ಅನುಪಸ್ಥಿತಿಯಲ್ಲಿ ನ್ಯೂಜಿಲಾಂಡ್‌ನ ಉಸ್ತುವಾರಿ ನಾಯಕ ಬ್ರೆಡಂ ಮೆಕಲಮ್ ಟಾಸ್ ಗೆದ್ದು ಮೊದಲು ಪೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ದಕ್ಷಿಣ ಆಫ್ರಿಕಾದ ಆರಂಭ ಉತ್ತಮವಾಗಿತ್ತು. ನಾಯಕ ಗ್ರೆಮ್ ಸ್ಮಿತ್ ಹಾಗೂ ಆಲ್‌ರೌಂಡರ್ ಆಟಗಾರ ಜಾಕ್ವಾಸ್ ಕ್ಯಾಲಿಸ್ ಸೇರಿ ಮೊದಲ ವಿಕೆಟ್‌ಗೆ 7.1 ಓವರ್‌ಗಳಲ್ಲಿ 49ರನ್ ಒಟ್ಟು ಸೇರಿಸಿದರು. ಆದಾಗ ಕ್ಯಾಲಿಸ್(23ಎಸೆತ, 24ರನ್) ರನೌಟ್‌ಗೆ ಬಲಿಯಾದರು. ಅದರ ಹಿಂದೆಯೇ ಹರ್ಷಲ್ ಗಿಬ್ಸ್(3), ಮೆರ್ಮೆ(0) ಸಹ ಬೇಗನೇ ಪೆವಿಲಿಯನ್ ಸೇರಿಕೊಂಡರು. ನಾಯಕ ಸ್ಮಿತ್ 35 ಎಸೆತಗಳನ್ನು ಎದುರಿಸಿ 33 ರನ್ ಗಳಿಸಿ ಬಟ್ಲರ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು.

ನಂತರ ಬಂದ ಜೆ.ಪಿ ಡುಮಿನಿ ಸ್ವಲ್ಪ ಪ್ರತಿರೋಧ ತೋರಿ 23 ಎಸೆತಗಳಲ್ಲಿ 29ರನ್ ಗಳಿಸಿದರು. ಅವರ ಈ ಇನ್ನಿಂಗ್ಸ್‌ನಲ್ಲಿ ಎರಡು ಸಿಕ್ಸರ್ ಹಾಗೂ ಒಂದು ಬೌಂಡರಿ ಸೇರಿದ್ದವು. ಕಳೆದ ಮ್ಯಾಚ್ ಹೀರೊ ಎ ಬಿ ಡಿ ವಿಲಿಯರ್ಸ್ ಎಂಟು ಎಸೆತಗಳಲ್ಲಿ 15 ರನ್ ಗಳಿಸಿ ರನೌಟ್‌ ಆದರು. ಕೊನೆಗೆ ವಿಕೆಟ್ ಕೀಪರ್ ಬ್ಯಾಟ್ಸ್‌ಮಾನ್ ಬೌಚರ್ (6), ಮೋರ್ಕೆಲ್ ಅಜೇಯ 10 ಹಾಗೂ ಬೋಥಾ ಅಜೇಯ 2ರನ್ ಗಳಿಸಿದರು.

ಒಟ್ಟಾರೆ ದಕ್ಷಿಣ ಆಫ್ರಿಕಾ ನಿಗದಿತ 20 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 128ರನ್ ಗಳಿಸಿತು. ಉತ್ತಮ ದಾಳಿ ಸಂಘಟಿಸಿದ ಬಟ್ಲರ್ ನಾಲ್ಕು ಓವರ್‌ಗಳಲ್ಲಿ 13ರನ್ ನೀಡಿ ಎರಡು ವಿಕೆಟ್ ಪಡೆದರು. ಮಿಲ್ಸ್, ಸ್ಟೈರಿಸ್, ಮೆಕಲಮ್ ಸಹ ತಾಲಾ ಒಂದೊಂದು ವಿಕೆಟ್ ಪಡೆದರು.

ಜವಾಬು ನೀಡಲಾರಂಭಿಸಿದ ನ್ಯೂಜಿಲಾಂಡ್ ಆರಂಭ ಅಷ್ಟು ಉತ್ತಮವಾಗಿರಲಿಲ್ಲ. ಆರು ರನ್ ಗಳಿಸಿದ ಗುಪ್ಟಿಲ್ ಸ್ಟೈನ್ ಎಸೆತಕ್ಕೆ ಬಲಿಯಾದರು. ಅದರ ಹಿಂದೆಯೇ ಬ್ರೂಮ್ ಸಹ ಒಂದು ರನ್ ಗಳಿಸಿ ಕ್ಯಾಲಿಸ್‌ಗೆ ಬಲಿಯಾದರು. ನಂತರ ಬಂದ ಟೇಲರ್ ಜತೆ ಸೇರಿ ನಾಯಕ ಮೆಕಲಮ್ ಮ‌ೂರನೇ ವಿಕೆಟ್‌ಗೆ 59ರನ್ ಒಟ್ಟು ಸೇರಿಸಿದರು. ಟೇಲರ್ ಎರಡು ಬೌಂಡರಿಗಳ ನೆರವಿನಿಂದ 31 ಎಸೆತಗಳಲ್ಲಿ 22ರನ್ ಬಾರಿಸಿದರು.

ಒಂದು ತುದಿಯಿಂದ ಉತ್ತಮ ಆಟದ ಪ್ರದರ್ಶನವಿತ್ತ ಉಸ್ತುವಾರಿ ನಾಯಕ ಮೆಕಲಮ್‌ ಆರು ಬೌಂಡರಿಗಳ ನೆರವಿನಿಂದ 54 ಎಸೆತಗಳಲ್ಲಿ 57ರನ್ ಬಾರಿಸಿದರು. ಆದರೆ ಇದು ಗೆಲುವಿಗೆ ಸಹಕಾರಿಯಾಗಲಿಲ್ಲ.


ಕಿವೀಸ್‌ಗೆ ಅಂತಿಮ ಓವರ್‌ನಲ್ಲಿ ಗೆಲ್ಲಲು 15ರನ್ ಅವಶ್ಯಕತೆಯಿತು. ಪಾರ್ನೆಲ್ ಎಸೆದ ಕೊನೆಯ ಓವರ್‌ನಲ್ಲಿ ಕಿವೀಸ್‌ಗೆ 13ರನ್ ಗಳಿಸಲಷ್ಟೇ ಸಾಧ್ಯವಾಯಿತು. ಆಕ್ರಮಣಕಾರಿಯಾಗಿ ಆಡಿದ ಜೆಕಬ್ ಒರಮ್ 18ಎಸೆತಗಳಲ್ಲಿ 24ರನ್ ಬಾರಿಸಿ ಕೊನೆಯ ಎಸೆತದಲ್ಲಿ ರನೌಟ್ ಆದರು. ಸ್ಟೈರಿಸ್ 7ರನ್ ಗಳಿಸಿ ಅಜೇಯರಾಗುಳಿದರು. ಈ ಮ‌ೂಲಕ ನ್ಯೂಜಿಲಾಂಡ್ ವಿರುದ್ಧ ದಕ್ಷಿಣ ಆಫ್ರಿಕಾ ಒಂದು ರನ್‌ನ ರೋಚಕ ಜಯ ದಾಖಲಿಸಿತು.

ದಕ್ಷಿಣ ಆಫ್ರಿಕಾ ಪರ ಕೇವಲ ನಾಲ್ಕು ಓವರ್‌ಗಳಲ್ಲಿ 14ರನ್ ನೀಡಿ ಎರಡು ಪ್ರಮುಖ ವಿಕೆಟ್ ಕಿತ್ತ ವಾನ್ ಡರ್ ಮೆರ್ವೆ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಅರ್ಹರಾದರು. ಕ್ಯಾಲಿಸ್, ಸ್ಟೈನ್ ಸಹ ತಲಾ ಒಂದೊಂದು ವಿಕೆಟ್ ಕಿತ್ತರು.

ವೆಬ್ದುನಿಯಾವನ್ನು ಓದಿ